Tuesday, July 5, 2022

Latest Posts

ಡೋಕ್ಲಾಂನಂತಹ ಆಕ್ರಮಣ ತಡೆಗೆ ಗಡಿಯಲ್ಲಿ ಸೇತುವೆ, ರಸ್ತೆಗಳ ನಿರ್ಮಾಣ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಲಡಾಖ್‌ನಲ್ಲಿ ಚೀನಾ ಆಕ್ರಮಣ ಯತ್ನದ ಬಳಿಕ ಕೇಂದ್ರ ಸರಕಾರವು ಎಲ್ಲಾ ಸೂಕ್ಷ್ಮ ಸ್ಥಳಗಳಲ್ಲಿ ರಸ್ತೆ ನಿರ್ಮಾಣ ಮತ್ತು ಸೇತುವೆ ನಿರ್ಮಾಣಕ್ಕೆ ಮುಂದಾಗಿದ್ದು, ಇದೀಗ ಸಿಕ್ಕಿಂನ ಡೋಕ್ಲಾ ಕಡೆಗಿನ ಪ್ರಮುಖ ಸೇತುವೆಯನ್ನು ಗಡಿ ರಸ್ತೆ ನಿರ್ಮಾಣ ಸಂಸ್ಥೆ(ಬಿಆರ್‌ಒ)ನಿರ್ಮಿಸುವ ಮೂಲಕ ಅರುಣಾಚಲ ಪ್ರದೇಶದ ಯಾಂಗ್ಚ್ಸೆಯ ರಸ್ತೆಗಳೊಂದಿಗೆ ಸಂಪರ್ಕ ಸಾಧಿಸಲಾಗಿದೆ. ಇದರಿಂದಾಗಿ ಚೀನಾ ಈ ಭಾಗದಲ್ಲಿ ಯಾವುದೇ ಏಕಪಕ್ಷೀಯ ಕ್ರಮ ಕೈಗೊಂಡಲ್ಲಿ ಭಾರತೀಯ ಪಡೆಗಳಿಗೆ ಈ ಗಡಿ ಪ್ರದೇಶಕ್ಕೆ ಕ್ಷಿಪ್ರವಾಗಿ ತಲುಪಲು ಸಾಧ್ಯವಾಗಲಿದೆ.
ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ , ಸಿಕ್ಕಿಂನಿಂದ ಡೊಕ್ಲಾ ಕಡೆಗಿನ 140 ಡಬಲ್ ಲೇನ್ ಕ್ಲಾಸ್ -70 ಮಾಡ್ಯುಲರ್ ಸೇತುವೆ ಪೂರ್ಣಗೊಂಡಿದೆ. ಅರುಣಾಚಲ ಪ್ರದೇಶದ ಯಾಂಗ್ಟ್ಸೆಯ ಸ್ಥಳವು ಈಗ ರಸ್ತೆಯೊಂದಿಗೆ ಸಂಪರ್ಕ ಸಾಸುವುದರೊಂದಿಗೆ ಅತ್ಯಂತ ಮಹತ್ವದ್ದಾಗಿದೆ ಎಂದು ಮೂಲಗಳು ತಿಳಿಸಿವೆ.
ಸಿಕ್ಕಿಂನ ಡೋಕ್ಲಾ, ಅರುಣಾಚಲದ ಯಾಂಗ್ಟ್ಸೆ ಮತ್ತು ಲಡಾಖ್‌ನ ಡಂಗ್ಟಿ ಇವೆಲ್ಲವೂ ವಾಸ್ತವ ನಿಯಂತ್ರಣ ರೇಖೆ(ಎಲ್‌ಎಸಿ) ಸಮೀಪದಲ್ಲಿನ ಪ್ರದೇಶಗಳಾಗಿವೆ. ಇಲ್ಲೇ ಚೀನಾ ಆಕ್ರಮಣ ಯತ್ನ ನಡೆಸಿದಾಗ ಸಂಘರ್ಷಕ್ಕೆ ಕಾರಣವಾದ ಸ್ಥಳಗಳಾಗಿವೆ. ಸಿಕ್ಕಿಂನ ಡೋಕ್ಲಾ ಭಾರತೀಯ ಸೇನೆಯ ಪೋಸ್ಟ್ ಡೋಲಮ್ ಪ್ರಸ್ಥಭೂಮಿಗೆ ಹತ್ತಿರದಲ್ಲಿದೆ. ಅಲ್ಲಿ 2017 ರ ಜೂ. 16ರಂದು ಚೀನಿ ಪಡೆಗಳು ರಸ್ತೆ ನಿರ್ಮಿಸಲು ಮುಂದಾದಾಗ ಸಂಘರ್ಷ ನಡೆದಿತ್ತು.
ಆಗ 73 ದಿನಗಳ ನಂತರ ಡೋಕ್ಲಾಮ್ ಸಂಘರ್ಷ ಮುಗಿದಿತ್ತು. ಇದೇ ರೀತಿ ಇನ್ನು ಮುಂದೆ ಚೀನಾದ ಸೇನೆಯು ಯಾವುದೇ ಏಕಪಕ್ಷೀಯ ಕ್ರಮ ಕೈಗೊಂಡರೆ ಈ ರಸ್ತೆ ಮೂಲಕ ವೇಗವಾಗಿ ತಲುಪಲು ಸಾಧ್ಯವಾಗಲಿದೆ. 2018ರ ಜುಲೈನಲ್ಲಿ ಯಾಂಗ್ಟ್ಸೆ ಯಲ್ಲಿ ದೊಡ್ಡ ಸಂಖ್ಯೆಯ ಚೀನೀ ಸೈನಿಕರು ಜಮಾಯಿಸಿದ್ದು ಸಂಘರ್ಷಕ್ಕೆ ಕಾರಣವಾಗಿತ್ತು. ಇದರ ಬೆನ್ನಿಗೇ ಕೇಂದ್ರ ಈ ದುರ್ಗಮ ಪ್ರದೇಶದಲ್ಲಿ ರಸ್ತೆ ನಿರ್ಮಾಣಕ್ಕೆ ವೇಗ ನೀಡಿತ್ತು. ಈ ಹಿಂದೆ ವರ್ಷ ಕೇವಲ 0.5ಕಿ.ಮೀ.ರಸ್ತೆ ಕಾಮಗಾರಿ ನಡೆಯುತ್ತಿದ್ದರೆ, ಇದೀಗ ಕೇಂದ್ರ ಸರಕಾರ 3 ಹೊಸ ಅಗೆಯುವ ಯಂತ್ರ, 3 ಅತ್ಯಾಧುನಿಕ ಬುಲ್ಡೋಜರ್‌ಗಳನ್ನು ನಿಯೋಜಿಸಿ ಕಳೆದ 2020ರ ಮಾರ್ಚ್‌ನಿಂದ ಅಕ್ಟೋಬರ್‌ವರೆಗಿನ ಅವಧಿಯಲ್ಲೇ 12ಕಿ.ಮೀ. ರಸ್ತೆ ರಚನೆಯನ್ನು ಪೂರ್ಣಗೊಳಿಸಲಾಗಿದೆ. ಇದೇ ರೀತಿ ಡಂಗ್ಟಿ-ಹೆನಾ ರಸ್ತೆಯೂ ಪೂರ್ಣಗೊಂಡಿದ್ದು, ಚೀನಾದ ನೇರ ನಿಗಾದಲ್ಲಿರುವ ಈ ರಸ್ತೆಯನ್ನು ಭಾರತೀಯ ಪಡೆಗಳ ಕ್ಷಿಪ್ರ ಚಲನೆಗೆ ಬಳಸಿಕೊಳ್ಳಲು ಅನುಕೂಲವಾಗಲಿದೆ.

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss