ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………..
ಹೊಸ ದಿಗಂತ ವರದಿ, ಮಡಿಕೇರಿ:
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕೆಂಬ ಬೇಡಿಕೆಯನ್ನು ಸರಕಾರ ಸೆ.15ರ ಒಳಗಾಗಿ ಈಡೇರಿಸಬೇಕು.
ಇಲ್ಲವಾದಲ್ಲಿ ಅಕ್ಟೋಬರ್ 1ರಿಂದ ಎರಡನೇ ಸುತ್ತಿನ ಹೋರಾಟ ಆರಂಭವಾಗಲಿದೆ ಎಂದು ಹೋರಾಟದ ನೇತೃತ್ವ ವಹಿಸಿರುವ ಪಂಚಮಸಾಲಿ ಪೀಠದ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
ಕಳೆದ ಮೂರು ದಿನಗಳ ಹಿಂದೆ ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟದಲ್ಲಿ ಆರಂಭವಾಗಿರುವ ‘ಪ್ರತಿಜ್ಞಾ ಪಂಚಾಯತ್ ಅಭಿಯಾನ’ ಭಾನುವಾರ ಕೊಡಗಿನ ಕೊಡ್ಲಿಪೇಟೆಯ ಕಲ್ಲು ಮಠಕ್ಕೆ ಅಗಮಿಸಿದ ಸಂದರ್ಭ ಅವರು ಈ ವಿಷಯ ತಿಳಿಸಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಜಯಮೃತ್ಯುಂಜಯ ಸ್ವಾಮೀಜಿ, ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸುವ ಸಲುವಾಗಿ ಪ್ರತಿಜ್ಞಾ ಪಂಚಾಯತ್ ಅಭಿಯಾನ ಆರಂಭಿಸಲಾಗಿದೆ. ಸೆಪ್ಟೆಂಬರ್ 15ರ ವರೆಗೆ ಎಲ್ಲಾ ಜಿಲ್ಲೆಗಳಲ್ಲಿ ಅಭಿಯಾನ ನಡೆಯಲಿದೆ. ಅಷ್ಟರಲ್ಲಿ ಸರ್ಕಾರ ನಮ್ಮ ಬೇಡಿಕೆ ಈಡೇರಿಸುವ ನಂಬಿಕೆ ಇದೆ. ಬೇಡಿಕೆ ಈಡೇರದಿದ್ದರೆ 30ರ ಬಳಿಕ ಧರಣಿ ಸತ್ಯಾಗ್ರಹ ಮತ್ತೆ ನಡೆಯಲಿದೆ. ಅಕ್ಟೋಬರ್ 1ರಂದು ಮಾಜಿ ಸಿಎಂ ಜೆ.ಎಚ್.ಪಟೇಲ್ ಅವರ ಜಯಂತಿ ಇರುವುದರಿಂದ ಅದೇ ದಿನ ಜಯಂತಿ ಆಚರಿಸಿ ಅದೇ ವೇದಿಕೆಯಲ್ಲಿ ಧರಣಿ ಸತ್ಯಾಗ್ರಹ ಆರಂಭವಾಗಲಿದೆ. ಅಲ್ಲಿಯವರೆಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಅವಕಾಶ ನೀಡುವುದಿಲ್ಲ ಎಂಬ ನಂಬಿಕೆ ಇದೆ ಎಂದು ಹೇಳಿದರು.
ಸರ್ಕಾರ ಮತ್ತು ನಮ್ಮ ಹೋರಾಟದ ನಡುವೆ ಸಚಿವ ಸಿ.ಸಿ.ಪಾಟೀಲ್ ಇದ್ದಾರೆ. ಅವರ ಮೂಲಕ ಸರ್ಕಾರಕ್ಕೆ ಸಂಪೂರ್ಣ
ಮಾಹಿತಿ ಹೋಗುತ್ತಿದೆ. ಹೀಗಾಗಿ ನಮ್ಮ ಬೇಡಿಕೆ ಈಡೇರುವ ವಿಶ್ವಾಸವಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಶಾಸಕ ವಿಜಯಾನಂದ್ ಕಾಶಪ್ಪನವರ್ ಮಾತಾನಾಡಿ, ಈಗಾಗಲೇ ರಾಜ್ಯ ಸರ್ಕಾರ ಮೀಸಲಾತಿ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ಕಲೆ ಹಾಕುತ್ತಿದೆ. ಮೀಸಲಾತಿ ನೀಡುತ್ತಾರೆ ಎನ್ನುವ ಭರವಸೆ ಇದೆ. ಇಲ್ಲದಿದ್ದರೆ ಕಳೆದ ಬಾರಿಯ ಹೋರಾಟದಲ್ಲಿ 10 ಲಕ್ಷ ಜನರು ಭಾಗಿಯಾಗಿದ್ದರು. ಈ ಬಾರಿ 20 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಜನ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ. ಅಲ್ಲಿಯವರೆಗೆ ಮುಂದುವರಿಯಲು ರಾಜ್ಯ ಸರ್ಕಾರ ಬಿಡಬಾರದು ಎಂದರು.