ತ್ರಿಪುರಾದ ಮೊದಲ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹಿಮಾಂಶು ಮೋಹನ್ ಚೌಧರಿ ಇನ್ನಿಲ್ಲ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ನಿವೃತ್ತ ನಾಗರಿಕ ಸೇವಾ ಅಧಿಕಾರಿ, ಮಾನವತಾವಾದಿ ಹಾಗೂ ತ್ರಿಪುರಾದ ಮೊದಲ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಹಿಮಾಂಶು ಮೋಹನ್ ಚೌಧರಿ ಮಂಗಳವಾರ ಅಗರ್ತಲಾದ ಖಾಸಗಿ ಆಸ್ಪತ್ರೆಯೊಂದರಲ್ಲಿ ವಯೋಸಹಜ ಕಾಯಿಲೆಗಳಿಂದ ಮೃತರಾಗಿದ್ದಾರೆ.

84 ವರ್ಷ ವಯಸ್ಸಿನ ಚೌಧರಿ ಅವರು ಇಬ್ಬರು ಪುತ್ರಿಯರು, ಸಂಬಂಧಿಕರು ಮತ್ತು ಅಪಾರ ಸಂಖ್ಯೆಯ ಹಿತೈಷಿಗಳನ್ನು ಅಗಲಿದ್ದಾರೆ.

ಬಾಂಗ್ಲಾದೇಶದಲ್ಲಿ ವಿಮೋಚನಾ ಯುದ್ಧ ಪ್ರಾರಂಭವಾದಾಗ ಹಿಮಾಂಶು ಅವರು ತ್ರಿಪುರಾದ ಸಿಪಹಿಜಾಲಾ ಜಿಲ್ಲೆಯ ಸೋನಮುರಾ ಉಪವಿಭಾಗದ ಉಪವಿಭಾಗಾಧಿಕಾರಿ (ಎಸ್​ ಡಿ ಒ ) ಆಗಿದ್ದರು. ಈ ವೇಳೆ ಅವರು 2.5 ಲಕ್ಷ ಬಾಂಗ್ಲಾದೇಶೀಯರಿಗೆ ಸಹಾಯ ಹಸ್ತವನ್ನು ಚಾಚಿದ್ದರು. ನಿರಾಶ್ರಿತರಿಗೆ ಟೆಂಟ್‌ಗಳು ಮತ್ತು ತಾತ್ಕಾಲಿಕ ಅಡುಗೆ ಮನೆಗಳನ್ನು ಸ್ಥಾಪಿಸುವ ಮೂಲಕ ಆಹಾರ ಮತ್ತು ಆಶ್ರಯವನ್ನು ಒದಗಿಸುವಲ್ಲಿ ಯಶಸ್ವಿಯಾಗಿದ್ದರು.

1972 ರಲ್ಲಿ ಕೇಂದ್ರ ಸರ್ಕಾರವು ಅವರಿಗೆ ದೇಶದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ನೀಡಿ ಗೌರವಿಸಿತು. ಹಾಗೆಯೇ ಬಾಂಗ್ಲಾದೇಶ ಸರ್ಕಾರವು ಅವರ ಕೊಡುಗೆಯನ್ನು ಶ್ಲಾಘಿಸಿ 2013 ರಲ್ಲಿ ‘ಫ್ರೆಂಡ್ ಆಫ್ ಬಾಂಗ್ಲಾದೇಶ’ ಪದಕವನ್ನು ನೀಡಿ ಗೌರವಿಸಿತು.

ಬಾಂಗ್ಲಾದೇಶ ವಿಮೋಚನಾ ಯುದ್ಧದ ಸಮಯದಲ್ಲಿ ಅಂದಿನ ಪ್ರಧಾನಿ ತಾಜುದ್ದೀನ್ ಅಹ್ಮದ್ ಅವರ ಕುಟುಂಬವು ಸೋನಾಮೂರದಲ್ಲಿರುವ ಚೌಧರಿ ಅಧಿಕೃತ ನಿವಾಸದಲ್ಲಿ ಆಶ್ರಯ ಪಡೆದಿತ್ತು. ಈ ಹಿನ್ನೆಲೆ ಈಗ ಬಾಂಗ್ಲಾದೇಶದ ಸಂಸದರಾಗಿರುವ ಅಹ್ಮದ್ ಅವರ ಪುತ್ರಿ ಸೆಮಿನ್ ಹೊಸೈನ್ ರಿಮಿ ಅವರು ಡಿಸೆಂಬರ್ 2021 ರಲ್ಲಿ ಚೌಧರಿ ಅವರನ್ನು ಭೇಟಿಯಾಗಿ ಅವರ ಕುಟುಂಬಕ್ಕೆ ಆಶ್ರಯ ಒದಗಿಸಿದ್ದಕ್ಕಾಗಿ ಧನ್ಯವಾದ ತಿಳಿಸಿದ್ದರು.

ಹಿಮಾಂಶು ನಿಧನಕ್ಕೆ ತ್ರಿಪುರ ಮುಖ್ಯಮಂತ್ರಿ ಮಾಣಿಕ್ ಸಹಾ ಸಂತಾಪ ಸೂಚಿಸಿದ್ದಾರೆ. ಟ್ವೀಟ್​ ಮಾಡಿರುವ ಅವರು, “ತ್ರಿಪುರಾದ ಮೊದಲ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಹಿಮಾಂಶು ಮೋಹನ್ ಚೌಧರಿ ಅವರು ನಿಧನರಾದ ಸುದ್ದಿ ತಿಳಿದು ತೀವ್ರ ದುಃಖವಾಗಿದೆ, ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ. ಓಂ ಶಾಂತಿ” ಎಂದು ಕಂಬನಿ ಮಿಡಿದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!