spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಸೆ.26ರಂದು ಮಾಯಮುಡಿಯಲ್ಲಿ ತೋಕ್ ನಮ್ಮೆ: ರಾಜ್ಯ ಮಟ್ಟದ ಶೂಟಿಂಗ್ ಸ್ಪರ್ಧೆ

- Advertisement -Nitte

ಹೊಸದಿಗಂತ ವರದಿ, ಪೊನ್ನಂಪೇಟೆ:

ಮಾಯಮುಡಿಯ ‘ಐರನ್ ಸೈಟ್ ಶೂಟರ್ಸ್’ ತಂಡದ ವತಿಯಿಂದ ಕೈಲ್ ಪೊಳ್ದ್ ಹಬ್ಬದ ಅಂಗವಾಗಿ ತೋಕ್ ನಮ್ಮೆ ಮತ್ತು ತೆಂಗಿನಕಾಯಿಗೆ ಗುಂಡು ಹೊಡೆಯುವ 2ನೇ ವರ್ಷದ ರಾಜ್ಯ ಮಟ್ಟದ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಸ್ಪರ್ಧೆಯ ಯೋಜನಾ ನಿರ್ದೇಶಕರೂ ಆಗಿರುವ ಮಾಯಮುಡಿಯ ‘ಐರನ್ ಸೈಟ್ ಶೂಟರ್ಸ್’ ತಂಡದ ಮುಖ್ಯಸ್ಥ ಆಪಟ್ಟೀರ ಆರ್. ಅಯ್ಯಪ್ಪ ಅವರು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆಪ್ಟಂಬರ್ 26ರ ಭಾನುವಾರ ಆಯೋಜಿಸಲಾಗಿರುವ ಈ ಸ್ಪರ್ಧೆಯು ಗೋಣಿಕೊಪ್ಪ ಸಮೀಪದ ಮಾಯಮುಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಲಿದೆ. ಈ ಶೂಟಿಂಗ್ ಸ್ಪರ್ಧೆಯಲ್ಲಿ 0.22 ರೈಫಲ್ ನಲ್ಲಿ ಮಾತ್ರ ತೆಂಗಿನಕಾಯಿಗೆ ಗುಂಡು ಹೊಡೆಯುವ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.
ಈ ಬಾರಿಯ ವಿಶೇಷ ಆಕರ್ಷಣೆಯಾಗಿ 0.22 ರೈಫಲ್ ನಿಂದ ಕೋಳಿ ಮೊಟ್ಟೆಗೆ ಗುಂಡು ಹೊಡೆಯುವ ಸ್ಪರ್ಧೆಯನ್ನು ಹೆಚ್ಚುವರಿಯಾಗಿ ಆಯೋಜಿಸಲಾಗಿದೆ. ತೆಂಗಿನಕಾಯಿಗೆ 50 ಮೀಟರ್ ಅಂತರದಲ್ಲಿ ಮತ್ತು ಕೋಳಿ ಮೊಟ್ಟೆಗೆ 25 ಮೀಟರ್ ಅಂತರದಲ್ಲಿ ಗುಂಡು ಹೊಡೆದು ಸ್ಪರ್ಧಿಗಳು ತಮ್ಮ ಅದೃಷ್ಟವನ್ನು ಪರೀಕ್ಷಿಸಿಕೊಳ್ಳಬಹುದು ಎಂದರು.
ಎರಡು ಪ್ರತ್ಯೇಕ ಸ್ಪರ್ಧೆಯಲ್ಲಿ ವಿಜಯಗಳಾಗುವ ಸ್ಪರ್ಧಿಗಳಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನವನ್ನು ನೀಡಲಾಗುವುದು. ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಕ್ರಮವಾಗಿ15ಸಾವಿರ, 10ಸಾವಿರ ಮತ್ತು 7ಸಾವಿರ, ಅಲ್ಲದೆ ಕೋಳಿ ಮೊಟ್ಟೆಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಕ್ರಮವಾಗಿ 7ಸಾವಿರ, 5ಸಾವಿರ ಮತ್ತು 3ಸಾವಿರ ನಗದು ಬಹುಮಾನದೊಂದಿಗೆ ಆಕರ್ಷಕ ಪಾರಿತೋಷಕ ವಿತರಿಸಲಾಗುವುದು ಎಂದು ತಿಳಿಸಿದರು.
ಆಸಕ್ತರು ಯಾವುದೇ ವಯೋಮಿತಿಯ ನಿರ್ಬಂಧವಿಲ್ಲದೆ ಮುಕ್ತವಾಗಿ ಭಾಗವಹಿಸಬಹುದಾದ ಈ ಸ್ಪರ್ಧೆಯಲ್ಲಿ ಅಂದು ಬೆಳಗ್ಗೆ 10 ಗಂಟೆಯೊಳಗಾಗಿ ಸ್ಪರ್ಧಿಗಳು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿರುತ್ತದೆ. ಸ್ಪರ್ಧೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9611870813ಅನ್ನು ಸಂಪರ್ಕಿಸಬಹುದಾಗಿದೆ ಎಂದರು.
ಕಳೆದ ವರ್ಷ ಮೊದಲ ಬಾರಿಗೆ ಆಯೋಜಿಸಲಾಗಿದ್ದ ಈ ಸ್ಪರ್ಧೆ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿತ್ತು. ಅದೇ ರೀತಿ ಈ ವರ್ಷವೂ ಹೆಚ್ಚಿನ ಸ್ಪರ್ಧಿಗಳನ್ನು ನಿರೀಕ್ಷಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯ ಮಟ್ಟದ ಸ್ಪರ್ಧೆಯಾಗಿ ಇದನ್ನು ವಿಸ್ತರಿಸಲಾಗಿದೆ ಎಂದು ಅಯ್ಯಪ್ಪ ವಿವರಿಸಿದರು.
ಗೋಷ್ಠಿಯಲ್ಲಿ ಉಪಸ್ಥಿತರಿದ್ದ ಸ್ಪರ್ಧೆಯ ಸಂಚಾಲಕ ಕಂಜಿತಂಡ ಡಬ್ಲ್ಯೂ. ಪೊನ್ನಪ್ಪ ಅವರು ಮಾತನಾಡಿ, ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯು ಕೊಡಗಿನ ಪುರಾತನ ಗ್ರಾಮೀಣ ಕ್ರೀಡೆಯಾಗಿದೆ. ಮಾಹಿತಿ ತಂತ್ರಜ್ಞಾನಗಳ ಆವಿಷ್ಕಾರದೊಂದಿಗೆ ಆಧುನಿಕ ಕ್ರೀಡೆಗಳು ಹೆಚ್ಚಾದ ಈ ಕಾಲಘಟ್ಟದಲ್ಲಿ ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚು ಪ್ರಾಶಸ್ತ್ಯ ಇಲ್ಲದಾಗಿದೆ. ಇದರಿಂದ ಬಹಳಷ್ಟು ಗ್ರಾಮೀಣ ಕ್ರೀಡೆಗಳು ಜನರಿಂದ ದೂರವಾಗುತ್ತಿವೆ. ಇದನ್ನು ಮನಗಂಡ ಮಾಯಮುಡಿಯ ಕ್ರಿಯಾಶೀಲ ಯುವಕರು ‘ಐರನ್ ಸೈಟ್ ಶೂಟರ್ಸ್’ ಎಂಬ ಹೆಸರಿನ ಶೂಟರ್ಸ್ ತಂಡವನ್ನು ಕಳೆದ ವರ್ಷ ಅಸ್ತಿತ್ವಕ್ಕೆ ತಂದಿರುವುದಾಗಿ ತಿಳಿಸಿದರು.
ಈ ಸಂಸ್ಥೆ ವತಿಯಿಂದ ಮುಂದೆ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ಮತ್ತು ತೋಕ್ ನಮ್ಮೆ (ಬಂದೂಕು ಉತ್ಸವ)ಗಳನ್ನು ನಿರಂತರವಾಗಿ ಆಯೋಜಿಸುವ ಗುರಿ ಹೊಂದಲಾಗಿದೆ ಎಂದೂ ಅವರು ಹೇಳಿದರು.
ಗೋಷ್ಠಿಯಲ್ಲಿ ಆಪಟ್ಟೀರ ಟಾಟು ಮೊಣ್ಣಪ್ಪ ಉಪಸ್ಥಿತರಿದ್ದರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss