ಗಾಂಜಾ ಸಾಗಾಟ: ವಾಹನ ಸಹಿತ ಇಬ್ಬರು ಅರೋಪಿಗಳು ಸಿಸಿಬಿ ವಶಕ್ಕೆ

ಹೊಸದಿಗಂತ ವರದಿ ಮಂಗಳೂರು:

ಬೆಂಗಳೂರಿನಿಂದ ಮಂಗಳೂರು ನಗರಕ್ಕೆ ಹಾಗೂ ಕೇರಳ ರಾಜ್ಯಕ್ಕೆ ಬೃಹತ್ ಪ್ರಮಾಣದಲ್ಲಿ ಪಿಕ್‌ಅಪ್ ವಾಹನವೊಂದರಲ್ಲಿ ನಿಷೇಧಿತ ಮಾದಕ ವಸ್ತು ಗಾಂಜಾವನ್ನು ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಂಟ್ವಾಳದ ನಿವಾಸಿ ರಮೀಝ್ ರಾಝ್ (30), ಮಂಜೇಶ್ವರದ ನಿವಾಸಿ ಅಬ್ದುಲ್ ಖಾದರ್ ಹ್ಯಾರಿಸ್ (31) ಬಂಧಿತ ಆರೋಪಿಗಳು.

ನ.17 ರಂದು ಗಾಂಜಾ ಸಾಗಾಟ ಮಾಡುತ್ತಿದ್ದ ಪಿಕ್‌ಅಪ್ ಹಾಗೂ ಬೆಂಗಾವಲು ಕಾರನ್ನು ಪತ್ತೆ ಹಚ್ಚಲಾಗಿದೆ. ಬಂಧಿತರಿಂದ 132 ಕೆ.ಜಿ. ಗಾಂಜಾ, ನಾಲ್ಕು ಮಾರಕಾಯುಧ, ಕಾರನ್ನು ವಶಪಡಿಸಿಕೊಂಡಿದ್ದು, ಒಟ್ಟು 39 ಲಕ್ಷ ರೂ. ಎಂದು ಅಂದಾಜಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಆರೋಪಿಗಳು ಮಂಗಳೂರು ನಗರಕ್ಕೆ ಬೆಂಗಳೂರಿನಿಂದ ಪಿಕ್‌ಅಪ್ ವಾಹನವೊಂದರಲ್ಲಿ ನಿಷೇಧಿತ ಮಾದಕ ವಸ್ತುವಾದ ಗಾಂಜಾವನ್ನು ಸಾಗಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿಯನ್ನು ಪಡೆದ ಮಂಗಳೂರು ಸಿಸಿಬಿ ಪೊಲೀಸರು ಮಂಗಳೂರು ಜೆಪ್ಪಿನಮೊಗರು ಬಳಿ ಪತ್ತೆ ಹಚ್ಚಿದ್ದಾರೆ. ಆರೋಪಿಗಳು ವಿಶಾಖಪಟ್ಟಣದಿಂದ ಅರಣ್ಯದ ಮಧ್ಯದಲ್ಲಿ ಬೆಳೆಯುವ ಗಾಂಜಾವನ್ನು ತರುತ್ತಿದ್ದು, ಇದು ಉಳ್ಳಾಲ, ಕೊಣಾಜೆ ಹಾಗೂ ಕಂಕನಾಡಿ ಠಾಣಾ ವ್ಯಾಪ್ತಿಯಲ್ಲಿ ಹೆಚ್ಚಾಗಿ ವಿತರಣೆಯಾಗುತ್ತಿದ್ದು, ಈಗಾಗಲೇ ತನಿಖೆಯನ್ನು ನಡೆಸಲಾಗುತ್ತಿದೆ.

ಈ ಹಿಂದೆ ಮೂರು-ನಾಲ್ಕು ಬಾರಿ ಗಾಂಜಾವನ್ನು ತಂದಿದ್ದು, ಬರುವಾಗ ದಾರಿಯ ಮಧ್ಯದಲ್ಲಿ ಸ್ವಲ್ಪ ಗಾಂಜಾವನ್ನು ನೀಡಿರುವುದಾಗಿ ತಿಳಿದುಬಂದಿದೆ. ಈ ಪ್ರಕರಣದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ಆದಷ್ಟು ಬೇಗ ಉಳಿದ ಆರೋಪಿಗಳನ್ನು ಬಂಧಿಸಲಾಗುವುದು ಎಂದರು. ಆರೋಪಿಗಳ ಪೈಕಿ ರಮೀಝ್ ರಾಝ್ ಮೇಲೆ ಆರು ಪ್ರಕರಣ ಹಾಗೂ ಅಬ್ದುಲ್ ಖಾದರ್ ಹ್ಯಾರಿಸ್ ಮೇಲೆ ಮಂಗಳೂರಿನಲ್ಲಿ ಮೂರು ಹಾಗೂ ಕಾಸರಗೋಡಿನಲ್ಲಿ ಒಂದು ಪ್ರಕರಣ ದಾಖಲಾಗಿರುವುದಾಗಿ ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!