ಹೊಸದಿಗಂತ ಡಿಜಿಟಲ್ ಡೆಸ್ಕ್:
ತಿರುಪತಿ ಕಾಲ್ತುಳಿತ ದುರಂತ ಪ್ರಕರಣ ಎಲ್ಲರಲ್ಲಿ ಆತಂಕ ಮೂಡಿಸಿದ್ದು, ಈ ಬೆನ್ನಲ್ಲೇ ಬೆಂಗಳೂರಿನ ಟಿಟಿಡಿ ದೇವಸ್ಥಾನದ (TTD Temple) ಭದ್ರತೆಯನ್ನು ಪೊಲೀಸರು ಪರಿಶೀಲಿಸಿದ್ದಾರೆ.
ನಾಳೆ ವೈಕುಂಠ ಏಕಾದಶಿ ಹಿನ್ನೆಲೆ ಭಕ್ತರ ಸಂಖ್ಯೆ ಹೆಚ್ಚಳವಾಗಿದೆ. ಟಿಟಿಡಿ ದೇವಸ್ಥಾನದಲ್ಲಿ ಭಕ್ತರಿಗೆ ದರುಶನವ್ಯವಸ್ಥೆ ಬಗ್ಗೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ರಸ್ತೆಯುದ್ದಕ್ಕೂ ಬ್ಯಾರಿಕೇಡ್‌ಗಳ ಅಳವಡಿಕೆ ಮಾಡಲಾಗಿದೆ. ದೇವಸ್ಥಾನದ ಅಕ್ಕಪಕ್ಕ ರಸ್ತೆಯ ವಾಹನಗಳನ್ನು ತೆರವು ಮಾಡಿದ್ದಾರೆ.
ಟಿಟಿಡಿ ದೇವಸ್ಥಾನದ ಅಧೀಕ್ಷಕಿ ಜಯಂತಿ ಮಾತನಾಡಿ, ತಿರುಪತಿ ಪ್ರಕರಣದ ಬಳಿಕ ಈಗ ಪೊಲೀಸರು ಬಂದು ಪರಿಶೀಲನೆ ಮಾಡಿದರು. ಕ್ಯೂ ಸಿಸ್ಟಮ್ ಹೆಚ್ಚಳಕ್ಕೆ ಹೇಳಿದ್ದಾರೆ. ಕ್ಯೂ ಸಿಸ್ಟಮ್ ಇನ್ನೂ ಹೆಚ್ಚು ಮಾಡ್ತೀವಿ. ಬ್ಯಾರಿಕೇಡ್ ಹೆಚ್ಚು ಹಾಕೋಕೆ ಹೇಳಿದ್ದಾರೆ. ಅದರ ವ್ಯವಸ್ಥೆ ಮಾಡಿದ್ದೇವೆ. ಜೊತೆಗೆ ಹೆಚ್ಚು ಜನ ಸಿಬ್ಬಂದಿ ನೇಮಕ ಮಾಡುವಂತೆ ಸೂಚಿಸಿದ್ದಾರೆ.
ಟಿಟಿಡಿ ದೇವಸ್ಥಾನದಲ್ಲಿ ಪಾಸ್ ಕೊಡಿ ಎಂದು ಸ್ಥಳೀಯರು ಗಲಾಟೆ ಮಾಡಿದ್ದಾರೆ. ಅಕ್ಕಪಕ್ಕದ ಮನೆಯವರಿಗೆ ಪಾಸ್ ಕೊಡಿ ಎಂದು ಕೇಳಿದ್ದಾರೆ. ಆದರೆ, ಈ ಬಾರಿ ವಿಐಪಿ ಪಾಸ್ ನೀಡಲ್ಲ ಅಂತಾ ಅಧೀಕ್ಷಕಿ ಮಾಹಿತಿ ನೀಡಿದ್ದಾರೆ.