spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, December 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಎನ್’ಡಿಆರ್’ಎಫ್ ಪರಿಹಾರ ಮೊತ್ತ‌ ದ್ವಿಗುಣಗೊಳಿಸಲು ಸರಕಾರಕ್ಕೆ ಪ್ರಸ್ತಾವನೆ: ಜಗದೀಶ್

- Advertisement -Nitte

ಹೊಸದಿಗಂತ ವರದಿ, ಕೊಡಗು:

2018ರಲ್ಲಿ ಸಂಭವಿಸಿದ ಅತಿವೃಷ್ಟಿ ಹಾಗೂ ಅಕಾಲಿಕ ಮಳೆಯಿಂದ ನಷ್ಟಗೊಂಡ ಬೆಳೆಗಳಿಗೆ ಪರಿಹಾರ ನೀಡಲು ರಚಿಸಿದ ಟಾಸ್ಕ್ ಫೋರ್ಸ್ ನ ಶಿಫಾರಸ್ಸಿನಂತೆ ಈಗಿರುವ ಎನ್.ಡಿ. ಆರ್.ಎಫ್ ಪರಿಹಾರದ ಮೊತ್ತವನ್ನು ಹೆಕ್ಟೇರ್ ಗೆ 18 ಸಾವಿರ ರೂ. ದಿಂದ 36 ಸಾವಿರ ರೂ. ಹಾಗೂ ಈಗ ಇರುವ 2 ಹೆಕ್ಟೆಯರ್ ಮಿತಿಯನ್ನು 5 ಹೆಕ್ಟೇರ್ ಗೆ ಹೆಚ್ಚಿಸುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಕಾಫಿ ಮಂಡಳಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಕಾರ್ಯದರ್ಶಿ ಜಗದೀಶ್ ಅವರು ತಿಳಿಸಿದ್ದಾರೆ.
ಅತಿವೃಷ್ಟಿ ಹಾಗೂ ಅಕಾಲಿಕ ಮಳೆಯಿಂದ ನಷ್ಟಗೊಂಡಿರುವ ಕಾಫಿ ಬೆಳೆಗಾರರಿಗೆ ತಕ್ಷಣದ ನೆರವು ನೀಡಲು ಕ್ರಮಕೈಗೊಳ್ಳಬೇಕು ಹಾಗೂ ಈ ಸಂಬಂಧ ಸರಕಾರಕ್ಕೆ‌ ಶಿಫಾರಸ್ಸು ಮಾಡಬೇಕೆಂಬ ಕೊಡಗು ಬೆಳೆಗಾರರ ಒಕ್ಕೂಟ ಸಲ್ಲಿಸಿದ ಮನವಿಗೆ ಸ್ಪಂದಿಸಿ ಅವರು ಈ‌ ಮಾಹಿತಿ ನೀಡಿದರಲ್ಲದೆ,ಪರಿಹಾರ ಮೊತ್ತ ಪರಿಷ್ಕರಣೆ ಕಾಫಿ ಬೆಳೆಗೆ ಮಾತ್ರ ಮಾಡಲು ಸಾಧ್ಯವಿಲ್ಲದಿರುವುದರಿಂದ ಎಲ್ಲಾ ಬೆಳೆಗೂ ಅನ್ವಯವಾಗುವಂತೆ ವರದಿ ಸಲ್ಲಿಕೆಯಾಗಿದೆ ಎಂದು ಅವರು ನುಡಿದರು.
ಬೆಳೆಗಾರರ ಒಕ್ಕೂಟ ಸಲ್ಲಿಸಿದ ಮನವಿ ಪತ್ರದ ಬೇಡಿಕೆಗಳಲ್ಲಿ, ಕಾಫಿ ಬೆಳೆಗೆ ಪ್ರಾಕೃತಿಕ ವಿಕೋಪ ನಷ್ಟ ಪರಿಹಾರ ಹಲವಾರು ವರ್ಷಗಳಿಂದ ಪರಿಷ್ಕರಣೆಗೊಂಡಿಲ್ಲ. ಆದ್ದರಿಂದ ಎನ್.ಡಿ.ಆರ್.ಎಫ್. ನಡಿ ಪ್ರಸ್ತುತ ಹೆಕ್ಟೇರ್ ಒಂದಕ್ಕೆ ರೂ. 18 ಸಾವಿರ ಇದ್ದು ಇದನ್ನು ಕನಿಷ್ಟ 50 ಸಾವಿರಕ್ಕೆ ಏರಿಸಬೇಕು. ಈಗ ಇರುವ ಎರಡು ಹೆಕ್ಟೇರ್ ಗರಿಷ್ಠ ಮಿತಿಯನ್ನು ಐದು ಹೆಕ್ಟೇರ್ ಗೆ ವಿಸ್ತರಿಸಬೇಕು. ಪೆಟ್ರೋಲಿಯಂ ಉದ್ಯಮದ ನಂತರ ಅತೀ ಹೆಚ್ಚು ವಿದೇಶಿ ವಿನಿಮಯ ಗಳಿಸುತ್ತಿರುವ ಕಾಫಿ ಬೆಳೆಗೆ ಯಾವುದೇ ವಿಮೆ ಇರುವುದಿಲ್ಲ. ನಿರಂತರ ಪ್ರಾಕೃತಿಕ ವಿಕೋಪಕ್ಕೆ ತುತ್ತಾಗುತ್ತಿರುವ ಕಾಫಿ ಬೆಳೆಗೆ ಸೂಕ್ತ ವಿಮೆ ಸೌಲಭ್ಯ ಒದಗಿಸಬೇಕು. ಒಂದು ಜಿಲ್ಲೆ ಒಂದು ಬೆಳೆ ಎಂಬ ಕೇಂದ್ರ ಸರಕಾರದ ಯೋಜನೆಯಂತೆ ಕೊಡಗು ಜಿಲ್ಲೆಗೆ ಕಾಫಿಯನ್ನು ಘೋಷಣೆ ಮಾಡಿದ್ದು ಈ ಯೋಜನೆಯಡಿ ಜಿಲ್ಲೆಯ ಪ್ರತಿ ಕಾಫಿ ಬೆಳೆಗಾರರಿಗೆ ಅಭಿವೃದ್ಧಿ ಯೋಜನೆ ರೂಪಿಸಬೇಕು ಎಂದು ಆಗ್ರಹಿಸಲಾಗಿದೆ.
ಪ್ರಸ್ತುತ ಆಕಾಲಿಕ ಮಳೆ – ಹವಾಮಾನ ವೈಪರೀತ್ಯದಿಂದ ಕೊಯ್ದ ಕಾಫಿಯನ್ನು ಒಣಗಿಸಲು ಸಾಧ್ಯವಾಗದೆ ಬೆಳೆಗಾರರು ನಷ್ಟ ಅನುಭವಿಸುವಂತಾಗಿದ್ದು, ಕಾಫಿ ಬೆಳೆಗಾರರ ರಕ್ಷಣೆಗೆ ಕಾಫಿ ಒಣಗಿಸುವ ಯಂತ್ರ (ಕಾಫಿ ಡ್ರೈಯರ್) ನಿರ್ಮಾಣಕ್ಕೆ ಕಾಫಿ ಮಂಡಳಿ ಸಂಪೂರ್ಣ ಸಹಾಯಧನವನ್ನು ತಕ್ಷಣದಿಂದಲೇ ಜಾರಿಗೆ ತರಬೇಕು. ಕಾಫಿ ಮಂಡಳಿಯಲ್ಲಿ ಬೆಳೆಗಾರರಿಗೆ ದೊರೆಯುತ್ತಿದ್ದ ಸಹಾಯಧನ ಸೌಲಭ್ಯ ಸ್ಥಗಿತವಾಗಿದ್ದು ಅವುಗಳನ್ನು ಶೇ. 80 ರಷ್ಟು ಸಹಾಯಧನದಲ್ಲಿ ಮುಂದುವರಿಸಬೇಕು. ಬೆಳೆಗಾರರು ಹಾಗೂ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ಮುಂದುವರಿಸಬೇಕು. ವಿಶೇಷವಾಗಿ ಸಣ್ಣ ಕಾಫಿ ಬೆಳೆಗಾರರು ಹಾಗೂ ಕಾರ್ಮಿಕರಿಗೆ ಆರೋಗ್ಯ ರಕ್ಷಣೆ ದುಬಾರಿಯಾಗುತ್ತಿದ್ದು, ಆರೋಗ್ಯ ರಕ್ಷಣೆಗೆ ಕಾಫಿ ಬೆಳೆಗಾರರು ಮತ್ತು ಕಾಫಿ ತೋಟ ಕಾರ್ಮಿಕರ ಹಾಗೂ ಅವರ ಕುಟುಂಬಕ್ಕೆ ಕಾಫಿ ಮಂಡಳಿ ವತಿಯಿಂದ ಆರೋಗ್ಯ ವಿಮೆಯನ್ನು ಜಾರಿ ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.
ಕೋವಿಡ್ ಲಾಕ್‍ಡೌನ್‍ನಿಂದ ಉಂಟಾದ ನಷ್ಟಕ್ಕೆ ದೇಶದ ಎಲ್ಲಾ ಕಾರ್ಮಿಕರಿಗೆ, ಉದ್ಯಮಕ್ಕೆ, ಕೃಷಿ ರಂಗಕ್ಕೆ ಸರಕಾರ ಪರಿಹಾರವನ್ನು ನೀಡಿದ್ದು, ಕಾಫಿ ಬೆಳೆಗಾರರು ಹಾಗೂ ಕಾರ್ಮಿಕರಿಗೆ ಯಾವುದೇ ಪರಿಹಾರ ದೊರೆತಿರುವುದಿಲ್ಲ ಇದನ್ನು ಪರಿಗಣಿಸಿ ಸೂಕ್ತ ನೆರವು ಒದಗಿಸಬೇಕು ಎಂದು ಮನವಿಯಲ್ಲಿ ಗಮನ ಸೆಳೆಯಲಾಗಿದೆ.
ಮನವಿಯನ್ನು ಕೊಡಗು ಬೆಳೆಗಾರರ ಒಕ್ಕೂಟದ ಕಾರ್ಯದದರ್ಶಿ ಅಣ್ಣೀರ ಹರೀಶ್ ಮಾದಪ್ಪ, ಖಜಾಂಚಿ ಮಾಣೀರ ವಿಜಯ್ ನಂಜಪ್ಪ, ಮಾಜಿ ಅಧ್ಯಕ್ಷ ಅಜ್ಜಮಾಡ ಕಟ್ಟಿ ಮಂದಯ್ಯ ನೀಡಿದರು.
ಈ ಸಂದರ್ಭ ಸಂದರ್ಭ ಕಾಫಿ ಮಂಡಳಿಯ ಸದಸ್ಯರಾದ ಮಚ್ಚಮಾಡ ಡಾಲಿ ಚಂಗಪ್ಪ, ಟಿ.ಟಿ. ಜಾನ್, ಹಿತ ರಕ್ಷಣಾ ಸಮಿತಿಯ ಚೊಟ್ಟೆಯಂಡಮಾಡ ವಿಶ್ವನಾಥ್ ಮತ್ತಿತರರು ಹಾಜರಿದ್ದರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss