ಸಾಂಪ್ರದಾಯಿಕ ಶ್ರೀರಂಗಪಟ್ಟಣ ದಸರಾ: ಶಾಸಕರಿಂದ ಸ್ಥಳ ಪರಿಶೀಲನೆ

ಹೊಸದಿಗಂತ ವರದಿ,ಶ್ರೀರಂಗಪಟ್ಟಣ :

ಶ್ರೀರಂಗಪಟ್ಟಣದಲ್ಲಿ ಇದೇ ಅ.16ರಿಂದ 18ರವರೆಗೆ ನಡೆಯಲಿರುವ ಮೂರು ದಿನಗಳ ಸಾಂಪ್ರದಾಯಿಕ ದಸರ ಆಚರಣೆ ಹಿನ್ನೆಲೆ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅಧಿಕಾರಿಗಳೊಂದಿಗೆ ತೆರೆಳಿ ಅಂಬಾರಿ ಮೆರವಣಿಗೆಗೆ ಚಾಲನೆ ದೊರೆಯುವ ಕಿರಂಗೂರು ಬನ್ನಿಮಂಟಪ ಹಾಗೂ ಶ್ರೀರಂಗನಾಥಸ್ವಾಮಿ ದೇಗುಲದ ಬಳಿಯ ಆವರಣದಲ್ಲಿ ಹಾಕಲಾಗುವ ವೇಧಿಕೆ ಸ್ಥಳಗಳನ್ನು ಪರಿಶೀಲಿಸಿದರು.

ಐತಿಹಾಸಿಕ ಶ್ರೀರಂಗಪಟ್ಟಣ ದಸರಾ ಆರಂಬಕ್ಕೆ ಇನ್ನು 5 ದಿನಗಳು ಬಾಕಿ ಇದ್ದು, ಕಾರ್ಯಕ್ರಮಗಳ ಸಿದ್ದತೆಯನ್ನು ಅ.15 ರ ಒಳೆಗೆ ಪೂರ್ಣಗೊಳಿಸಬೇಕು ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ಹೇಳಿದರು. ಬಳಿಕ ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ದಸರಾ ಮಹೋತ್ಸವದ ಅಂಗವಾಗಿ ಉಪವಿಭಾಗಾಧಿಕಾರಿಗಳ ನೇತೃತ್ವದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಶ್ರೀರಂಗಪಟ್ಟಣ ದಸರಾ ಆಚರಣೆ ಅಚ್ಚುಕಟ್ಟಾಗಿ ನಡೆಯಲು ಅಧಿಕಾರಿಗಳು ಸಹಕಾರ ನೀಡಬೇಕು. ದಸರಾ ಮಹೋತ್ಸವದ ವೇದಿಕೆ ನಿರ್ಮಾಣ, ದಸರಾ ಬನ್ನಿಮಂಟಪ ನಿರ್ವಹಣೆ, ಅಂಬಾರಿ ಹೊರುವ ಆನೆಗಳ ರಕ್ಷಣೆ, ಮೆರವಣಿಗೆ, ರಸ್ತೆಗೆ ವಿದ್ಯುತ್ ದೀಪಾಲಂಕಾರ, ವೇದಿಕೆ ಸುತ್ತಲೂ ವಸ್ತು ಪ್ರದರ್ಶನ, ಮಳಿಗೆ ನಿರ್ಮಾಣ, ದಸರಾ ವೇದಿಕೆಯಲ್ಲಿ ನಡೆಯುವ ಉದ್ಘಾಟನಾ ಕಾರ್ಯಕ್ರಮಕ್ಕೆ ಬಂದ ಅಥಿತಿಗಳಿಗೆ ಗೌರವ, ವೇದಿಕೆಯಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳ ಪಟ್ಟಿ ಸೇರಿದಂತೆ ಆಯಾ ಕಾರ್ಯಕ್ರಮಗಳ ಜವಾಬ್ದಾರಿಯನ್ನು ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿಗೆ ಜವಬ್ದಾರಿ ವಹಿಸಿ ಕಾರ್ಯಕ್ರಮವನ್ನು ರೂಪಿಸಬೇಕು.

ಪುರಸಭೆ, ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯತ್‌ನ ಹಾಲಿ ಮಾಜಿ ಜನ ಪ್ರತಿನಿಧಿಗಳಿಗೆ ಆಹ್ವಾನ ನೀಡಿ ಹೆಚ್ಚಿನ ಜವಾಬ್ದಾರಿ ನೀಡಬೇಕು. ಇದರ ಜೊತೆ ಕಾರ್ಯಕ್ರಮಕ್ಕೆ ಯಾವುದೇ ಅಡೆ ತಡೆಯಾಗದಂತೆ ನೋಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು. ಮಂಟಪದ ಪಕ್ಕದಲ್ಲಿರುವ ದಸರಾ ಕೊಳ ವೀಕ್ಷಿಸಿ ಪೂಜೆಗೆ ಬಳಸಲಾಗುವ ನೀರನ್ನು ಶುದ್ದಿಕರಿಸಲು ಗ್ರಾಪಂ ಅಧಿಕಾರಿಗಳಿಗೆ ಸುಣ್ಣ ಬಣ್ಣ ಬಳಿಯಲು ತಿಳಿಸಿದರು. ಬನ್ನಿಮಂಟಪದ ಅಲಂಕಾರಕ್ಕೆ ಹೆಚ್ಚು ಒತ್ತು ನೀಡಲು ತಿಳಿಸಿದ ಶಾಸಕರು, ಮೂರು ದಿನಗಳ ದಸರಾ ಕಾರ್ಯಕ್ರಮದ ಬಿಗಿ ಭದ್ರತೆ ಕುರಿತು ಡಿವೈಎಸ್‌ಪಿ ಮುರುಳಿ ಅವರೊಂದಿಗೆ ಚರ್ಚೆ ನಡೆಸಿದರು. ಜಂಬು ಸವಾರಿ ಸಾಗುವ ಮಾರ್ಗದಲ್ಲಿ ಹೆಚ್ಚಿನ ಭದ್ರತೆಯ ಜೊತೆಗೆ ವೇದಿಕೆ ಕಾರ್ಯಕ್ರಮದ ಭದ್ರತೆಗೆ ಅಡೆ ತಡೆ ಆಗದಂತೆ ಹೆಚ್ಚಿನ ಪೊಲೀಸರು ನಿಯೋಜಿಸಿಕೊಳ್ಳುವಂತೆ ತಿಳಿಸಿದರು.

ಕಿರಂಗೂರು ಬನ್ನಿ ಮಂಟಪದಿಂದ ಹೆದ್ದಾರಿ ಮಾರ್ಗದ ಮೂಲಕ ಶ್ರೀರಂಗಪಟ್ಟಣ ಶ್ರೀರಂಗನಾಥ ದೇವಾಲಯದ ಬಳಿಯ ವೇದಿಕೆ ವರೆಗೂ ಅಲಂಕೃತ ವಿದ್ಯುತ್ ದೀಪಗಳನ್ನು ಅಳವಡಿಸಲು ಸೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು. ಉಪವಿಭಾಗಾಧಿಕಾರಿ ಸಂದೀಪ್, ತಹಶೀಲ್ದಾರ್ ಅಶ್ವಿನಿ, ಪುರಸಭೆ ಮುಖ್ಯಾಧಿಕಾರಿ ರಾಣಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!