ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………
ಹೊಸದಿಗಂತ ಆನ್ ಲೈನ್ ಡೆಸ್ಕ್:
ನಟ ಸಂಚಾರಿ ವಿಜಯ್ ಅವರ ಆರೋಗ್ಯ ಸ್ಥಿತಿ ಬಗ್ಗೆ ಆತಂಕ ಮೂಡಿದ್ದು, ಬೇಗ ಗುಣಮುಖರಾಗುವಂತೆ ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಾರ್ಥನೆ ಮಾಡುತ್ತಿದ್ದಾರೆ.
ಶನಿವಾರ ರಾತ್ರಿ ಸಂಚಾರಿ ವಿಜಯ್ ಗೆಳೆಯನ ಜತೆ ಬೈಕ್ನಲ್ಲಿ ಹೋಗುವಾಗ ಅಪಘಾತ ಸಂಭವಿಸಿದೆ. ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಅಪೋಲೊ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಈಗಾಗಲೇ ಮೆದುಳಿನ ಬಲ ಭಾಗದಲ್ಲಿ ರಕ್ತಸ್ರಾವ ಉಂಟಾಗಿದ್ದು, ತೊಡೆಯಲ್ಲಿ ಗಾಯಗಳಾಗಿವೆ. ನಿನ್ನೆ ರಾತ್ರಿಯೇ ಅವರಿಗೆ ವೈದ್ಯರು ಮೆದುಳಿನ ಶಸ್ತ್ರಚಿಕಿತ್ಸೆ ನಡೆಸಿದ್ದು, ಸದ್ಯ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ.
ನಟ ಸಂಚಾರಿ ವಿಜಯ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಚಿಕಿತ್ಸೆ ನೀಡುತ್ತಿರುವ ವೈದ್ಯರು ಮಾಹಿತಿ ನೀಡಿದ್ದಾರೆ. ವಿಜಯ್ಗೆ ತುಂಬಾನೆ ಹಾನಿಯಾಗಿದೆ ಎಂದು ನಟ ಸಂಚಾರಿ ವಿಜಯ್ ಆಪ್ತರಾದ ನಿರ್ದೇಶಕ ಲಿಂಗದೇವರು ಮಾಹಿತಿ ನೀಡಿದ್ದಾರೆ. ಈ ವಿಚಾರ ಕೇಳಿದ ಅಭಿಮಾನಿಗಳು ಆತಂಕಗೊಂಡಿದ್ದಾರೆ.
ಇನ್ನು,ಅಪೋಲೊ ಆಸ್ಪತ್ರೆಗೆ ನಟ ನೀನಾಸಂ ಸತೀಶ್ ಭೇಟಿ ನೀಡಿ ವೈದ್ಯರ ಜತೆ ಮಾತುಕತೆ ನಡೆಸಿದ್ದಾರೆ. ಸಂಚಾರಿ ವಿಜಯ್ ಅವರಿಗೆ ಅಪಘಾತವಾಗಿರುವ ಸುದ್ದಿ ಕೇಳಿ ತುಂಬಾನೇ ಬೇಸರವಾಯಿತು. ಅವರು ಚೇತರಿಸಿಕೊಳ್ಳಲೆಂದು ನನ್ನ ಪ್ರಾರ್ಥನೆ ಎಂದು ಅನೇಕರು ಬರೆದುಕೊಂಡಿದ್ದಾರೆ. ಕಿಚ್ಚ ಸುದೀಪ್ ಅಭಿಮಾನಿಗಳು ಸೇರಿ ಸಾಕಷ್ಟು ಫ್ಯಾನ್ಸ್ ಗ್ರೂಪ್ಗಳು ಸಂಚಾರಿ ವಿಜಯ್ ಬೇಗ ಚೇತರಿಸಿಕೊಳ್ಳಲಿ ಎಂದು ಕೋರುತ್ತಿದ್ದಾರೆ.