ತಿರುಪತಿ ಕಾಲ್ತುಳಿತ ವಿಐಪಿ ಕಲ್ಚರ್ ನಿಲ್ಲಬೇಕು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ: ಪವನ್‌ ಕಲ್ಯಾಣ್ ಆಕ್ರೋಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಿರುಪತಿಯಲ್ಲಿ ಗುರುವಾರ ರಾತ್ರಿ ವೈಕುಂಠದ್ವಾರ ದರ್ಶನ ಟೋಕನ್‌ಗಾಗಿ ಹಾಕಲಾಗಿದ್ದ ಕೌಂಟರ್‌ಗಳ ಬಳಿ ನಡೆದ ಕಾಲ್ತುಳಿತದಲ್ಲಿ (Tirupati Stampede) ಆರು ಭಕ್ತರು ಮೃತಪಟ್ಟಿದ್ದಾರೆ. ಈ ಘಟನೆಗೆ ಆಂಧ್ರ ಸರ್ಕಾರ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಮೃತರ ಕುಟುಂಬಗಳಿಗೆ ತಲಾ ರೂ.25 ಲಕ್ಷ ಪರಿಹಾರ ನೀಡುವುದಾಗಿ ಸಚಿವ ಅಂಗಣಿ ಸತ್ಯಪ್ರಸಾದ್ ಘೋಷಿಸಿದರು.

ಇದೀಗ ತಿರುಪತಿಯಲ್ಲಿ ಗಾಯಗೊಂಡಿದ್ದವರನ್ನು ನೋಡಲು ಸ್ವಿಮ್ಸ್ ಆಸ್ಪತ್ರೆಗೆ ಡಿಸಿಎಂ ಪವನ್‌ ಕಲ್ಯಾಣ್ ಮತ್ತು ಮಾಜಿ ಸಿಎಂ ಜಗನ್‌ ಮೋಹನರೆಡ್ಡಿ ಆಗಮಿಸಿದ್ದು, ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಕಾಲ್ತುಳಿತದಿಂದ ಆರು ಮಂದಿ ಸಾವನ್ನಪ್ಪಿದ ಘಟನೆಗೆ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಜನತೆಯಲ್ಲಿ ಕ್ಷಮೆಯಾಚಿಸಿದರು. ಇನ್ನು ಅಧಿಕಾರಿಗಳ ವಿರುದ್ಧ ವಾಗ್ದಾಳಿ ನಡೆಸಿದ ಡಿಸಿಎಂ, ಟಿಟಿಡಿ ಅಧ್ಯಕ್ಷರು, ಇಒ, ಜೆಇಒ ಅವರಂತಹ ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡಿದ್ದರೆ ಈ ದುರಂತ ನಡೆಯುತ್ತಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನು ಕಾಲ್ತುಳಿತ ಸಂತ್ರಸ್ತರನ್ನು ಭೇಟಿ ಮಾಡಲು ಪವನ್ ಕಲ್ಯಾಣ್ ಆಸ್ಪತ್ರೆಗೆ ಬರುತ್ತಿದ್ದಂತೆ, ಅಭಿಮಾನಿಗಳು ಸಹ ಬರಲಾರಂಭಿಸಿದ್ದರು. ಈ ವೇಳೆ ಅಸಮಾಧಾನಗೊಂಡ ಪವನ್ ಕಲ್ಯಾಣ್‌, ಇಷ್ಟು ದೊಡ್ಡ ಅವಘಡ ಸಂಭವಿಸಿದರೂ ನಿಮಗೆ ಜವಾಬ್ದಾರರಾಗಿರಲು ಸಾಧ್ಯವಿಲ್ಲವೇ? ಎಂದು ಅಭಿಮಾನಿಗಳನ್ನು ತರಾಟೆಗೆ ತೆಗೆದುಕೊಂಡರು.

ವೈಕುಂಠ ಏಕಾದಶಿ ದರ್ಶನ ಟೋಕನ್‌ಗಳ ನಿರ್ವಹಣೆಯಲ್ಲಿ ಇಒ ಶ್ಯಾಮಲಾ ರಾವ್ ಮತ್ತು ಜೆಇಒ ವೆಂಕಯ್ಯ ಚೌಧರಿ ವಿಫಲರಾಗಿದ್ದಾರೆ. ಈ ಘಟನೆಯ ಬಗ್ಗೆ ತೀವ್ರವಾಗಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ನೂಕುನುಗ್ಗಲು ಉಂಟಾದಾಗ ಜನಸಂದಣಿಯನ್ನು ಸಮರ್ಥವಾಗಿ ನಿರ್ವಹಿಸಲು ಸಾಧ್ಯವಾಗದಿರುವುದು ಅಧಿಕಾರಿಗಳ ನಿರ್ಲಕ್ಷ್ಯವನ್ನು ಸ್ಪಷ್ಟವಾಗಿ ತೋರಿಸುತ್ತದೆ ಎಂದು ಪವನ್ ಕಲ್ಯಾಣ್‌ ಹೇಳಿದರು. “ತಪ್ಪಾಗಿದೆ, ಅದಕ್ಕಾಗಿ ಕ್ಷಮಿಸಬಹುದು. ಆದರೆ ಇಷ್ಟೊಂದು ಅಧಿಕಾರಿಗಳಿದ್ದರೂ 6 ಜೀವಗಳನ್ನು ಕಳೆದುಕೊಳ್ಳುವುದು ಸೂಕ್ತವಲ್ಲ’’ ಎಂದರು.

ಈ ದುರಂತದಿಂದ ರಾಜ್ಯದಲ್ಲಿ ಭಕ್ತರ ರಕ್ಷಣೆ, ಸೌಲಭ್ಯಗಳ ಬಗ್ಗೆ ಹಲವು ಪ್ರಶ್ನೆಗಳು ಸದ್ಯ ಎದ್ದಿವೆ. ಘಟನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್, ತಪ್ಪಿತಸ್ಥರ ಪತ್ತೆಗೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಆದೇಶಿಸಿದರು. ‘ಜನರ ಜೀವನದ ಮೌಲ್ಯವನ್ನು ಗುರುತಿಸಿ ಮುಂದೆ ಇಂತಹ ಘಟನೆಗಳು ನಡೆಯದಂತೆ ಕ್ರಮಕೈಗೊಳ್ಳಬೇಕು’ ಎಂದು ಸ್ಪಷ್ಟಪಡಿಸಿದರು.

ಸಾಮಾನ್ಯ ಭಕ್ತರು ಕ್ಷೇಮವಾಗಿ ಮನೆಗೆ ಹೋಗಬೇಕು. ಈ ದೃಷ್ಟಿಯಲ್ಲಿ ಟಿಟಿಡಿಯಲ್ಲಿ ಮುಂದಿನ ದಿನಗಳಲ್ಲಿ ಕೆಲಸ ಆಗಬೇಕು. ಮುಂದೆ ಇಂತಹ ದುರ್ಘಟನೆ ಆಗದಂತೆ ನೋಡಿಕೊಳ್ಳೋದು ಬಹಳ ಮುಖ್ಯ. ಸದ್ಯ ಮೃತರ ಕುಟುಂಬದವರನ್ನ ಮಾತಾಡಿಸಿದೆ. ಗಾಯಾಳುಗಳ ಚೇತರಿಕೆ ಬಳಿಕ ಅವರಿಗೆ ಟಿಟಿಡಿ ಮೂಲಕ ದರ್ಶನ ಕೊಡಿಸಲಾಗುವುದು‌, ಆದ್ರೆ ವಿಐಪಿ ಸೇವೆ ಇಲ್ಲಿಗೆ ನಿಲ್ಲಬೇಕು ಎಂದು ಹೇಳಿದ್ದಾರೆ.

ಸದ್ಯ ತಿರುಪತಿಯಲ್ಲಿ ವಿಐಪಿ ಕಲ್ಚರ್ ಇದೆ. ಅದನ್ನ ಕಾಮನ್ ಮ್ಯಾನ್ ಕಲ್ಚರ್ ಮಾಡಬೇಕು. ಜನ ಹೀಗೆ ಕಾಯಬಾರದು ಎಂದು ಪವನ್ ಕಲ್ಯಾಣ್ ಮಾಧ್ಯಮದ ಮುಂದೆ ಹೇಳಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!