ಕೊನೆಗೊಳ್ಳಲಿದೆಯೇ ಹತ್ತೇ ನಿಮಿಷಕ್ಕೆ ಡೆಲಿವರಿ ಎಂಬ ಹುಚ್ಚಾಟ?

 

  • ಚೈತನ್ಯ ಹೆಗಡೆ

ನವೋದ್ದಿಮೆಗಳು ಭಾರತದ ಹಲವು ಸಮಸ್ಯೆಗಳಿಗೆ ಉತ್ತರದಾಯಿಯಾಗಿ ಹೊರಹೊಮ್ಮುತ್ತಿವೆ ಎಂಬುದರ ಬಗ್ಗೆ ಎರಡು ಮಾತಿಲ್ಲ. ಆದರೆ ಸ್ಟಾರ್ಟಪ್ ಎಂಬ ಹೆಸರಿನಲ್ಲಿ ಯಾವ ಮೌಲ್ಯ ಸೃಷ್ಟಿಯಾಗುತ್ತಿದೆ ಮತ್ತು ಯಾವ ಸಮಸ್ಯೆ ಪರಿಹಾರವಾಗುತ್ತಿದೆ ಎಂಬುದನ್ನು ಗೌರವಿಸುವುದಕ್ಕಿಂತ ಯಾರೆಷ್ಟು ಹಣ ಎತ್ತಿದ್ದಾರೆ ಎಂಬುದರ ಮೇಲೆಯೇ ಹೆಡ್ಲೈನ್ ರೂಪುಗೊಳ್ಳುತ್ತಿರುವುದು ಒಂದು ದುರಂತವೂ ಹೌದು.

ಭಾರತದಲ್ಲಿ ಸಾಂಪ್ರದಾಯಿಕವಾಗಿ ದೈತ್ಯ ಉದ್ಯಮಗಳನ್ನು ಕಟ್ಟಿದ ಬಹಳಷ್ಟು ಮಂದಿ ಆಗೀಗ ಸಂದರ್ಶನಗಳಲ್ಲಿ ಹೇಳುತ್ತಿರುತ್ತಾರೆ- ಬಿಸಿನೆಸ್ ಮೂಲ ಅರ್ಥ ಅದು ಲಾಭ ಮಾಡಿ ತನ್ನನ್ನು ತಾನು ಪೊರೆದುಕೊಳ್ಳಬೇಕು. ವೆಂಚರ್ ಕ್ಯಾಪಿಟಲ್ ಎಂಬ ಮೋಹಕ ಪದಪುಂಜದಲ್ಲಿ ಹಣವನ್ನೆತ್ತುವ ಪ್ರಕ್ರಿಯೆ ತಪ್ಪೇನೂ ಅಲ್ಲವಾದರೂ, ಉದ್ಯಮದ ತ್ವರಿತ ಬೆಳವಣಿಗೆಗೆ ಅದು ಇವತ್ತಿನ ಕಾಲಕ್ಕೆ ಬೇಕು ಎಂಬ ವಾದ ಒಂದು ಹಂತಕ್ಕೆ ಸರಿಯಾದರೂ, ಲಾಭದ ಯಾವುದೇ ರೂಪುರೇಷೆ ಇಲ್ಲದೇ ಹಣ ಸುಡುವ ಉದ್ದಿಮೆಯನ್ನು ಏಕೆ ಸಂಭ್ರಮಿಸಬೇಕು ಅಂತ. ಆದರೆ, ಹಣದ ಹರಿವಿನ ಈ ತಲೆಮಾರಿನಲ್ಲಿ ಆ ಪ್ರಶ್ನೆಯೇ ಅಪ್ರಸ್ತುತ ಎಂಬಂತೆ ಆಡುವವರೇ ಹೆಚ್ಚು.

ಅದಿರಲಿ, ಇಷ್ಟಾಗಿಯೂ ಹತ್ತೇ ನಿಮಿಷದಲ್ಲಿ ಕಿರಾಣಿ ತಲುಪಿಸಿದೆ ಎನ್ನುವ ಮೂಲಕ ಬದುಕಿಗೆ ಅದ್ಯಾವ ಮೌಲ್ಯ ತುಂಬುತ್ತಾರೋ ಎಂಬುದೂ ಪ್ರಶ್ನೆಯೇ ಆಗಿತ್ತು. ಆದರೆ ಮಾರುಕಟ್ಟೆಯೇ ಈ ಹುಚ್ಚಾಟಕ್ಕೆ ಲಗಾಮು ಹಾಕಲು ಹೊರಟಂತಿದೆ. ಈ ನಿಟ್ಟಿನಲ್ಲಿ ಟ್ರೆಂಡ್ ಸೂಚಿಸುತ್ತಿರುವ ಸುದ್ದಿ ಏನೆಂದರೆ ಡಂಜೊ ಎಂಬ 15-20 ನಿಮಿಷದೊಳಗೆ ಕಿರಾಣಿ-ಹಾಲು-ತರಕಾರಿ ಡೆಲಿವರಿ ಮಾಡುವ ನವೋದ್ದಿಮೆ, ತಾನಿನ್ನು 60 ನಿಮಿಷದ ಡೆಲಿವರಿಗೆ ತನ್ನ ಮಾದರಿಯನ್ನು ಬದಲಾಯಿಸಿಕೊಳ್ಳುವುದಾಗಿ ಹೇಳಿದೆ.

ಗಮನಿಸಿ. ಮಿಲಿಯನ್ ಡಾಲರುಗಳ ಹಣ ಎತ್ತಿ ಸುದ್ದಿಯಾಗುವ ಇದೇ ಮಾದರಿಯ ಸ್ವಿಗ್ಗಿ, ಬ್ಲಿಂಕಿಟ್, ಜೊಮಾಟೊ ಯಾವವೂ ಲಾಭದ ಉದ್ದಿಮೆಗಳಲ್ಲ. ನಾವೀಗ ಗ್ರಾಹಕರನ್ನು ಸ್ವಾಧೀನಪಡಿಸಿಕೊಳ್ಳುತ್ತಿದ್ದೇವೆ, ಮುಂದೆ ಲಾಭ ಮಾಡುತ್ತೇವೆ ಎಂಬ ಸಿದ್ಧ ಉತ್ತರವೊಂದು ಇವುಗಳ ಬಳಿ ಇದೆ.

ಆದರೆ ಈ ವಾದವನ್ನು ಅನುಮಾನದಿಂದ ನೋಡುವ ಹಲವು ಪರಿಣತರು ವಿಶ್ಲೇಷಿಸುವುದು ಹೀಗೆ- ಭಾರತದಲ್ಲಿ ಕಿರಾಣಿ, ತರಕಾರಿ ಇತ್ಯಾದಿಗಳ ಶೀಘ್ರ ಒದಗಿಸುವಿಕೆಯ ಮಾದರಿ ತುಂಬ ಬೆಳೆಯುವುದಕ್ಕಿರುವ ಅವಕಾಶ ಕಡಿಮೆ. ಏಕೆಂದರೆ, ಪಾಶ್ಚಾತ್ಯ ದೇಶಗಳಲ್ಲಿ ವಾರಕ್ಕೊಮ್ಮೆ ಮಾಲುಗಳಿಗೆ ಹೋಗಿ ಮುಂದಿನ ಆರೇಳು ದಿನಗಳಿಗಾಗುವಷ್ಟು ಸಾಮಗ್ರಿ ತರುತ್ತಾರೆ. ಮನೆಯಿಂದ ನಾಲ್ಕಾರು ಕಿ.ಮೀ ದೂರದಲ್ಲಿರುತ್ತದೆ ಮಳಿಗೆ. ಅಂಥವರಿಗೆ ನಿಮಗೆ ಮನೆ ಬಾಗಿಲಿಗೇ ಕಿರಾಣಿ ಮುಟ್ಟಿಸುತ್ತೇವೆ, ಶೀಘ್ರದಲ್ಲಿ ಮುಟ್ಟಿಸುತ್ತೇವೆ ಅನ್ನೋದು ಆಕರ್ಷಕ ಅನ್ನಿಸಬಹುದು. ಆದರೆ ಭಾರತದ ನಗರವಾಸಿಗಳಿಗೆ ಮನೆ ಮುಂದಿನ ತಿರುವಿನಲ್ಲೇ ಕಿರಾಣಿ ಅಂಗಡಿಗಳು ಸಿಗುತ್ತವೆ. ಅಲ್ಲದೇ, ತೀರ ಇತ್ತೀಚಿನ ಪೀಳಿಗೆಯ ಒಂದು ವರ್ಗ ಎಲ್ಲವೂ ಮನೆಬಾಗಿಲಿಗೆ ಬಂದು ಬೀಳಲಿ ಎಂಬ ಭಾವನೆ ಹೊಂದಿದ್ದಿರಬಹುದಾದರೂ ಉಳಿದ ಸಾಮಾನ್ಯರಿಗೆ ಅಂಗಡಿಯವರೆಗೆ ಹೋಗಿ ನಾಲ್ಕು ವಸ್ತು ಮಗುಚಿ ಹಾಕಿ, ಸಣ್ಣ-ಸಣ್ಣ ಪ್ರಮಾಣದಲ್ಲಿ ದಿನಸಿ ಖರೀದಿಸುವುದು ಖುಷಿ ಕೊಡುವ ಮತ್ತು ಕಾಲಯಾಪನೆಯ ಸಂಗತಿಯಾಗಿಬಿಟ್ಟಿದೆ. ಹೀಗಾಗಿ ಕೇವಲ ಮಿಲೆನಿಯಲ್ ಜನರನ್ನು ನಂಬಿಕೊಂಡು ಬಿಸಿನೆಸ್ ಫ್ರಾಫಿಟ್ ಅನ್ನು ಕಿರಾಣಿ-ದೈನಂದಿನ ಅವಶ್ಯದಂಥ ವಿಭಾಗದಲ್ಲಿ ಸಾಧಿಸುವುದು ಕಷ್ಟ.

ಇದಷ್ಟೇ ಅಲ್ಲ. ಒಂದು ಲೆಕ್ಕಾಚಾರದ ಪ್ರಕಾರ ರುಪಾಯಿ 570ರಷ್ಟಾದರೂ ಮೌಲ್ಯದ ವಸ್ತುವಿನ ಆರ್ಡರ್ ಮಾಡಿದಾಗ ಮಾತ್ರ ಅದನ್ನು ಪೂರೈಸುವ ವ್ಯವಸ್ಥೆಗೆ ಲಾಭವಾಗುತ್ತದೆ. ಏಕೆಂದರೆ ಡಿಲಿವರಿ, ಲಾಜಿಸ್ಟಿಕ್ ನಿರ್ವಹಿಸಲಿಕ್ಕೆ ತಗುಲುವ ವೆಚ್ಚ, 10-20 ನಿಮಿಷದಲ್ಲಿ ಡೆಲಿವರಿಗೆ ಅನುಕೂಲವಾಗುವಂತೆ ಅದು ನಗರದ ಆಯಕಟ್ಟಿನ ಜಾಗಗಳಲ್ಲಿ ಸ್ಥಾಪಿಸಿಕೊಂಡಿರುವ ಉಗ್ರಾಣದ ನಿರ್ವಹಣೆ ಇವೆಲ್ಲದರ ಖರ್ಚು ಹುಟ್ಟಬೇಕಲ್ಲ?

ಅಮೆರಿಕದ ಅರ್ಥವ್ಯವಸ್ಥೆ ಹಣ ಪ್ರಿಂಟು ಹಾಕಿಕೊಂಡು ಅದರದ್ದೊಂದು ಭಾಗ ಇಲ್ಲಿ ಹರಿದುಬರುವವರೆಗೆ ಇಂಥ ಸ್ಟಾರ್ಟಪ್ ಗಳ ಅಬ್ಬರ ಜೋರೇ. ಆದರೆ ಯಾವಾಗ ಇನ್ನು ಕೆಲ ತಿಂಗಳುಗಳವರೆಗೆ ಫಂಡ್ ಅಭಾವದ ದಿನಗಳು ಘೋಷಣೆಯಾಗಿವೆಯೋ ಆಗಲೇ ಎಲ್ಲರಿಗೆ ಬಿಸಿ ಮುಟ್ಟಿದೆ.

ಹಾಗಾದರೆ, ದೊಡ್ಡ ದೊಡ್ಡ ಸಾಹಸಿ ಬಂಡವಾಳದಾರರು ಇಂಥ ಉದ್ದಿಮೆಗಳ ಹಿಂದೆ ನಿಂತಿದ್ದಾರಲ್ಲ…. ಅವರಿಗಿಲ್ಲದ ಜ್ಞಾನ ಕಾಮೆಂಟ್ ಮಾಡುವವರಿಗಿದೆಯೇ ಎಂಬ ಪ್ರಶ್ನೆಯೂ ಬರಬಹುದು.

ನಿಜ. ಹಣ ಹಾಕುವವರಿಗೆ ಲೆಕ್ಕಾಚಾರಗಳಿರುತ್ತವೆ. ಹಾಗೆಂದ ಮಾತ್ರಕ್ಕೆ ಎಲ್ಲ ಸನ್ನಿವೇಶದಲ್ಲಿ ಅವರೇ ಬುದ್ಧಿವಂತರಾಗಿರುತ್ತಾರೆಂದುಕೊಳ್ಳುವುದೂ ಇನ್ನೊಂದು ಅತಿ. ಎಂಥ ದೊಡ್ಡವರ ಲೆಕ್ಕಾಚಾರ-ತರ್ಕಗಳೂ ತಲೆಕೆಳಗಾಗುತ್ತವೆ. ಆದರೆ, ಹತ್ತೇ ನಿಮಿಷಕ್ಕೆ ಡೆಲಿವರಿ ಎಂಬ ಹುಚ್ಚಾಟದ ಹಿಂದೆ ಲೆಕ್ಕಾಚಾರಗಳಿಲ್ಲ ಎಂದೇನೂ ಇಲ್ಲ.

ಉದಾಹರಣೆಗೆ ಡಂಜೋವನ್ನೇ ಉದಾಹರಣೆಗೆ ತೆಗೆದುಕೊಳ್ಳುವುದಾದರೆ ಇದಕ್ಕೆ ಮುಕೇಶ್ ಅಂಬಾನಿಯ ರಿಲಾಯನ್ಸ್ ರಿಟೇಲ್ಸ್ ಹೂಡಿಕೆ ಇದೆ. ಹತ್ತೇ ನಿಮಿಷದ ಹುಚ್ಚಾಟ ಲಾಭದಾಯಕವಾಗದಿದ್ದರೂ ಅದಕ್ಕೆ ದೀರ್ಘಾವಧಿಯಲ್ಲಿ ಬೇರೆ ಲೆಕ್ಕಾಚಾರಗಳಿವೆ. ಉದಾಹರಣೆಗೆ ಡಂಜೊ ಫಾರ್ ಬಿಸಿನೆಸ್ ಎಂಬ ಮತ್ತೊಂದು ಲಾಜಿಸ್ಟಿಕ್ಸ್ ಅನ್ನು ಅದು ನಿರ್ಮಿಸುತ್ತಿದೆ. ಇದನ್ನು ಬಳಸಿಕೊಂಡು ಕೇವಲ ನಗರಗಳಷ್ಟೇ ಅಲ್ಲದೇ ಬೇರೆ ಪ್ರಾಂತ್ಯಗಳ ಚಿಲ್ಲರೆ ಮಳಿಗೆಗಳಿಗೂ ಕಿರಾಣಿ ಮತ್ತಿತರ ಸಾಮಾನುಗಳನ್ನು ನುಗ್ಗಿಸುವುದಕ್ಕೆ ಅದು ಸನ್ನದ್ಧವಾಗಿದೆ. ಭಾರತ ಸರ್ಕಾರದ ಒ ಎನ್ ಡಿ ಸಿ (ಒಪನ್ ನೆಟ್ವರ್ಕ್ ಫಾರ್ ಡಿಜಿಟಲ್ ಕಾಮರ್ಸ್) ಸಾಕಾರವಾಗುವುದಕ್ಕೆ ಅದು ಕಾಯ್ದುಕೊಂಡಿದೆ. ಹೇಗೆ ಭಾರತದ ಯುಪಿಐ ವ್ಯವಸ್ಥೆಯನ್ನು ಉಪಯೋಗಿಸಿಕೊಂಡು ಭಾರತ್ ಪೆ, ಪೆಟಿಎಂ, ಗೂಗಲ್ ಪೆ ಸೇರಿದಂತೆ ಹಣಕಾಸು ತಂತ್ರಾಂಶ ಕಂಪನಿಗಳೆಲ್ಲ ಕಾರ್ಯ ನಿರ್ವಹಿಸುತ್ತಿವೆಯೋ ಅಂಥದೇ ಮಾದರಿ ಚಿಲ್ಲರೆ ಮಾರುಕಟ್ಟೆಯಲ್ಲೂ ತೆರೆದುಕೊಳ್ಳಲಿದೆ. ಹೀಗಾಗಿ ಡಂಜೋದಂಥ ಜಾಲ, ಮಾನವ ಸಂಪನ್ಮೂಲ, ಡೆಲಿವರಿಗೆ ನಿರ್ಮಿಸಿಕೊಂಡ ಸಂಗ್ರಹಾಗಾರಗಳು ಇವನ್ನೆಲ್ಲ ಮುಂದೆ ಬೇರೆಯದೇ ದೊಡ್ಡ ಉದ್ದೇಶವೊಂದಕ್ಕೆ ರಿಲಾಯನ್ಸ್ ಥರದ ಕಂಪನಿಗಳು ಬಳಸಿಕೊಳ್ಳಬಹುದು.

ಹೀಗೆ ದೊಡ್ಡ ಮೀನೊಂದರಿಂದ ನುಂಗಿಸಿಕೊಳ್ಳುವುದಕ್ಕೂ ಮೊದಲು ಡಂಜೋ, ಬ್ಲಿಂಕಿಟ್ ಥರದವೆಲ್ಲ ದುಡ್ಡು ಸುಡುವ ಮೂಲಕವೇ ಹೀರೋಗಿರಿ ಮೆರೆದುಕೊಂಡಿರುತ್ತವಷ್ಟೆ ಎಂಬುದು ಬಹುತೇಕ ನಿಚ್ಚಳ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!