ವಿದೇಶ ಪ್ರವಾಸ ಒಂದು ವಿಶೇಷ ಅನುಭವ. ಆದರೆ ಮೊದಲ ಬಾರಿಗೆ ಹೋಗೋರಿಗೆ ತಯಾರಿಯಲ್ಲಿ ಏನಾದ್ರು ಎಡವಿದರೆ ಆನಂದದ ಪ್ರಯಾಣಕ್ಕಿಂತ ಕಿರಿಕಿರಿನೇ ಜಾಸ್ತಿ. ಪಾಸ್‌ಪೋರ್ಟ್‌ನ ಮಾನ್ಯತೆಯಿಂದ ಆರಂಭಿಸಿ, ವೀಸಾ ಪ್ರಕ್ರಿಯೆ, ವಿಮಾನ ಟಿಕೆಟ್ ಬುಕ್ಕಿಂಗ್, ಕರೆನ್ಸಿ ವಿನಿಮಯ, ಹೋಟೆಲ್, ಮೊಬೈಲ್ ಸಿಮ್‌ಗೆ ರೋಮಿಂಗ್ ಆಯ್ಕೆ ಮಾಡಿಕೊಳ್ಳುವವರೆಗೆ ಪ್ರತಿಯೊಂದು ಹಂತದ ವಿವರಗಳನ್ನು ಸರಿಯಾಗಿ ತಿಳಿದುಕೊಂಡರೆ ಮಾತ್ರ ಸುಗಮ ಪ್ರಯಾಣ ಸಾಧ್ಯ. ಈ ಹಿನ್ನೆಲೆಯಲ್ಲಿ, ನಿಮ್ಮ ಮೊದಲ ಅಂತಾರಾಷ್ಟ್ರೀಯ ಪ್ರವಾಸದ ಮುನ್ನ ನೀವು ಕೈಗೊಳ್ಳಬೇಕಾದ ಪ್ರಮುಖ ಕ್ರಮಗಳ ಪಟ್ಟಿ ಇಲ್ಲಿದೆ.
ಮೊದಲನೆಯದಾಗಿ, ನಿಮ್ಮ ಪಾಸ್‌ಪೋರ್ಟ್ ಮಾನ್ಯಾವಧಿ ಪರಿಶೀಲಿಸಿ. ಅದು ಕನಿಷ್ಠ 6 ತಿಂಗಳಿಗಿಂತಲೂ ಹೆಚ್ಚು ಮಾನ್ಯವಾಗಿರಬೇಕು. ಹೋಗಬೇಕಾದ ದೇಶವು ಇ-ವೀಸಾ ನೀಡುತ್ತದೆಯೇ ಅಥವಾ ಪೂರ್ವಅನುಮತಿ ಅಗತ್ಯವೇ ಎಂಬುದನ್ನೂ ಪರಿಶೀಲಿಸಬೇಕು. ಈ ಎಲ್ಲಾ ಪ್ರಕ್ರಿಯೆಗಳನ್ನು ಕನಿಷ್ಠ ಮೂರು ತಿಂಗಳ ಮುಂಚಿತವಾಗಿ ಆರಂಭಿಸಿದರೆ, ಸಮಯ ಹಾಗೂ ಹಣದ ಉಳಿತಾಯ ಸಾಧ್ಯ.
ಹೋಟೆಲ್ ಬುಕ್ಕಿಂಗ್ ಕೂಡ ಮುಂಚಿತವಾಗಿಯೇ ಮಾಡುವುದು ಉತ್ತಮ. ಜೊತೆಗೆ ಆರೋಗ್ಯ ವಿಮೆ ಕಡ್ಡಾಯವಾಗಿದ್ದು, ಕೆಲ ದೇಶಗಳು ಕೋವಿಡ್-19 ಅಥವಾ ಹಂದಿ ಜ್ವರದ ಲಸಿಕೆ ಪ್ರಮಾಣಪತ್ರವನ್ನೂ ಕೇಳುತ್ತವೆ. ಎಲ್ಲಾ ದಾಖಲೆಗಳ ಹಾರ್ಡ್ ಹಾಗೂ ಸಾಫ್ಟ್‌ಕಾಪಿಯನ್ನು ಕೊಂಡೊಯ್ಯುವುದು ಸುರಕ್ಷಿತ ಕ್ರಮ.
ಪ್ರಯಾಣದ ಮೊದಲು ವಿದೇಶಿ ಕರೆನ್ಸಿಯನ್ನು ಸ್ಥಳೀಯ ಎಕ್ಸ್ಚೇಂಜ್‌ನಲ್ಲಿ ಖರೀದಿಸಿ, ರಶೀದಿಯನ್ನು ಇಟ್ಟುಕೊಳ್ಳುವುದು ಉಪಯುಕ್ತ. ಕಾರಣ, ವಿಮಾನ ನಿಲ್ದಾಣ ಅಥವಾ ವಲಸೆ ಅಧಿಕಾರಿಗಳ ಮುಂದೆ ನೀವು ಇದನ್ನು ತೋರಿಸಬೇಕಾಗಬಹುದು. ಜೊತೆಗೆ ಅಂತಾರಾಷ್ಟ್ರೀಯ ಡೆಬಿಟ್/ಕ್ರೆಡಿಟ್ ಕಾರ್ಡ್ ಸಕ್ರಿಯವಿರಬೇಕು.
ಅಗತ್ಯವಿರುವ ಎಲ್ಲ ಆ್ಯಪ್‌ಗಳು – ವಾಟ್ಸಾಪ್, ಸ್ಕೈಪ್, ಗೂಗಲ್ ಮ್ಯಾಪ್ಸ್, ಟ್ರಾನ್ಸ್‌ಲೇಟ್ ಮುಂತಾದವುಗಳನ್ನು ಮೊಬೈಲ್‌ನಲ್ಲಿ ಇಟ್ಟುಕೊಳ್ಳಿ. ಸ್ಥಳೀಯ ವಾಹನ ವ್ಯವಸ್ಥೆ, ನಕ್ಷೆಗಳು, ಪ್ರವಾಸಿ ಸ್ಥಳಗಳ ಕುರಿತು ಮಾಹಿತಿ ಇಂಗ್ಲಿಷ್ ಇಲ್ಲದ ಪರಿಸ್ಥಿತಿಯಲ್ಲಿ ಉಪಯೋಗಿಯಾಗಬಹುದು.
ವಿಮಾನ ನಿಲ್ದಾಣಕ್ಕೆ ಕನಿಷ್ಠ ಮೂರು ಗಂಟೆ ಮೊದಲು ತಲುಪುವುದು ಬಹುಮುಖ್ಯ. ಚೆಕ್-ಇನ್, ಇಮಿಗ್ರೇಷನ್ ಮುಂತಾದವು ಸಮಯ ತೆಗೆದುಕೊಳ್ಳುತ್ತವೆ. ಲಘು ಸುವ್ಯವಸ್ಥಿತ ಪ್ಯಾಕಿಂಗ್ ಮಾಡಿ, ತೂಕ ಮಿತಿಯೊಳಗೆ ಇರಿಸುವುದು ಉತ್ತಮ.
ವಿದೇಶದಲ್ಲಿನ ವಿದ್ಯುತ್ ಪ್ಲಗ್ ಬದಲಾಗುವುದರಿಂದ, ಯೂನಿವರ್ಸಲ್ ಅಡಾಪ್ಟರ್ ಹಾಗೂ ಪವರ್‌ಬ್ಯಾಂಕ್ ಕಡ್ಡಾಯ. ಸ್ಥಳೀಯ ಭಾಷೆಯ ಕೆಲ ಪದಗಳು ಹಾಗೂ ತುರ್ತು ಸಂಪರ್ಕ ಸಂಖ್ಯೆಗಳ ಪಟ್ಟಿಯೂ ಸಹ ಜೊತೆಗಿಟ್ಟುಕೊಳ್ಳಿ.
ಕೊನೆಯದಾಗಿ, ನಿಮ್ಮ ಭಾರತೀಯ ಮೊಬೈಲ್ ಸಿಮ್ ವಿದೇಶದಲ್ಲಿ ಕೆಲಸ ಮಾಡದೆ ಇರಬಹುದು. ರೋಮಿಂಗ್ ಪ್ಯಾಕ್ ಅಥವಾ ಇ-ಸಿಮ್ ದುಬಾರಿ ಆಗಬಹುದರಿಂದ, ಆಗಲೇ ಪ್ರವಾಸಿ ಸಿಮ್ ಖರೀದಿ ಮಾಡುವುದು ಉತ್ತಮ ಆಯ್ಕೆ. ಅಲ್ಲದೆ, ಹೋಟೆಲ್ ವೈಫೈ ಅಥವಾ ಸಾರ್ವಜನಿಕ ವೈಫೈ ಬಳಸಿ ಕರೆ-ಇಂಟರ್ನೆಟ್ ಬಳಕೆ ಮಾಡಬಹುದು.