Wednesday, August 17, 2022

Latest Posts

ನಾಳೆಯಿಂದ ಉಡುಪಿ ಜಿಲ್ಲೆಯಲ್ಲಿ ಕಠಿಣ ಲಾಕ್‌ಡೌನ್ ಜಾರಿ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………

ಹೊಸ ದಿಗಂತ ವರದಿ, ಉಡುಪಿ:

ರಾಜ್ಯ ಸರಕಾರದ ಆದೇಶದಂತೆ ನಾಳೆ (ಮೇ 10) ಬೆಳಗ್ಗೆ 6ಗಂಟೆಯಿಂದಲೇ ಉಡುಪಿ ಜಿಲ್ಲೆಯಲ್ಲಿ ಕಠಿಣ ಲಾಕ್‌ಡೌನ್ ಜಾರಿಗೆ ಬರಲಿದೆ. ಈ ಮಧ್ಯೆ ಯಾರಾದರೂ ವಾಹನದಲ್ಲಿ ರಸ್ತೆಗಿಳಿಸಿದರೆ, ಅವುಗಳನ್ನು ಮುಟ್ಟುಗೋಲು ಹಾಕಿ, ಪ್ರಕರಣ ದಾಖಲಿಸಿಕೊಳ್ಳಲಾಗುತ್ತದೆ. ನಮ್ಮ ಇಲಾಖೆ ಸರ್ವ ಸನ್ನದ್ಧವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ್ ತಿಳಿಸಿದ್ದಾರೆ.
‘ಹೊಸದಿಗಂತ’ದೊಂದಿಗೆ ಮಾತನಾಡಿದ ಎಸ್ಪಿ, ಸರಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಅನುಷ್ಠಾನಿಸುತ್ತೇವೆ. ಎಲ್ಲರೂ ಸರಕಾರದ ಆದೇಶವನ್ನು ಪಾಲಿಸಬೇಕು. ಇದನ್ನೂ ಮೀರಿ ಯಾರಾದರೂ ವಾಹನದೊಂದಿಗೆ ಹೊರಗೆ ಬಂದರೆ ಅಂತಹ ವಾಹನಗಳನ್ನು ವಶಪಡಿಸಿಕೊಳ್ಳುತ್ತೇವೆ. ಪ್ರಕರಣ ದಾಖಲಿಸಿಕೊಳ್ಳುತ್ತೇವೆ. ನಂತರ ಮುಟ್ಟುಗೋಲು ಹಾಕಿಕೊಂಡ ವಾಹನಗಳನ್ನು ನ್ಯಾಯಾಲಯದ ಮೂಲಕವೇ ಬಿಡಿಸಿಕೊಳ್ಳಬೇಕು ಎಂದರು.
21 ಚೆಕ್‌ಪೋಸ್ಟ್‌ಗಳು ಕಾರ್ಯಾಚರಣೆ
ಸಾರ್ವಜನಿಕರು ಸರಕಾರದ ಮಾರ್ಗದರ್ಶನದಂತೆ ನಮ್ಮೊಂದಿಗೆ ಸಹಕರಿಸಬೇಕು. ಅನಾವಶ್ಯಕವಾಗಿ ಮನೆಗಳಿಂದ ಹೊರಗೆ ಬಾರದೇ ಕೋವಿಡ್-19 ಸೋಂಕಿನ ಸರಪಳಿಯನ್ನು ಮುರಿಯಲು ಸಹಕರಿಸಬೇಕು ಎಂದಿರುವ ಎಸ್ಪಿ, ಪೊಲೀಸ್ ಇಲಾಖೆ ಅನಾವಶ್ಯಕವಾಗಿ ರಸ್ತೆಗಿಳಿಯುವವರ ವಿರುದ್ಧ ಕಾರ್ಯಾಚರಣೆ ನಡೆಸುವುದಕ್ಕೆ ಜಿಲ್ಲೆಯ ವಿವಿಧ ಕಡೆಗಳಲ್ಲಿ ಚೆಕ್ ಪೋಸ್ಟ್ ರಚಿಸಿದೆ. ಹಗಲು ಹೊತ್ತಿನಲ್ಲಿ ಜಿಲ್ಲೆಯ ಗಡಿ ಭಾಗಗಳು, ನಗರ ಸಹಿತ ಜಿಲ್ಲೆಯಾದ್ಯಂತ 21 ಚೆಕ್ ಪೋಸ್ಟ್‌ಗಳು ಕಾರ್ಯಾಚರಿಸುತ್ತಿವೆ. ರಾತ್ರಿ ವೇಳೆ 19 ಚೆಕ್ ಪೋಸ್ಟ್‌ಗಳು ಹದ್ದಿನ ಕಣ್ಣಿಟ್ಟಿವೆ. ದಿನದ 24 ತಾಸು ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ನಡೆಸಲಾಗುತ್ತದೆ ಎಂದು ತಿಳಿಸಿದರು.
ಅಂತರ್ ಜಿಲ್ಲಾ ಸಂಚಾರಕ್ಕೂ ಅವಕಾಶವಿಲ್ಲ
ಜಿಲ್ಲೆಯ ಗಡಿ ಭಾಗಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಲಾಗಿದೆ. ಹೊಸ ಆದೇಶದ ಪ್ರಕಾರ ಅಂತರ್ಜಿಲ್ಲಾ ಸಂಚಾರಕ್ಕೂ ಅವಕಾಶವಿಲ್ಲ. ಹಾಗಾಗಿ ತುರ್ತು ಅನಿವಾರ್ಯತೆಯ ವಿನಾ ಯಾರಿಗೂ ಜಿಲ್ಲೆಯ ಪ್ರವೇಶಕ್ಕೆ ಅನುಮತಿ ನೀಡುವುದಿಲ್ಲ. ಉಡುಪಿ ಜಿಲ್ಲೆಯನ್ನು ಸಂಪರ್ಕಿಸುವ ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಗಡಿ ಭಾಗಗಳಲ್ಲಿ ಕಟ್ಟು ನಿಟ್ಟಾಗಿ ತಪಾಸಣೆ ನಡೆಸಲಾಗುತ್ತದೆ. ಅನಾವಶ್ಯವಾಗಿ ಅಂತರ್ ಜಿಲ್ಲಾ ಸಂಚಾರ ನಿರ್ಬಂಧಿಸಲಾಗುತ್ತದೆ ಎಂದು ಎಸ್ಪಿ ವಿಷ್ಣುವರ್ಧನ್ ಹೇಳಿದರು.
ಭಾನುವಾರ ಪೊಲೀಸರು 18 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದು ದಂಡ ವಿಧಿಸಿದ್ದಾರೆ. ಅಲ್ಲದೇ ಮೋಟಾರು ವಾಹನ ಕಾಯ್ದೆ ಉಲ್ಲಂಘಿಸಿದ 79 ದ್ವಿಚಕ್ರವಾಹನಗಳು, ನಾಲ್ಕು ಚಕ್ರದ 5 ವಾಹನ ಹಾಗೂ ತ್ರಿಚಕ್ರದ ಎರಡು ವಾಹನಗಳಿಗೆ ದಂಡ ಹಾಕಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ್ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!