Tuesday, March 28, 2023

Latest Posts

ದೈಹಿಕ – ಮಾನಸಿಕವಾಗಿ ಸದೃಢರಾಗಲು ಕ್ರೀಡೆ ಸಹಕಾರಿ: ಶಾಸಕ ನೆಹರು ಓಲೇಕಾರ

ಹೊಸ ದಿಗಂತ ವರದಿ, ಹಾವೇರಿ :

ನೆಮ್ಮದಿಯ ಜೀವನ ಮತ್ತು ಉತ್ತಮ ಸಾಧನೆ ಮಾಡುವುದಕ್ಕೆ ಆರೋಗ್ಯ ಮುಖ್ಯ. ಬೆಳ್ಳಿ, ಬಂಗಾರ ಮತ್ತು ಹಣ ಯಾವುದೂ ಆರೋಗ್ಯವನ್ನು ತಂದುಕೊಡುವುದಿಲ್ಲ. ಆರೋಗ್ಯಕ್ಕಾಗಿ ವ್ಯಾಯಾಮ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ಭಾಗಿ ಆಗುವುದು ಬಹಳ ಮುಖ್ಯ ಎಂದು ಶಾಸಕ ನೆಹರು ಓಲೇಕಾರ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸಹಯೋಗದಲ್ಲಿ ಶನಿವಾರ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಎರಡು ದಿನಗಳ ಜಿಲ್ಲಾ ಮಟ್ಟದ ರಾಜ್ಯ ಸರಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಆರೋಗ್ಯ ಕಾಪಾಡಿಕೊಳ್ಳುವ ಎಂಬ ಉದ್ದೇಶದಿಂದ ರಾಜ್ಯ ಸರ್ಕಾರ ನೌಕರರಿಗಾಗಿ ಕ್ರೀಡಾಕೂಟಗಳನ್ನು ಆಯೋಜನೆ ಮಾಡಿದೆ. ಕ್ರೀಡೆಯಲ್ಲಿ ಪಾಲ್ಗೊಂಡು ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಬೇಕು ಎಂದರು.
ಜಿಲ್ಲೆಯ ನೌಕರ ಬಳಗವನ್ನು ಪ್ರತಿನಿಧಿಸುವ ಕ್ರೀಡಾ ಪಟುಗಳು ಜಿಲ್ಲಾ ಮಟ್ಟದಲ್ಲಿ ಗೆಲವು ಸಾಧಿಸಿ ರಾಜ್ಯ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟಕ್ಕೆ ಆಯ್ಕೆಯಾಗುವದರ ಮೂಲಕ ಹಾವೇರಿ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿ ಎಂದು ತಿಳಿಸಿದರು.
ಚಿಕ್ಕ ಮಕ್ಕಳಿಂದ ಹಿಡಿದು 85 ವರ್ಷದವರೂ ಸಹ ಇಂದು ಕ್ರೀಡಾ ಕೂಟಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಸತತವಾಗಿ ಕ್ರೀಡೆಗಳಲ್ಲಿ ಪಾಲ್ಗೊಳ್ಳುತ್ತ ಬಂದಿದ್ದರಿಂದ 85 ವರ್ಷದ ವೃದ್ಧರೂ ಸಹ ಯುವ ಜನತೆಯಂತೆ ಉತ್ಸಾಹದಿಂದ ಕ್ರೀಡಾ ಕೂಟಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿದೆ. ಆದಷ್ಟು ಎಲ್ಲರೂ ಕ್ರೀಡೆಗಳಲ್ಲಿ ಪಾಲ್ಗೊಳ್ಳು ಬರುವಂತೆ ಹೇಳಿದರು.
ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಮಾತನಾಡಿ, ಸಾರ್ವಜನಿಕ ಸೇವೆ ಮಾಡುತ್ತಿರುವ ಸರ್ಕಾರಿ ನೌಕರರು ಆರೋಗ್ಯವಂತರಾಗಿರಬೇಕು. ಉತ್ತಮ ಆರೋಗ್ಯಕ್ಕೆ ಕ್ರೀಡೆಗಳು ಸಹಕಾರಿಯಾಗಿದೆ, ಸರ್ಕಾರ ಆಯೋಜನೆ ಮಾಡಿರುವ ಕ್ರೀಡಾ ಚಟುವಟಿಕೆಗಳಲ್ಲಿ ಕ್ರೀಯಾಶಿಲರಾಗಿ ಭಾಗವಹಿಸಿ ಎಂದರು.
ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಅಮೃತಗೌಡ ಪಾಟೀಲ ಮಾತನಾಡಿ, ರಾಜ್ಯ ಸರ್ಕಾರ ನೌಕರರು ವರ್ಷವಿಡಿ ಕೆಲಸದ ನಡುವೆ ಮನೋಲ್ಲಾಸಕ್ಕಾಗಿ ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದೆ ಎಂದರು.
ಜಿಲ್ಲೆಯಿಂದ ಒಟ್ಟು 1864 ನೌಕರರು ಕ್ರೀಡಾಕೂಟಕ್ಕೆ ನೊಂದಣಿ ಮಾಡಿಸಿಕೊಂಡಿದ್ದಾರೆ ಎಂದು ಜಿಲ್ಲಾ ನೌಕರರ ಸಂಘದ ಕಾರ್ಯದರ್ಶಿ ಎಂ.ಎಂ.ಎಣ್ಣಿ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಗಿರೀಶ ಸ್ವಾದಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಲತಾ.ಬಿ.ಹೆಚ್., ಸಿಪಿಐ ಸುರೇಶ ಸಗರಿ, ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಚಂದ್ರಣ್ಣ ಬ್ಯಾಡಗಿ, ಕ್ರೀಡಾ ಕಾರ್ಯದರ್ಶಿ ಚಂದ್ರಕಾಂತ ಹೊಟ್ಟಿಗೌಡರ ಹಾಗೂ ಇತರರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!