ಶಿಂಜೋ ಅಬೆ ಹತ್ಯೆ ಪ್ರಕರಣದಲ್ಲಿ ʼಅಗ್ನಿಪಥʼ ಯೋಜನೆಯನ್ನು ಎಳೆದು ತಂದ ತೃಣಮೂಲ ಕಾಂಗ್ರೆಸ್‌


ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 

ಇತ್ತೀಚೆಗೆ ಹತ್ಯೆಗೀಡಾದ ಜಪಾನಿನ ಮಾಜಿ ಪ್ರಧಾನಿ ಶಿಂಜೋ ಅಬೆ ಅವರ ಹತ್ಯೆ ಹಾಗೂ ಭಾರತ ಸರ್ಕಾರ ಘೋಷಿಸಿರುವ ʼಅಗ್ನಿಪಥʼ ಸೇನಾಯೋಜನೆ ನಡುವೆ ಸಂಬಂಧ ಕಲ್ಪಿಸುವ ಮೂಲಕ ತೃಣಮೂಲ ಕಾಂಗ್ರೆಸ್‌ ಪಕ್ಷವು ವಿವಾದ ಸೃಷ್ಟಿಸಿದ್ದು, ಜನರ ಆಕ್ರೋಶಕ್ಕೆ ತುತ್ತಾಗಿದೆ.
ಟಿಎಂಸಿ ಪಕ್ಷದ ಮುಖವಾಣಿ ‘ಜಾಗೋ ಬಾಂಗ್ಲಾ’ದಲ್ಲಿ ʼಶಿಂಜೋ ಅಬೆ ಹತ್ಯೆಯಲ್ಲಿ ಅಗ್ನಿಪಥದ ನೆರಳುʼ ಎಂಬ ಶೀರ್ಷಿಕೆಯಡಿ ಪ್ರಕಟವಾದ ಲೇಖನದಲ್ಲಿ ಅಬೆ ಹತ್ಯೆ ಪ್ರಕರಣದಲ್ಲಿ ಅಗ್ನಿಪಥ ಯೋಜನೆಯನ್ನು ಎಳೆದು ತರಲಾಗಿದೆ. ಲೇಖನದ ಸಾರಾಂಶ ಹೀಗಿದೆ. ಶಿಂಜೋ ಅಬೆ ಹಂತಕ ಟೆಟ್ಸುಯಾ ಯಮಗಾಮಿ ಜಪಾನ್‌ನ ಸಾಗರ ಸ್ವಯಂ ರಕ್ಷಣಾ ಪಡೆಗಳಲ್ಲಿ ಮೂರು ವರ್ಷಗಳ ಕಾಲ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡಿದ್ದಾನೆ. ಆದರೆ ಆ ಕೆಲಸವನ್ನು ಕಳೆದುಕೊಂಡ ಬಳಿಕ ನಿರುದ್ಯೋಗಿಯಾಗಿದ್ದು, ಆತನಿಗೆ ಯಾವುದೇ ಪಿಂಚಣಿಯೂ ದೊರೆತಿರಲಿಲ್ಲ. ಕೆಲಸವಿಲ್ಲದ, ಜೀವನ ನಿರ್ವಹಣೆಗೆ ಅಗತ್ಯವಿರುವ ನೆರವು ಸಿಗದ ಹತಾಶೆಯಿಂದ ಹಂತಕನು ಅಬೆಯನ್ನು ಗುರಿಯಾಗಿಸಿಕೊಂಡಿದ್ದಾನೆ ಎಂದು ವರದಿ ಹೇಳುತ್ತದೆ.
ಜಪಾನಿನ ಮಾದರಿಯಲ್ಲೇ ಮೋದಿ ಸರ್ಕಾರವು ರಕ್ಷಣಾ ಪಡೆಗಳಲ್ಲಿ ಅಲ್ಪಾವಧಿಗೆ ಯುವಕರನ್ನು ನೇಮಿಸಿಕೊಳ್ಳಲು ಉದ್ದೇಶಿಸಿದೆ ಮತ್ತು ನಾಲ್ಕು ವರ್ಷಗಳ ನಂತರ ಪಿಂಚಣಿ ಮತ್ತು ಇತರ ನಿವೃತ್ತಿ ಪ್ರಯೋಜನಗಳಿಲ್ಲದೆ ಅವರನ್ನು ಹೊರಹಾಕುತ್ತದೆ ಎಂದು  ಟಿಎಂಸಿ ಆರೋಪಿಸಿದೆ.
ಭಾರತದ ಅಗ್ನಿವೀರರೂ ನಾಲ್ಕು ವರ್ಷಗಳ ಬಳಿಕ ಯಮಗಾಮಿಯಂತಹದ್ದೇ ಪರಿಸ್ಥಿತಿ, ಖಿನ್ನತೆಗೆ ತಳ್ಳಲ್ಪಡುತ್ತಾರೆ. ಹತಾಶೆ ಹಾಗೂ ಅಭದ್ರತಾ ಭಾವ ಅವರನ್ನು ಕಾಡಲಿದೆ. ಕೇಂದ್ರವು ದೇಶದ ಯುವಕರನ್ನು ತಪ್ಪು ಮಾರ್ಗದತ್ತ ಮುನ್ನಡೆಸುತ್ತಿದೆ ಎಂದು  ಬರೆದು ಆಕ್ರೋಶ ವ್ಯಕ್ತಪಡಿಸಲಾಗಿದೆ.
ಟಿಎಂಸಿ ನಾಯಕ ಸುರೇಂದ್ರ ರಜಪೂತ್ ಸಹ ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಜಪಾನ್ ‌ಮಾಜಿ ಪ್ರಧಾನಿಯ ಮೇಲೆ ದಾಳಿ ಮಾಡುವಲ್ಲಿನ ಶೂಟರ್ ಉದ್ದೇಶ ಮತ್ತು ಅಗ್ನಿಪಥ್ ಯೋಜನೆ ನಡುವೆ ಹೋಲಿಕೆಗಳನ್ನು ಮಾಡಿದ್ದಾರೆ.
ಟಿಎಂಸಿ ಪ್ರತಿಪಾದನೆಗೆ ಜನರು ಹಾಗೂ ಬಿಜೆಪಿಯಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಪಶ್ಚಿಮ ಬಂಗಾಳದ ಬಿಜೆಪಿ ಮುಖ್ಯ ಸಚೇತಕ ಮನೋಜ್ ತಿಗ್ಗಾ ಅವರು ತೃಣಮೂಲ ಕಾಂಗ್ರೆಸ್‌ನ ಮುಖವಾಣಿ “ಜಾಗೋ ಬಾಂಗ್ಲಾ” ವಿರುದ್ಧ ವಾಗ್ದಾಳಿ ನಡೆಸಿದ್ದು,
ಟಿಎಂಸಿಗೆ ಯಾವಾಗಲೂ ರಾಜಕೀಯವನ್ನಷ್ಟೇ ನೋಡುತ್ತದೆ. ಅವರಿಗೆ ದೇಶದ ಮೇಲೆ ಕಿಂಚಿತ್ತೂ ಪ್ರೀತಿ ಇಲ್ಲ. ಈ ರೀತಿ ಬರೆಯುವವರು ಯಾರು? ಟಿಎಂಸಿ ದೇಶದ ಯುವಕರನ್ನು ದಾರಿತಪ್ಪಿಸುತ್ತದೆ. ಭಾರತದಲ್ಲಿ ನಿವೃತ್ತ ಯೋಧರು ಹತ್ಯೆಯಂತಹ ಅಪರಾಧದಲ್ಲಿ ತೊಡಗಿದ್ದನ್ನು ಕೇಳಿದ್ದೀರಾ? ಈಂತಹ ಆಧಾರರಹಿತ ಆರೋಪಗಳನ್ನು ಮಾಡುವ ಮುನ್ನ ಕೊಂಚ ಯೋಚಿಸಲಿ ಎಂದು ಕಿಡಿಕಾರಿದ್ದಾರೆ. ಸಾಮಾಜಿಕ ತಾಣಗಳಲ್ಲಿಯೂ ಟಿಎಂಸಿ ವಿರುದ್ಧ ಆಕ್ರೋಶಗಳು ವ್ಯಕ್ತವಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!