ಕೊಡಗಿಗೆ ಹಾಸನದಿಂದ ಪಯಾರ್ಯ ವಿದ್ಯುತ್ ಮಾರ್ಗ: ರೋಶನ್ ಅಪ್ಪಚ್ಚು

ಹೊಸ ದಿಗಂತ ವರದಿ, ಶ್ರೀಮಂಗಲ:

ಪೊನ್ನಂಪೇಟೆ ತಾಲೂಕಿನ ಕಾನೂರು, ಬೆಕ್ಕೆಸೊಡ್ಲೂರು, ಕೋತೂರು ಮತ್ತು ಬಲ್ಯಮುಂಡೂರು ಗ್ರಾಮಸ್ಥರು ರಾಜ್ಯ ಕೆಪಿಟಿಸಿಎಲ್‍ನ ಎಲೆಕ್ಟ್ರಿಕಲ್ ಇನ್ಸ್ಪೆಕ್ಟರ್ ತೀತಿರ ರೋಶನ್ ಅಪ್ಪಚ್ಚು ಹಾಗೂ ರಾಜ್ಯ ನಿವೃತ್ತ ಪ್ರಧಾನ ಕಾರ್ಯಪಾಲಕ ಅಭಿಯಂತರ ಬಟ್ಟಕಾಳಂಡ ಮುತ್ತಣ್ಣ ಅವರನ್ನು ಸನ್ಮಾನಿಸಿದರು.
ಬೆಕ್ಕೆಸೊಡ್ಲೂರುವಿನ ಶ್ರೀ ಮಂದತವ್ವ ದೇವ ಭಂಡಾರ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಇವರನ್ನು ಸನ್ಮಾನಿಸಲಾಯಿತು.
ಕೊಡಗಿಗೆ ಹಾಸನದಿಂದ ವಿದ್ಯುತ್ : ಈ ಸಂದರ್ಭ ಮಾತನಾಡಿದ ರೋಶನ್ ಅಪ್ಪಚ್ಚು ಅವರು ಕೊಡಗಿನಲ್ಲಿ ವಿದ್ಯುತ್ ಅಡಚಣೆ ರಹಿತವಾಗಿ ಮತ್ತು ಬೆಳೆಗಾರರ ಪಂಪ್‍ಸೆಟ್‍ಗಳಿಗೆ ಗುಣಮಟ್ಟದ ವಿದ್ಯುತ್ ದೊರೆಯುವಂತಾಗಲು ಹಲವು ಉಪ ವಿದ್ಯುತ್ ಸರಬರಾಜು ಕೇಂದ್ರದ ಅಗತ್ಯವಿದೆ. ಈ ನಿಟ್ಟಿನಲ್ಲಿ ಶ್ರೀಮಂಗಲ ಹಾಗೂ ಬಾಳೆಲೆಯಲ್ಲಿ ಉಪ ಕೇಂದ್ರವನ್ನು ಸ್ಥಾಪಿಸಲಾಗುತ್ತಿದೆ. ಇದರೊಂದಿಗೆ ಹಾಸನದಿಂದ ಕುಶಾಲನಗರದ ಮೂಲಕ ಜಿಲ್ಲೆಗೆ ವಿದ್ಯುತ್ ಸಂಪರ್ಕ ಮಾಡಲು ಮತ್ತೊಂದು ಮಾರ್ಗದ ಕಾರ್ಯಯೋಜನೆ ನಡೆಸಲಾಗುತ್ತಿದೆ. ಇದರಿಂದ ಈಗಾಗಲೇ ಹುಣಸೂರು, ನಾಗರಹೊಳೆ, ತಿತಿಮತಿ ಮೂಲಕ ದಕ್ಷಿಣ ಕೊಡಗಿಗೆ ಸಂಪರ್ಕದ ವಿದ್ಯುತ್ ಮಾರ್ಗಕ್ಕೆ ಅಡಚಣೆಯಾದರೆ ಇನ್ನೊಂದು ಮಾರ್ಗದಿಂದ ಸಂಪರ್ಕಿಸಲು ಪರ್ಯಾಯ ಮಾರ್ಗದ ಕಾರ್ಯ ಯೋಜನೆ ಇದಾಗಿದೆ ಎಂದು ಹೇಳಿದರು.
ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಚೊಟ್ಟೆಕ್‍ಮಾಡ ರಾಜೀವ್ ಬೋಪಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ತೀತಿರ ರೋಷನ್ ಅಪ್ಪಚ್ಚು ಮತ್ತು ಬಟ್ಟಕಾಳಂಡ ಮುತ್ತಣ್ಣ ಅವರು ತಮ್ಮ ಅಧಿಕಾರವಧಿಯಲ್ಲಿ ಸಲ್ಲಿಸಿದ ಹಾಗೂ ಸಲ್ಲಿಸುತ್ತಿರುವ ಸೇವೆಯನ್ನು ಶ್ಲಾಘಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಂದತವ್ವ ದೇವ ಭಂಡಾರದ ಅಧ್ಯಕ್ಷ ಮಾಚಿಮಾಡ ರವೀಂದ್ರ ಅವರು ಮಾತನಾಡಿ ಇಲಾಖೆಯ ಉನ್ನತ ಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿರುವ ಹಾಗೂ ಸಲ್ಲಿಸಿದ ಸನ್ಮಾನಿತರು ಜಿಲ್ಲೆ ಹಾಗೂ ರಾಜ್ಯಕ್ಕೆ ಉತ್ತಮ ಕೆಲಸ ಮಾಡುವ ಮೂಲಕ ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ ಎಂದರು.
ಈ ಸಂದರ್ಭ ಸುಳ್ಳಿಮಾಡ ಪೂವಮ್ಮ ಅವರು ಪ್ರಾರ್ಥಿಸಿದರು.ಪೊನ್ನಂಪೇಟೆ ಎ.ಪಿ.ಸಿ.ಎಂ.ಎಸ್ ಮಾಜಿ ಅಧ್ಯಕ್ಷ ಮಲ್ಲಮಾಡ ಪ್ರಭು ಪೂಣಚ್ಚ ಸ್ವಾಗತಿಸಿ ವಂದಿಸಿದರು.
ಅತಿಥಿಗಳ ಪರಿಚಯವನ್ನು ಕಾನೂರು ಪಿ.ಎ.ಸಿ.ಎಸ್ ಅಧ್ಯಕ್ಷ ಅಳಮೇಂಗಡ ವಿವೇಕ್ ಮಾಡಿದರು. ಅತಿಥಿಗಳನ್ನು ಚೊಟ್ಟೆಕ್‍ಮಾಡ ವರುಣ್, ಚೆಪ್ಪುಡಿರ ಕೃಪ, ಚೆರಿಯಪಂಡ ಪವನ್ ಅವರು ಸನ್ಮಾನಿಸಿದರು.
ಈ ಸಂದರ್ಭ ಚೆಸ್ಕಾಂ ಜೆಇ ರಂಗಸ್ವಾಮಿ, ಕಾನೂರು ಗ್ರಾ.ಪಂ. ಅಧ್ಯಕ್ಷೆ ಮಲ್ಲಮಾಡ ರಶ್ಮಿ ಮತ್ತು ಕಾನೂರು, ಬೆಕ್ಕೆಸೊಡ್ಲೂರು, ಕೋತೂರು, ಬಲ್ಯಮುಂಡೂರು ಗ್ರಾಮಸ್ಥರು ಭಾಗವಹಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!