Wednesday, August 17, 2022

Latest Posts

ಟಿಎಂಸಿ ಖೇಲ್ ಖತಮ್, ವಿಕಾಸ್ ಶುರು: ಪಶ್ಚಿಮ ಬಂಗಾಳದಲ್ಲಿ ಪ್ರಧಾನಿ ಮೋದಿ ಘರ್ಜನೆ

ಹೊಸ ದಿಗಂತ ಆನ್ ಲೈನ್ ಡೆಸ್ಕ್: 

ಟಿಎಂಸಿ ಖೇಲ್ ಖತಮ್, ವಿಕಾಸ್ ಶುರು. ಯಾವುದೇ ಭಯವಿಲ್ಲದೆ ಧೈರ್ಯವಾಗಿ ಬಿಜೆಪಿಗೆ ಮತ ನೀಡಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪಶ್ಚಿಮ ಬಂಗಾಳದ ಬ್ರಿಗೇಡ್ ಪರೇಡ್ ಗ್ರೌಂಡ್ಸ್‌ನಲ್ಲಿ ನಡೆಯುತ್ತಿರುವ ಬಿಜೆಪಿಯ ಬೃಹತ್ ರ್‍ಯಾಲಿಯಲ್ಲಿ ಮಾತನಾಡಿದ ಅವರು, ಕೆಟ್ಟ ಆಡಳಿತದ ವಿರುದ್ಧ ಮತ ಚಲಾಯಿಸಿ ಎಂದು ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಈ ಜನರು ಸಾಕಷ್ಟು ಅನುಭವ ಇರುವವರು, ಬಹಳಷ್ಟು ಆಟವಾಡುತ್ತಾರೆ, ಬಹಳಷ್ಟು ಭ್ರಷ್ಟಾಚಾರ ಮಾಡಿದ್ದಾರೆ ಹಾಗೂ ಬಂಗಾಳದ ಜನರನ್ನು ಲೂಟಿ ಮಾಡಿದ್ದಾರೆ. ಅಂಫಾನ್‌ ಪರಿಹಾರದ ಹಣವನ್ನೂ ಕೊಳ್ಳೆ ಹೊಡೆದಿದ್ದಾರೆ. ‘ಭ್ರಷ್ಟಾಚಾರದ ಒಲಿಂಪಿಕ್ಸ್‌’ ಸ್ಪರ್ಧೆಯನ್ನೇ ಆಯೋಜಿಸಬಹುದು ಅಷ್ಟೊಂದು ಬಗೆಯ ಹಗರಣಗಳನ್ನು ನಡೆಸಿದ್ದೀರಿ. ಜನರು ಕಷ್ಟ ಪಟ್ಟು ದುಡಿದ ಹಣ ಹಾಗೂ ಅವರ ಜೀವದ ಎದುರು ಆಟವಾಡಿದ್ದೀರಿ. ಈಗ ಟಿಎಂಸಿಯ ಆಟ ಮುಗಿದಿದೆ ಹಾಗೂ ವಿಕಾಸ ಶುರುವಾಗಿದೆ….ಕೆಟ್ಟ ಆಡಳಿತದ ವಿರುದ್ಧ ಮತ ನೀಡಿ, ಬಿಜೆಪಿಗೆ ಮತ ನೀಡಿ ಎಂದು ಮೋದಿ ಕರೆ ನೀಡಿದರು.

ಮಮತಾ ದೀದಿ, ಕೆಲ ದಿನಗಳ ಹಿಂದೆ ನೀವು ಸ್ಕೂಟಿ ಓಡಿಸಿದ್ದೀರಿ. ಆದರೆ ಅಂದು ಸ್ಕೂಟಿಯಿಂದ ಬಿದ್ದು ನಿಮಗೆ ಪೆಟ್ಟಾಗದಿರಲೆಂದು ಎಲ್ಲರೂ ಪ್ರಾರ್ಥಿಸಿದ್ದರು. ಒಂದು ವೇಳೆ ನೀವು ಅವತ್ತು ವಾಹನದಿಂದ ಏನಾದರೂ ಬಿದ್ದು ಪೆಟ್ಟು ಮಾಡಿಕೊಂಡಿದ್ದರೆ, ಆ ಸ್ಕೂಟಿ ತಯಾರಾದ ರಾಜ್ಯದ ವಿರುದ್ಧ ನೀವು ದ್ವೇಷ ಕಾರುವ ಸಂಭವವಿತ್ತು. ಅವತ್ತು ನಿಮ್ಮ ಸ್ಕೂಟಿ ಭವಾನಿಪೋರಗೆ ಹೋಗುವ ಬದಲು ನಂದಿಗ್ರಾಮನತ್ತ ತಿರುವು ತೆಗೆದುಕೊಂಡಿತು. ಯಾರಿಗೂ ಪೆಟ್ಟಾಗದಿರಲಿ, ಎಲ್ಲರೂ ಚೆನ್ನಾಗಿರಲಿ ಎಂಬುದೇ ನನ್ನ ಹಾರೈಕೆಯಾಗಿದೆ. ಆದರೆ ನಿಮ್ಮ ಸ್ಕೂಟಿ ನಂದಿಗ್ರಾಮದಲ್ಲಿ ಪಲ್ಟಿಯಾಗುವುದೇ ನಿಮ್ಮ ಹಣೆಬರಹದಲ್ಲಿ ಬರೆದಿದ್ದರೆ ಅದಕ್ಕೆ ನಾನೇನೂ ಮಾಡಲಾಗುವುದಿಲ್ಲ ಎಂದರು.
ಈ ಬ್ರಿಗೇಡ್ ಪರೇಡ್​ ಮೈದಾನವು ಬಂಗಾಲದ ಹಲವಾರು ದಿಗ್ಗಜ ನೇತಾರರ ಮಾತುಗಳಿಗೆ ಸಾಕ್ಷಿಯಾಗಿದೆ. ಹಾಗೆಯೇ ಬಂಗಾಲದ ದುಸ್ಥಿತಿಗೆ ಕಾರಣರಾದವರನ್ನೂ ನೋಡಿದೆ. ಆದರೆ ಪಶ್ಚಿಮ ಬಂಗಾಳದ ಜನತೆ ಉತ್ತಮ ಬದಲಾವಣೆಗಾಗಿ ತಮ್ಮ ಆಶಾಭಾವನೆಯನ್ನು ಮಾತ್ರ ಎಂದಿಗೂ ಬಿಟ್ಟಿಲ್ಲ ಎಂದು ಪ್ರಧಾನಿ ಮೋದಿ ಹೇಳಿದರು.

ಬಂಗಾಳದ ಜನರು ನಿಮ್ಮನ್ನು ‘ದೀದಿ’ (ಅಕ್ಕ) ಎಂದೇ ಪರಿಗಣಿಸಿದ್ದಾರೆ, ಆದರೆ ನೀವೇಕೆ ಸೋದರಳಿಯ ಅತ್ತೆಯಾಗಿಯೇ ಉಳಿದಿರಿ? ಬಂಗಾಳದ ಜನರು ನಿಮ್ಮಿಂದು ಇದೊಂದು ಪ್ರಶ್ನೆಯನ್ನಷ್ಟೇ ಕೇಳುತ್ತಿದ್ದಾರೆ ಎಂದು ಟೀಕಿಸಿದರು.
ನನ್ನ ಬಗ್ಗೆ ಸಾಕಷ್ಟು ಮಾತನಾಡಿದ್ದಾರೆ…ಕೆಲವು ಬಾರಿ ರಾವಣ, ಮತ್ತೆ ಕೆಲವು ಸಲ ರಾಕ್ಷಸ, ಇನ್ನೂ ಕೆಲವೊಮ್ಮೆ ಗೂಂಡಾ…. ದೀದಿ, ಯಾಕಿಷ್ಟು ಕೋಪ ನಿಮಗೆ?’ ಹಲವು ವರ್ಷಗಳಿಂದ ನಾನು ದೀದಿ ಅವರನ್ನು ಕಂಡಿದ್ದೇನೆ. ಎಡ ಪಕ್ಷಗಳ ವಿರುದ್ಧ ದನಿ ಎತ್ತಿದ ಅದೇ ವ್ಯಕ್ತಿಯಾಗಿ ಅವರು ಉಳಿದಿಲ್ಲ. ಅವರು ಯಾರದ್ದೋ ಮಾತುಗಳನ್ನೀಗ ಆಡುತ್ತಿದ್ದಾರೆ, ಅವರು ಯಾರದೋ ನಿಯಂತ್ರಣದಲ್ಲಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದರು.

ನೀವು ಮಮತಾ ದೀದಿಯನ್ನು ನಂಬಿದಿರಿ, ದೀದಿ ಮತ್ತು ಅವರ ಅನುಯಾಯಿಗಳಿಂದ ನಿಮ್ಮ ಕನಸುಗಳು ಚೂರುಚೂರಾಗಿವೆ. ಅವರಿಂದ ನಿಮ್ಮ ಕನಸು ಚೂರಾಗಿದೆ, ಬೆಳವಣಿಗೆ ಕುಂಟಿತವಾಗಿದೆ, ಇಲ್ಲಿನ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರವಾಗಿದೆ’ ಎಂದು ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರದ ವಿರುದ್ಧ ಮೋದಿ ವಾಗ್ದಾಳಿ ನಡೆಸಿದರು.
ನನ್ನ ವಿರೋಧಿಗಳು, ನಾನು ಗೆಳೆಯರಿಗಾಗಿ ಕೆಲಸ ಮಾಡುತ್ತೇನೆ. ನಾವು ಯಾರೊಂದಿಗೆ ಬೆಳೆದೆವೋ ಅವರು ನಮ್ಮ ಗೆಳೆಯರಾಗಿರುತ್ತಾರೆ. ನಾನು ಬಡತನದೊಂದಿಗೆ ಬೆಳೆದವನು. ಹಾಗಾಗಿ, ಬಡವರ ಕಷ್ಟ ನನಗೆ ಅರ್ಥವಾಗುತ್ತದೆ. ನಾನು ನನ್ನ ಗೆಳೆಯರಿಗಾಗಿ ಕೆಲಸ ಮಾಡುತ್ತೇನೆ. ಮತ್ತು ಅದನ್ನು ಮುಂದುವರಿಸುತ್ತೇನೆ . ಬಂಗಾಳಕ್ಕೆ ಶಾಂತಿ, ಸ್ವತಂತ್ರ ಮತ್ತು ಅಭಿವೃದ್ಧಿ ಬೇಕಿದೆ. 2047ರ ವೇಳಗೆ ಪಶ್ಚಿಮ ಬಂಗಾಳ ಮತ್ತೆ ದೇಶವನ್ನು ಮುನ್ನಡೆಸುವ ಬಂಗಾಳವಾಗಿ ಹೊರಹೊಮ್ಮಲಿದೆ. ಮುಂದಿನ 5 ವರ್ಷಗಳಲ್ಲಿ ಆಗಲಿರುವ ಅಭಿವೃದ್ಧಿ ಕಾರ್ಯಗಳೇ ಬಂಗಾಳದ ಮುಂದಿನ 25 ವರ್ಷದ ಅಭಿವೃದ್ಧಿಗೆ ಅಡಿಪಾಯ ಹಾಕಲಿವೆ ಎಂದರು.

ನಿಜವಾದ ಪರಿವರ್ತನೆಯನ್ನು (ಅಸೋಲ್ ಪೊರಿಬೋರ್ತನ್) ಖಚಿತ ಪಡಿಸುವುದು ನಮ್ಮ ಗುರಿಯಾಗಿದೆ. ರಾಜ್ಯದಲ್ಲಿ ಬಂಡವಾಳ ಹೂಡಿಕೆಯನ್ನು ಹೆಚ್ಚಿಸಿ, ಕೈಗಾರಿಕೋದ್ಯಮಗಳನ್ನು ಬೆಳೆಸುವುದು ಹಾಗೂ ಆ ಮೂಲಕ ರಾಜ್ಯದ ಪುನರುಜ್ಜೀವನ ಮಾಡುವುದು ನಮ್ಮ ಉದ್ದೇಶವಾಗಿದೆ. ರಾಜ್ಯದ ರೈತರು, ಉದ್ಯಮಿಗಳು ಸೇರಿದಂತೆ ಸಾಮಾನ್ಯ ಬಂಗಾಳಿ ಸಹೋದರ, ಸಹೋದರಿಯರ ಏಳಿಗೆಗಾಗಿ ಕೆಲಸ ಮಾಡುವುದಾಗಿ ನಿಮಗೆ ಭರವಸೆ ನೀಡುತ್ತಿದ್ದೇನೆ ಎಂದು ಮೋದಿ ನುಡಿದರು.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!