ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………
ಹೊಸ ದಿಗಂತ ವರದಿ, ಚಿಕ್ಕಮಗಳೂರು:
ಶೃಂಗೇರಿ ಉಪನೊಂದಣಾಧಿಕಾರಿ ಕಚೇರಿಯಲ್ಲಿ ನಡೆದಿದೆ ಎನ್ನಲಾದ ಉಗ್ರ ಸಂಘಟನೆ ಬೆಂಬಲಿತ ಸಂಸ್ಥೆಗೆ ಹಣ ವರ್ಗಾವಣೆ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಬುಧವಾರ ಅಪರ ಜಿಲ್ಲಾಧಿಕಾರಿ ರೂಪಾ ಅವರಿಗೆ ಮನವಿ ಸಲ್ಲಿಸಿದರು.
ಶೃಂಗೇರಿ ಉಪ ನೋಂದಣಾಧಿಕಾರಿ ಕಛೇರಿಯಲ್ಲಿ ಮುದ್ರಾಂಕ ಶುಲ್ಕವನ್ನು 2 ಬಿಲ್ಗಳಿಗೆ ಮತ್ತು ಒಂದೇ ಸಂಖ್ಯೆಯ 4 ಬಿಲ್ಗಳು ಸೇರಿ ಒಟ್ಟು 8 ಬಿಲ್ಗಳಿಂದ ಹಾಗೂ 6 ಓಚರ್ ಸಂಖ್ಯೆಗಳಿಂದ ರೂ.25,96,858 ಇವುಗಳನ್ನು ಆಲ್-ಇಮ್ರಾನ್ ಎಂಬ ಫಲಾನುಭವಿ ಖಾತೆಗೆ ವರ್ಗಾವಣೆಯಾಗಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.
ಆಲ್-ಇಮ್ರಾನ್ ಸಂಘಟನೆ ಉಗ್ರ ಬೆಂಬಲಿತ ಸಂಸ್ಥೆಯಾಗಿದ್ದು, ವಾಸ್ತವವಾಗಿ ಈ ಹೆಸರಿನ ಸಂಘಟನೆ ಶೃಂಗೇರಿಯಲ್ಲಿ ಇರುವುದಿಲ್ಲ. ರಾಜ್ಯಾದ್ಯಂತ ಉಪ ನೋಂದಣಾಧಿಕಾರಿ ಕಛೇರಿಯ ಮುಖಾಂತರ ಉಗ್ರ ಸಂಘಟನೆಗಳಿಗೆ ಹಣ ವರ್ಗಾವಣೆಯಾಗುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿ ಎಂದು ಪತ್ರದಲ್ಲಿ ಹೇಳಲಾಗಿದೆ.
ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಮುಖಾಂತರ ದೇಶ ವಿರೋಧಿ ಉಗ್ರ ಸಂಘಟನೆಗಳಿಗೆ ಜನರ ತೆರಿಗೆ ಹಣವನ್ನು ಸಂದಾಯ ಮಾಡುತ್ತಿರುವುದನ್ನು ಚಿಕ್ಕಮಗಳೂರು ಜಿಲ್ಲಾ ಯುವ ಮೋರ್ಚಾ ಘಟಕ ತೀವ್ರವಾಗಿ ಖಂಡಿಸುತ್ತದೆ ಎಂದಿದ್ದಾರೆ.
ಶೃಂಗೇರಿ ಸೇರಿದಂತೆ ರಾಜ್ಯದಲ್ಲಿರುವ ಎಲ್ಲ ಉಪ ನೋಂದಣಾಧಿಕಾರಿ ಕಛೇರಿಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ತನಿಖೆ ನಡೆಸಬೇಕು. ಹಾಗೆಯೇ ತಪ್ಪಿತಸ್ಥ ಅಧಿಕಾರಿಗಳಿಗೆ ಕಠಿಣ ಶಿಕ್ಷೆಯನ್ನು ವಿಧಿಸಬೇಕೆಂದು ಚಿಕ್ಕಮಗಳೂರು ಜಿಲ್ಲಾ ಯುವ ಮೋರ್ಚಾ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ರಾಜ್ಯದ ಮುಖ್ಯಮಂತ್ರಿಗಳು, ಗೃಹಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರಿಗೆ ಹಾಗೂ ಕಂದಾಯ ಸಚಿವರಿಗೆ ಈ ಮನವಿಯನ್ನು ಸಲ್ಲಿಸಲಾಗಿದೆ.
ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ್ ಕೋಟ್ಯಾನ್, ಜಿಲ್ಲಾ ಉಪಾಧ್ಯಕ್ಷ ಸಚಿನ್, ಜಿಲ್ಲಾ ಕಾರ್ಯದರ್ಶಿಗಳಾದ ಕೌಶಿಕ್, ಶಶಿ ಆಲ್ದೂರು ಇತರರು ಇದ್ದರು.