ಅಭಿವೃದ್ಧಿಯಲ್ಲಿ ತಾಕತ್ತು ತೋರಿಸಬೇಕೆ ವಿನಃ ನಿಂದನೆಯಿಂದ ಮತ ಗಿಟ್ಟಿಸಿಕೊಳ್ಳಲು ಸಾಧ್ಯವಿಲ್ಲ: ಶಾಸಕ ಸಿ.ಟಿ.ರವಿ

ಹೊಸದಿಗಂತ ವರದಿ,ಚಿಕ್ಕಮಗಳೂರು:

ಅಭಿವೃದ್ಧಿ ವಿಚಾರದಲ್ಲಿ ತಮ್ಮ ತಾಕತ್ತು ತೋರಿಸಬೇಕೆ ವಿನಃ ನಿಂದನೆ, ಟೀಕೆ ಮಾಡುವುದರಿಂದ ಜನರಿಂದ ಮತ ಗಿಟ್ಟಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಶಾಸಕ ಸಿ.ಟಿ.ರವಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ತಾಲ್ಲೂಕಿನ ಮಲ್ಲೇನಹಳ್ಳಿಯ ದೇವಿಪುರದಲ್ಲಿ ನಿಮಾರ್ಣವಾಗುತ್ತಿರುವ ನೂತನ ವಿದ್ಯುತ್ ಉಪಕೇಂದ್ರ ನಿರ್ಮಾಣ ಕಾಮಗಾರಿಗೆ ಗುರುವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಜನತೆ ನಕರಾತ್ಮಕ ರಾಜಕಾರಣವನ್ನು ಎಂದಿಗೂ ಒಪ್ಪುವುದಿಲ್ಲ, ಜನಪರ ಚಿಂತನೆಯಿಂದ ನಾಯಕತ್ವದ ಜತೆಗೆ ಪಕ್ಷದ ಬೆಳವಣಿಗೆಯೂ ಆಗಲಿದೆ ಎಂಬುದನ್ನು ಕಾಂಗ್ರೆಸ್ ಅರಿಯಬೇಕು ಎಂದರು.
ಕೋವಿಡ್ ಮತ್ತಿತರ ತಾಂತ್ರಿಕ ಕಾರಣದಿಂದಾಗಿ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳ ಪ್ರವೇಶಾತಿ ಪ್ರಕ್ರಿಯೆ ವಿಳಂಬವಾಗಿದೆ, ಈಗಾಗಲೇ ಬೋದಕ ಹಾಗೂ ಬೋದಕೇತರ ಸಿಬ್ಬಂದಿಗಳ ನೇಮಕಾತಿ ಆಗಿದ್ದು ಮೂಲಭೂತ ಸೌಕರ್ಯಗಳ ಕೊರತೆ ಕಾರಣದಿಂದಾಗಿ ಈ ಬಾರಿಯಲ್ಲಿ ನೇಮಕಾತಿಯಾಗಿಲ್ಲ ಅದಕ್ಕಾಗಿ ಕ್ರಮವಹಿಸಲಾಗುತ್ತಿದೆ ಎಂದರು.
ಕಾಂಗ್ರೆಸ್ ಅವಧಿಯಲ್ಲಿ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜಿಗೆ ಯಾವುದೇ ಪ್ರಯತ್ನ ಮಾಡಿರಲಿಲ್ಲ, ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಮೆಡಿಕಲ್ ಕಾಲೇಜಿಗೆ ಮಂಜೂರಾತಿ ಕೋರಿ ನಿಯೋಗ ಹೋಗಿದ್ದಾಗ ಅಪಮಾನ ಮಾಡಿ ಕಳಿಸಿದ್ದರು. ಇದೀಗ ಮೆಡಿಕಲ್ ಕಾಲೇಜು ನೋಂದಣಿ ವಿಳಂಬಕ್ಕೆ ಸಂಕಟ ಪಡುತ್ತಿರುವುದು, ಮೊಸಳೆ ಕಣ್ಣೀರು ಸುರಿಸಿದಂತೆ ಎಂದು ವ್ಯಂಗ್ಯವಾಡಿದರು.
ಮಲ್ಲೇನಹಳ್ಳಿ ಭಾಗದಲ್ಲಿನ ವಿದ್ಯುತ್ ವೋಲ್ಟೇಜ್ ಬಹುದಿನಗಳ ಸಮಸ್ಯೆಯಾಗಿದ್ದು ಅದನ್ನು ಬಗೆಹರಿಸುವಂತೆ ಇಲ್ಲಿನ ಜನರ ಬಹುದಿನಗಳ ಬೇಡಿಕೆಯಿಟ್ಟಿದ್ದರು. ಕೋವಿಡ್ ಜತೆಗೆ ಜಾಗದ ಸಮಸ್ಯೆಯಿಂದಾಗಿ ಕಾಮಗಾರಿಗೆ ಚಾಲನೆ ದೊರೆತಿರಲಿಲ್ಲ. ಇದೀಗ ಸಮಸ್ಯೆ ನಿವಾರಣೆಯಾಗಿದ್ದು ಹೊಸದಾಗಿ ವಿದ್ಯುತ್ ಉಪಕೇಂದ್ರ ನಿರ್ಮಾಣವಾಗಲಿದ್ದು ಇದರಿಂದ ಸುತ್ತಮುತ್ತಲಿನ ಗ್ರಾಮಗಳಿಗೆ ಉತ್ತಮ ಗುಣಮಟ್ಟದ ವಿದ್ಯುತ್ ಪೂರೈಕೆಯಾಗಲಿದೆ ಎಂದರು.
ಇನ್ನು ಮಲ್ಲಂದೂರು, ಗಾಣದಾಳು ಪಂಚಾಯಿತಿ ವ್ಯಾಪ್ತಿಯಲ್ಲಿ ವಿದ್ಯುತ್ ಉಪಕೇಂದ್ರ ನಿರ್ಮಾಣಕ್ಕೆ ಮಂಜೂರಾತಿ ದೊರಕಿದೆ. ಆದರೆ ಅಲ್ಲಿಯೂ ಅರಣ್ಯ, ಡೀಮ್ಡ್ ಜಾಗದ ಸಮಸ್ಯೆ ಕಾರಣ ಸ್ಟೇಷನ್ ನಿರ್ಮಾಣ ವಿಳಂಬವಾಗಿದೆ ಎಂದರು.
ದೇಶದಲ್ಲಿ ನವೀಕರಿಸಬಹುದಾದ ಇಂಧನಗಳ ಬಳಕೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ವಿಶೇಷ ಆದ್ಯತೆ ನೀಡಿದ್ದು ಅದರಂತೆ ಸೋಲಾರ್ ಪ್ಲಾಂಟ್ ಅಳವಡಿಕೆಗೆ ಒತ್ತು ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕಲ್ಲಿದ್ದಲು ಒಳಗೊಂಡಂತೆ ಮುಗಿಯುವ ಸಂಪನ್ಮೂಲಗಳ ಕೊರತೆ ಎದುರಾದಾಗ ಸೋಲಾರ್ ಅಳವಡಿಕೆ ತಂತ್ರಜ್ಞಾನ ಉಪಯುಕ್ತವಾಗಲಿದೆ ಎಂದು ತಿಳಿಸಿದರು.
ವಿದ್ಯುತ್ ಸರಬರಾಜು ಇಲಾಖೆ ಶಿವಮೊಗ್ಗ ಅಧಿಕಾರಿ ವೆಂಕಟೇಶ್ ಪ್ರಸಾದ್ ಮಾತನಾಡಿ ಈ ಭಾಗದಲ್ಲಿ ಹೊಸದಾಗಿ ವಿದ್ಯುತ್ ಪರಿವರ್ತಕ ಅಳವಡಿಕೆಯಿಂದಾಗಿ ಉತ್ತಮ ಗುಣಮಟ್ಟದ ವಿದ್ಯುತ್ ಪಡೆಯಲು ಸಾಧ್ಯವಾಗಲಿದೆ ಎಂದರು.
ಈ ಹಿಂದೆ ಮುಳ್ಳಯ್ಯನಗಿರಿ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಜನರು ವಿದ್ಯುತ್‌ನ ಅಡಚಣೆಯ ತೀವ್ರ ಸಮಸ್ಯೆ ಉಂಟಾಗುತ್ತಿರುವ ಗ್ರಾಮಸ್ಥರು ಹಲವು ಬಾರಿ ಮನವಿ ಕೂಡ ಸಲ್ಲಿಸಿದ್ದರು ೮ ಲೈನ್‌ಗಳನ್ನು ಅಳವಡಿಕೆ ಮಾಡಿದ್ದು ಉತ್ತಮ ಗುಣಮಟ್ಟದ ವಿದ್ಯುತ್ ಪೂರೈಕೆಯಾಗಲಿದೆ ಜತೆಗೆ ವಿದ್ಯುತ್ ಸಮಸ್ಯೆ ನಿವಾರಣೆಯಾಗಲಿದೆ ಎಂದು ತಿಳಿಸಿದರು.
ಜಿ.ಪಂ ಮಾಜಿ ಸದಸ್ಯೆ ಜಸಂತಾಅನಿಲ್‌ಕುಮಾರ್ ಮಾತನಾಡಿ ವಿದ್ಯುತ್ ಪರಿವರ್ತಕ ಅಳವಡಿಸಬೇಕು ಎಂಬುದು ಇಲ್ಲಿನ ಜನರ ಬಹುದಿನಗಳ ಬೇಡಿಕೆಯಾಗಿತ್ತು. ಅನೇಕ ಗ್ರಾಮಸಭೆಗಳಲ್ಲಿ ಜನರು ಈ ಬಗ್ಗೆ ಪ್ರಸ್ತಾಪ ಮಾಡುತ್ತಿದ್ದರು ಇದೀಗ ಹೊಸ ವಿದ್ಯುತ್ ಘಟಕ ನಿರ್ಮಾಣದಿಂದಾಗಿ ಗುಣಮಟ್ಟದ ವಿದ್ಯುತ್ ಪೂರೈಕೆಯಾಗಲಿದ್ದು ಜನತೆ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗಲಿದೆ ಎಂದರು.
ದೇವಿರಮ್ಮ ದೇವಸ್ಥಾನ ಸಮಿತಿ ಅಧ್ಯಕ್ಷರಾದ ಕುಲಶೇಖರ್ ಮಾತನಾಡಿ ಕಳೆದ ೧೫ ವರ್ಷಗಳಿಂದ ವಿದ್ಯುತ್ ಸಮಸ್ಯೆ ತಲೆದೋರಿತ್ತು, ಇದೀಗ ಇಲ್ಲಿನ ಗ್ರಾಮಸ್ಥರು ಒಂದಾಗಿ ಜಮೀನು ಮನೆಯಲ್ಲಿನ ಬೇಲಿ ಸೇರಿದಂತೆ ಅಗತ್ಯ ಜಾಗವನ್ನು ಬಿಡುವ ಮೂಲಕ ಉದಾರತೆ ತೋರಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಗ್ರಾಮಪಂಚಾಯಿತಿ ಅಧ್ಯಕ್ಷೆ ಪುಟ್ಟಮ್ಮ, ಉಪಾಧ್ಯಕ್ಷೆ ಪ್ರೇಮಾ, ತೊಗರಿ ಹಂಕಲ್ ಪಂಚಾಯಿತಿ ಅಧ್ಯಕ್ಷೆ ಸೆಲ್ವಿ, ಸುರೇಶ್, ಅನಿಲ್, ಸತೀಶ್, ಸಂದೀಪ್, ಪ್ರಸನ್ನ, ಸೇರಿದಂತೆ ಮತ್ತಿತರರು ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!