ಹೊಸದಿಗಂತ ಡಿಜಿಟಲ್ ಡೆಸ್ಕ್:
ತ್ರಿಪುರಾದ ರಾಜಧಾನಿ ಅಗರ್ತಲ ನಗರಪಾಲಿಕೆ ಜತೆ ರಾಜ್ಯದ ಇತರ 13 ನಗರಪಾಲಿಕೆಗಳು ಮತ್ತು ನಗರ ಪಂಚಾಯತ್ಗಳಿಗೆ ನಡೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ(ಬಿಜೆಪಿ) ಭರ್ಜರಿ ಗೆಲುವು ಸಾಧಿಸಿದೆ.
ಇತ್ತ ತೃಣಮೂಲ ಕಾಂಗ್ರೆಸ್ ಕೇವಲ ಒಂದು ಸೀಟನ್ನು ಗೆಲ್ಲುವ ಮೂಲಕ ತ್ರೀವ ಮುಖಭಂಗ ಅನುಭವಿಸಿದೆ.
ಇಂದು ರಾಜ್ಯದ 8 ಜಿಲ್ಲೆಗಳ 13 ಕೇಂದ್ರಗಳಲ್ಲಿ ಮತ ಎಣಿಕೆ ನಡೆದಿದ್ದು, 222 ಸೀಟುಗಳಲ್ಲಿ 217 ಸೀಟುಗಳು ಬಿಜೆಪಿ ಪಾಲಾದವು. ಸಿಪಿಐ(ಎಂ) 3 ಸೀಟು ಗೆದ್ದರೆ, ಎಐಟಿಸಿ 1 ಸೀಟು ಗೆದ್ದಿತು. ತಿಪ್ರ ಮೋಥಾ ಮತ್ತೊಂದು ಸೀಟು ಗೆದ್ದಿತು. ಇನ್ನು 112 ಸೀಟುಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾದರು. ಈ ಮೂಲಕ ಒಟ್ಟು 329 ಸೀಟುಗಳು ಬಿಜೆಪಿ ತೆಕ್ಕೆಗೆ ಬಿದ್ದರೆ, ಅಗರ್ತಲಾ ನಗರಪಾಲಿಕೆಯ 51 ವಾರ್ಡ್ಗಳಲ್ಲಿ 51 ವಾರ್ಡ್ಗಳೂ ಬಿಜೆಪಿಗೆ ದಕ್ಕಿದ್ದು ವಿಶೇಷವಾಗಿದೆ.
ನವೆಂಬರ್ 25 ರಂದು ರಾಜ್ಯದ 20 ನಗರ ಸ್ಥಳೀಯ ಸಂಸ್ಥೆಗಳ ಪೈಕಿ 14 ಕ್ಕೆ ಚುನಾವಣೆ ನಡೆದಿತ್ತು. ರಾಜ್ಯದ ಒಟ್ಟು 324 ಪುರಸಭೆ ಸ್ಥಾನಗಳ ಪೈಕಿ ಬಿಜೆಪಿ 112 ಸ್ಥಾನಗಳನ್ನು ಅವಿರೋಧವಾಗಿ ಗೆದ್ದಿದೆ. ಉಳಿದ 222 ಸ್ಥಾನಗಳಲ್ಲಿ ಶೇ.81.54ರಷ್ಟು ಮತದಾನವಾಗಿತ್ತು.