ಹೊಸ ದಿಗಂತ ವರದಿ, ಮಡಿಕೇರಿ:
ಚೆಟ್ಟಳ್ಳಿ ಸಹಕಾರ ಸಂಘದಲ್ಲಿ ಅತಿಥಿಗೃಹ ನಡೆಸಲು ಅನುಮತಿ ನೀಡದ ಚೆಟ್ಟಳ್ಳಿ ಪಂಚಾಯಿತಿ ವಿರುದ್ಧ ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ನೇತೃತ್ವದಲ್ಲಿ ಆಡಳಿತ ಮಂಡಳಿ ನಿರ್ದೇಶಕರು ಹಾಗೂ ಸಿಬ್ಬಂದಿ ವರ್ಗದವರು ಪ್ರತಿಭಟನೆ ನಡೆಸಿದರು.
ಗ್ರಾ.ಪಂ ಕಚೇರಿಗೆ ಪ್ರತಿಭಟನಾ ಮೆರವಣಿಗೆಯಲ್ಲಿ ಬಂದ ಪ್ರಮುಖರು ಅತಿಥಿ ಗೃಹಕ್ಕೆ ಅನುಮತಿ ನೀಡದ ಗ್ರಾ.ಪಂ ಹಾಗೂ ತಡೆ ಒಡ್ಡುತ್ತಿರುವ ಕೆಲವು ಪಂಚಾಯಿತಿ ಸದಸ್ಯರ ವಿರುದ್ಧ ಧಿಕ್ಕಾರ ಕೂಗಿ ಅಸಮಾಧಾನ ವ್ಯಕ್ತಪಡಿಸಿದರು.
ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ನಂದೀಶ್ ಕುಮಾರ್ ಮಾತನಾಡಿ ಕೆಲವೊಂದು ಗೊಂದಲಗಳಿಂದ ಅನುಮತಿ ನೀಡಲಾಗಿಲ್ಲ. ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಅನುಮತಿ ನೀಡುತ್ತೇವೆ ಎಂದು ಭರವಸೆ ನೀಡಿದರು. ಪ್ರತಿಭಟನೆಯನ್ನು ಹಿಂಪಡೆಯುವಂತೆ ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಗ್ರಾ.ಪಂ ಸದಸ್ಯ ಕಂಠಿ ಕಾರ್ಯಪ್ಪ ಮಾತನಾಡಿ, ನಾವು ಪ್ರತಿಭಟನೆ ನಡೆಸುವ ವಿಚಾರ ತಿಳಿದಿದ್ದರೂ ಪಂಚಾಯಿತಿ ಅಧ್ಯಕ್ಷರು ಗೈರು ಹಾಜರಾಗಿದ್ದಾರೆ. ಈ ಹಿಂದೆ ಗ್ರಾ.ಪಂ ಸಭೆಯಲ್ಲಿ ಮಾತಿನ ಚಕಮಕಿ ನಡೆಯಿತು ಎನ್ನುವ ಕಾರಣಕ್ಕೆ ಅಧ್ಯಕ್ಷರೇ ಸಭಾತ್ಯಾಗ ಮಾಡಿದ ಪ್ರಸಂಗ ನಡೆದಿತ್ತು. ಈ ರೀತಿಯ ಬೆಳವಣಿಗೆಗಳು ನಡೆದರೆ ಪಂಚಾಯಿತಿಯಲ್ಲಿ ನಾವು ಇರುವುದಾದರೂ ಹೇಗೆ ಎಂದು ಪ್ರಶ್ನಿಸಿದರು.
ಗ್ರಾ.ಪಂ ಸದಸ್ಯೆ ಮಾಲಾಶ್ರೀ, ಸಹಕಾರ ಸಂಘದ ಉಪಾಧ್ಯಕ್ಷ ಕಣಜಾಲು ಪೂವಯ್ಯ, ನಿರ್ದೇಶಕರಾದ ಮರದಾಳು ಎಸ್.ಉಲ್ಲಾಸ, ಪೇರಿಯನ ಪೂಣಚ್ಚ, ಬಿ.ಎಂ.ಕಾಶಿ, ಬಟ್ಟೀರ ಕೆ.ಅಪ್ಪಣ್ಣ, ಪುತ್ತರಿರ ಪಿ.ನಂಜಪ್ಪ, ಟಿ.ಎಸ್.ಧನಂಜಯ, ಸಹಕಾರ ಸಂಘದ ಸಿಬ್ಬಂದಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.