Tuesday, July 5, 2022

Latest Posts

ಮಳೆಗಾಲ ಮುಗಿಯುವವರೆಗೂ ಕೊಡಗಿನಲ್ಲಿ ಪ್ರವಾಸೋದ್ಯಮಕ್ಕೆ ಅವಕಾಶ ಬೇಡ: ಅಖಿಲ ಕೊಡವ ಸಮಾಜ ಯೂತ್ ವಿಂಗ್ ಒತ್ತಾಯ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸ ದಿಗಂತ ವರದಿ, ಮಡಿಕೇರಿ:

ರಾಜ್ಯದಲ್ಲಿ‌ ಜೂ.14ರ ಬಳಿಕ ಲಾಕ್ ಡೌನ್ ತೆರವುಗೊಂಡರೂ ಕೊಡಗು ಜಿಲ್ಲೆಯಲ್ಲಿ ಮಳೆಗಾಲ ಮುಗಿಯುವವರೆಗೆ ಪ್ರವಾಸೋದ್ಯಮಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರಸು ಎಂದು ಅಖಿಲ ಕೊಡವ ಸಮಾಜ ಯೂತ್ ವಿಂಗ್ ಒತ್ತಾಯಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಂಘಟನೆಯ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಅವರು, ಕೊಡಗಿನಲ್ಲಿ ಮಳೆಗಾಲದಲ್ಲಿ ಜಲತೊರೆಗಳನ್ನು ವೀಕ್ಷಿಸಲು ಹಾಗೂ ಇಲ್ಲಿನ ಪ್ರಕೃತಿ ಸೌಂದರ್ಯ ಅನುಭವಿಸಲು ಮತ್ತೆ ಜನಸಾಗರ ಹರಿದು ಬರುವ ಸಾಧ್ಯತೆ ಹೆಚ್ಚಾಗಿದೆ. ಇದರಿಂದ ಜಿಲ್ಲೆಯಲ್ಲಿ ಮತ್ತೆ ಕೊರೋನಾ ಸೋಂಕು ಅಧಿಕಗೊಳ್ಳಲು ಕಾರಣವಾಗಲಿದೆ.‌ಆದ್ದರಿಂದ
ಮಳೆಗಾಲ ಮುಗಿಯುವವರೆಗೂ ಪ್ರವಾಸೋದ್ಯಮಕ್ಕೆ ಅವಕಾಶ ಮಾಡಿಕೊಡಬಾರದು. ಒಂದು ವೇಳೆ ಪ್ರವಾಸೋದ್ಯಮಕ್ಕೆ ಅವಕಾಶ ಮಾಡಿಕೊಟ್ಟರೆ ಕೊಡಗಿನಾದ್ಯಂತ ಸಂಘಟಿತ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಈಗಾಗಲೇ ಕೊಡಗಿನ ಜನರು ಕಳೆದ ಮೂರು ವರ್ಷಗಳಿಂದ ನಿರಂತರ ನೆರೆಹಾವಳಿ, ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿ ಸಂಕಷ್ಟದಲ್ಲಿದ್ದು, ಇದೀಗ ಕೊರೋನಾ ಸಾವು ನೋವುಗಳು ಹಾಗೂ ಲಾಕ್ ಡೌನ್’ನಿಂದ ಜನರು ತತ್ತರಿಸಿದ್ದಾರೆ. ಅನೇಕ ಜನರು ತಮ್ಮವರನ್ನು ಕಳೆದುಕೊಂಡು ನೋವಿನಲ್ಲಿದ್ದು ಇದೀಗ ಒಂದಷ್ಟು ಚೇತರಿಸಿಕೊಳ್ಳುತ್ತಿದ್ದಾರೆ. ಹೀಗಿರುವಾಗ ಮತ್ತೆ ಪ್ರವಾಸೋದ್ಯಮ ತೆರೆದುಕೊಂಡರೆ ಹೆಮ್ಮಾರಿ ಕೊರೋನಾ ಅಲೆ ಬಂದು ಅಪ್ಪಳಿಸಲಿದೆ. ಇದಕ್ಕೆ ಜಿಲ್ಲಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಅವಕಾಶ ಮಾಡಿಕೊಡಬಾರದು ಎಂದು ಅವರು ಆಗ್ರಹಿಸಿದ್ದಾರೆ.
ಇಂದು ಪ್ರವಾಸೋದ್ಯಮದಿಂದಲೇ ಕೊಡಗಿನಂತಹ ಪುಟ್ಟ ಜಿಲ್ಲೆ ಡೇಂಜರ್ ಝೋನ್ ಗೆ ತಲುಪಿದ್ದು, ಇದೀಗ ಕೊಡಗು ಜಿಲ್ಲೆ ಒಂದಷ್ಟು ಚೇತರಿಸಿಕೊಂಡಿದೆ ಹೊರತು ಸಂಪೂರ್ಣವಾಗಿ ಕೊರೋನಾ ಮುಕ್ತವಾಗಿಲ್ಲ. ಹಳ್ಳಿ ಹಳ್ಳಿಗಳಿಗೂ ವ್ಯಾಪಿಸಿರುವ ಕೊರೋನಾ ಅಲೆ ಅದೆಷ್ಟೋ ಮುಗ್ಧ ಜೀವಗಳನ್ನು ಬಲಿ ತೆಗೆದುಕೊಂಡಿದೆ. ಮತ್ತೆ ನಮ್ಮವರನ್ನು ಸಾವಿನ ದವಡೆಗೆ ತಳ್ಳಲು ನಾವು ಸಿದ್ಧರಿಲ್ಲ ಯಾವುದೇ ಕಾರಣಕ್ಕೂ ಮಳೆಗಾಲ ಮುಗಿಯುವವರೆಗೂ ಹೋಂಸ್ಟೇ, ರೆಸಾರ್ಟ್ ಸೇರಿದಂತೆ ಪ್ರವಾಸೋದ್ಯಮಗಳು ಸಂಪೂರ್ಣ ಬಂದ್ ಆಗಿಯೇ ಇರಬೇಕು. ಇವರಲ್ಲಿ ಆರ್ಥಿಕವಾಗಿ ತುಂಬಾ ಸಂಕಷ್ಟದಲ್ಲಿರುವವರಿಗೆ ಸರಕಾರವೇ ಸಹಕಾರ ನೀಡಬೇಕು ಹೊರತು ಜಿಲ್ಲೆಯ ಜನರನ್ನು ಬಲಿಕೊಡುವುದು ಬೇಡ ಎಂದು ಅವರು ಹೇಳಿದ್ದಾರೆ.
ರಾಜ್ಯದಲ್ಲಿ ಅನ್ ಲಾಕ್ ಆದರೂ ಜಿಲ್ಲೆಯಲ್ಲಿ ಲಾಕ್ ಡೌನ್ ನಿಯಮಗಳಲ್ಲಿ ಒಂದಿಷ್ಟು ಸಡಿಲಿಕೆ ನೀಡಬಹುದೇ ಹೊರತು ಮಳೆಗಾಲ ಮುಗಿಯುವವರೆಗೂ ಸಂಪೂರ್ಣ ಸಡಿಲಿಕೆ ಬೇಡ. ಗಡಿ ತಪಾಸಣೆ ವ್ಯವಸ್ಥೆ ಮಳೆಗಾಲ ಮುಗಿಯುವವರೆಗೂ ಮುಂದುವರಿಯಲಿ.ಕೇವಲ ಹೊರಜಿಲ್ಲೆಯಲ್ಲಿರುವ ಕೊಡಗು ಮೂಲದವರಿಗೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅವಕಾಶ ನೀಡಿದರೆ ಮಾತ್ರ ಸಾಕು. ಅವರು ಕೂಡ ಎಲ್ಲೆಂದರಲ್ಲಿ ಓಡಾಡದೆ ಜಿಲ್ಲೆಯ ಜನರ ಆರೋಗ್ಯದ ಕಡೆ ಕೂಡಾ ಗಮನ ಹರಿಸಬೇಕಿದೆ ಎಂದು ಪ್ರವೀಣ್ ಉತ್ತಪ್ಪ ತಿಳಿಸಿದ್ದಾರೆ.
ಕೊಡಗಿನಲ್ಲಿ ಈಗಾಗಲೇ ಮಳೆಗಾಲದ ಮುನ್ಸೂಚನೆಯಿದ್ದು, ಕೊಡಗು ಮಲೆನಾಡು ಪ್ರದೇಶವಾಗಿರುವ ಕಾರಣ ನಗರ ಪ್ರದೇಶಗಳಲ್ಲಿ ಹೆಚ್ಚುವರಿ ಇರುವ ಕೊರೋನಾ ನಿರೋಧಕ ಚುಚ್ಚುಮದ್ದುಗಳನ್ನು ಕೊಡಗಿಗೆ ತರಿಸಿಕೊಳ್ಳುವ ಮೂಲಕ ತ್ವರಿತವಾಗಿ ಜಿಲ್ಲೆಯಲ್ಲಿ 45ರ ಮೇಲ್ಪಟ್ಟ ವಯೋಮಿತಿಯವರಿಗೆ ಮಾತ್ರವಲ್ಲದೆ,18ರ ಮೇಲಿರುವವರಿಗೂ ನೀಡಬೇಕಿದೆ. ಮುಂದಿನ ವಾರದಿಂದ ಬಿರುಸಿನ ಮಳೆ ಪ್ರಾರಂಭವಾದರೆ ಜನರು ಹೊರಗೆ ಬರುವುದು ಕಷ್ಟ ಸಾಧ್ಯವಾಗಿರುವುದರಿಂದ ಇದನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಅವರು ಸಲಹೆ ಮಾಡಿದ್ದಾರೆ.
ಈಗಾಗಲೇ ಕೊಡಗನ್ನು 15ರಿಂದ 20 ದಿವಸ ಸಂಪೂರ್ಣ ಲಾಕ್ ಡೌನ್ ಮಾಡುವಂತೆ ಒತ್ತಾಯಿಸಲಾಗಿತ್ತಾದರೂ, ಇದಕ್ಕೆ ಯಾವುದೇ ಸ್ಪಂದನೆ ದೊರಕಿಲ್ಲ ಎಂದೂ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss