Sunday, March 7, 2021

Latest Posts

ಅಶೋಕ ರೈಲ್ವೆ ಗೇಟ್ ಗೆ ಎರಡು ಕಿಂಡಿಯ ಕೆಳ ಸೇತುವೆ ನಿರ್ಮಾಣ: ಸಂಸದ ಜಿ.ಎಂ.ಸಿದ್ದೇಶ್ವರ್

ಹೊಸದಿಗಂತ ವರದಿ, ದಾವಣಗೆರೆ:

ಸಮಸ್ಯೆಗೆ ಇದೀಗ ಪರಿಹಾರ ಕಂಡುಕೊಳ್ಳಲಾಗಿದ್ದು, ರೈಲ್ವೆ ಕೆಳಸೇತುವೆ ಹಾಗೂ 60 ಅಡಿ ರಸ್ತೆ ನಿರ್ಮಾಣ ಕಾಮಗಾರಿಗೆ ಶೀಘ್ರವೇ ಚಾಲನೆ ನೀಡಿ, ಒಂದು ವರ್ಷದೊಳಗೆ ಪೂರ್ಣಗೊಳಿಸಲಾಗುವುದು ಎಂದು ಸಂಸದ ಜಿ.ಎಂ.ಸಿದ್ದೇಶ್ವರ್ ಹೇಳಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲೆಯಲ್ಲಿನ ರಾಷ್ಟ್ರೀಯ ಹೆದ್ದಾರಿ ಮತ್ತು ರೈಲ್ವೆ ಯೋಜನೆಗೆ ಸಂಬಂಧಿತ ಕಾಮಗಾರಿಗಳ ಪ್ರಗತಿ ಪರಿಶೀಲನೆ ಸಭೆಯ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ನಗರದ ಪ್ರಮುಖ ಜನನಿಬಿಡ ರಸ್ತೆಯಾಗಿರುವ ಅಶೋಕ ಟಾಕೀಸ್ ಸಮೀಪದ ರೈಲ್ವೆ ಗೇಟ್‌ಗೆ ಎರಡು ಕಿಂಡಿಯ ಕೆಳ ಸೇತುವೆ ನಿರ್ಮಾಣ ಹಾಗೂ ಇಲ್ಲಿಂದ ಈರುಳ್ಳಿ ಮಾರ್ಕೆಟ್‌ಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು 60 ಅಡಿ ರಸ್ತೆಯಾಗಿ ಅಭಿವೃದ್ಧಿ ಪಡಿಸಲು ೩೫ ಕೋಟಿ ರೂ. ವೆಚ್ಚದ ಯೋಜನೆ ರೂಪಿಸಲಾಗಿದೆ. ರಸ್ತೆ ನಿರ್ಮಾಣಕ್ಕೆ ಒಟ್ಟು 1.14 ಲಕ್ಷ ಚದುರಡಿ ಭೂವಿಸ್ತೀರ್ಣ ಬೇಕಾಗಲಿದ್ದು, ಇದಕ್ಕಾಗಿ ಅಗತ್ಯವಿರುವ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲು ಉದ್ದೇಶಿಸಲಾಗಿದೆ ಎಂದರು.
ಉದ್ದೇಶಿತ ಕಾಮಗಾರಿಗಾಗಿ ಈಗಾಗಲೇ ಸಂಬಂಧಪಟ್ಟ ಭೂ ಮಾಲೀಕರು ಜಾಗ ಕೊಡಲು ಒಪ್ಪಿಗೆ ಸೂಚಿಸಿದ್ದಾರೆ. ರಸ್ತೆ ಅಗಲೀಕರಣದಿಂದ ಭೂಮಿ ಕಳೆದುಕೊಳ್ಳುವ ಭೂ ಮಾಲೀಕರಿಗೆ ತಮ್ಮ ಉಳಿದ ಭೂಮಿಯ ಮೌಲ್ಯ ಸುಮಾರು ನಾಲ್ಕು ಪಟ್ಟು ಹೆಚ್ಚಾಗಲಿದ್ದು, ನಿಯಮಾನುಸಾರ ಪರಿಹಾರ ಸಹ ಕೊಡಲಾಗುವುದು. ಕಾಮಗಾರಿಯನ್ನು ಶೀಘ್ರವೇ ಪ್ರಾರಂಭಿಸಿ, ಒಂದು ವರ್ಷದೊಳಗೆ
ಪೂರ್ಣಗೊಳಿಸುವ ವಿಶ್ವಾಸವಿದೆ ಎಂದು ಅವರು ತಿಳಿಸಿದರು.
ಚಿತ್ರದುರ್ಗ-ಹರಿಹರವರೆಗಿನ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಹಾಗೂ ಸರ್ವೀಸ್ ರಸ್ತೆಯ ಕಾಮಗಾರಿಯನ್ನು ಬರುವ ಅಕ್ಟೋಬರ್ ಒಳಗೆ ಪೂರ್ಣಗೊಳಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಈ ವ್ಯಾಪ್ತಿಯಲ್ಲಿ 3 ಕೆಳಸೇತುವೆ ಕಾಮಗಾರಿ ಪ್ರಗತಿಯಲ್ಲಿದ್ದು,
ಪೂರ್ಣಗೊಳಿಸಲು ಇನ್ನೂ 15 ತಿಂಗಳು ಕಾಲಾವಕಾಶವನ್ನು ಅಧಿಕಾರಿಗಳು ಕೋರಿದ್ದಾರೆ. ದಾವಣಗೆರೆ ನಗರ ಪ್ರವೇಶಿಸುವ ಹೆದ್ದಾರಿ ಮಾರ್ಗದಲ್ಲಿ ಚಿಂದೋಡಿ ಲೀಲಾ ರಂಗಮಂಟಪದ ಸಮೀಪ ರಸ್ತೆ ಕಿರಿದಾಗಿದ್ದು, ವಾಹನ ಸವಾರರಿಗೆ ಗೊಂದಲವಾಗುವಂತಿದೆ. ಈ ಪ್ರದೇಶದಲ್ಲಿ
ಥ್ರೀ-ವಿಂಡೋ ರಸ್ತೆ ನಿರ್ಮಾಣ ಮಾಡಿ ರಾಷ್ಟ್ರೀಯ ಹೆದ್ದಾರಿಯಿಂದ ನೇರ ಸಂಪರ್ಕ ಕಲ್ಪಿಸಲು ಯೋಜನೆ ರೂಪಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇನ್ನುಳಿದಂತೆ ಬನಶಂಕರಿ ಲೇಔಟ್ ಬಳಿ ರಸ್ತೆ ಅಗಲೀಕರಣ,
ಮಲ್ಲಶೆಟ್ಟಿಹಳ್ಳಿ, ಕಲ್ಪನಹಳ್ಳಿ ಬಳಿಯ ಹೈಟೆನ್ಷನ್ ವಿದ್ಯುತ್ ಮಾರ್ಗ ಸ್ಥಳಾಂತರ, ಹದಡಿ ರಸ್ತೆಯಲ್ಲಿ ವೃತ್ತ ನಿರ್ಮಾಣ, ಹಾಗೂ ಕುಂದುವಾಡ ಹತ್ತಿರ ಮೇಲ್ಸೇತುವೆ ನಿರ್ಮಾಣ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾತನಾಡಿ, ನಗರದ ಅಶೋಕ ರೈಲ್ವೆ ಗೇಟ್ ಬಳಿ 60 ಅಡಿ ರಸ್ತೆ ಅಗಲೀಕರಣಕ್ಕೆ ಅಗತ್ಯ ಭೂಮಿ ಒದಗಿಸಲು ಮಾಲೀಕರು ಒಪ್ಪಿಗೆ ಸೂಚಿಸಿದ್ದು, ಭೂ ಮಾಲೀಕರಿಗೆ ಅನ್ಯಾಯವಾಗದಂತೆ ಪರಿಹಾರ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಧೂಡಾ ಆಯುಕ್ತ ಬಿ.ಟಿ.ಕುಮಾರಸ್ವಾಮಿ ಸೇರಿದಂತೆ ರೈಲ್ವೆ ಇಲಾಖೆ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss