ಹೊಸದಿಗಂತ ವರದಿ,ವಿಜಯಪುರ:
ಗುಮ್ಮಟ ನಗರಿಯಲ್ಲಿ ಮಂಗಳವಾರ ಸಂಜೆ ಧಾರಾಕಾರವಾಗಿ ಸುರಿದ ಮಳೆಗೆ ಕೆಲ ರಸ್ತೆಗಳು ನದಿಯಂತೆ ತುಂಬಿ ಹರಿದಿದ್ದು, ವಾಹನ ಸವಾರರು ಪರದಾಡುವಂತಾಯಿತು.
ನಗರದಲ್ಲಿ ಬೆಳಗ್ಗೆಯಿಂದ ಬಿಸಿಲಿನ ವಾತಾವರಣ ಇದ್ದರೆ, ಮಧ್ಯಾಹ್ನದ ಬಳಿಕ ದಟ್ಟ ಕಾರ್ಮೋಡ ಕವಿದು, ಸಂಜೆ ವೇಳೆ ಒಂದು ಗಂಟೆಗೂ ಹೆಚ್ಚು ಕಾಲ ಜೋರಾಗಿ ಮಳೆಯಾಗಿದೆ. ಇದರಿಂದ ಕೆಲ ಹೊತ್ತು ಸಾರ್ವಜನಿಕರ ಜೀವನ ಅಸ್ತವ್ಯಸ್ತಗೊಳ್ಳುವಂತಾಯಿತು.
ಜೋರಾದ ಮಳೆಗೆ ನಗರದ ಹಲವು ಪ್ರಮುಖ ರಸ್ತೆಗಳು ನದಿಯಂತೆ ತುಂಬಿ ಹರಿದು ವಾಹನ ಸಂಚಾರಕ್ಕೆ ಅಡ್ಡಿಯುಂಟು ಮಾಡಿತು. ಇಲ್ಲಿನ ಪ್ರಮುಖ ಸ್ಟೇಶನ್ ರಸ್ತೆಯ ಕಾಮತ್ ಹೋಟೆಲ್ ಬಳಿ, ಬಡಿ ಕಮಾನ್ ರಸ್ತೆ, ಶಿಕಾರಖಾನೆ ಬಳಿಯ ಚೌಧ್ರಿ ಆಸ್ಪತ್ರೆ ರಸ್ತೆ ಸೇರಿದಂತೆ ಹಲವು ರಸ್ತೆಗಳು ನದಿಯಂತೆ ಮಾರ್ಪಟ್ಟಿದ್ದವು. ಮೊಳಕಾಲು ವರೆಗೆ ಮಡುಗಟ್ಟಿ ನಿಂತ ನೀರಿನಲ್ಲಿ ವಾಹನ ಸವಾರರು ಸಂಚರಿಸಲು ಸಮಸ್ಯೆ ಎದುರಿಸುವಂತಾಯಿತು.
ಇನ್ನು ಶಾಲಾ ಮಕ್ಕಳು ಹಾಗೂ ಮಾರುಕಟ್ಟೆಗೆ ತೆರಳಿದ ಜನರು ಮಳೆಯಲ್ಲಿ ತೊಯ್ದು ತೊಬ್ಬೆಯಾಗಿ ಮನೆಗೆ ಸೇರುವಂತಾಯಿತು.