ಹೊಸದಿಗಂತ ಡಿಜಿಟಲ್ ಡೆಸ್ಕ್:
ತಿರುಪತಿ ತಿರುಮಲ ದೇವಸ್ಥಾನ (ಟಿಟಿಡಿ) ಇನ್ನು ಮುಂದೆ ಅಕ್ಕಿ, ಬೆಲ್ಲ ಮತ್ತು ಅರಿಶಿನದಂತಹ ಎಲ್ಲಾ ಕಚ್ಚಾ ಪದಾರ್ಥಗಳನ್ನು ಸಾವಯವ ಕೃಷಿಕರಿಂದಲೇ ಖರೀದಿ ಮಾಡಲಿದೆ ಎಂದು ಟಿಟಿಡಿ ಅಧ್ಯಕ್ಷ ಸುಬ್ಬಾ ರೆಡ್ಡಿ ತಿಳಿಸಿದ್ದಾರೆ.
ವರ್ಷಕ್ಕೆ 6 ಸಾವಿರ ಟನ್ ಅಕ್ಕಿ, 7 ಸಾವಿರ ಟನ್ ಬೇಳೆಕಾಳುಗಳು, 6 ಸಾವಿರ ಟನ್ ಹಸುವಿನ ತುಪ್ಪ ಸೇರಿದಂತೆ ಇತರೆ ಪದಾರ್ಥಗಳನ್ನು ದೇವರ ನೈವೇದ್ಯಕ್ಕೆ ಬಳಸಲಾಗುತ್ತದೆ. ಹಾಗಾಗಿ ಶ್ರೀವಾರಿ ನೈವೇದ್ಯಕ್ಕೆ ಬೇಕಿರುವ ಪದಾರ್ಥಗಳನ್ನು ಸಾವಯವ ರೈತರಿಂದಲೇ ಖರೀದಿಸಲು ಟಿಟಿಡಿ ನಿರ್ಧರಿಸಿದೆ.
ತಿರುಪತಿಯಲ್ಲಿ ನಡೆದ ಗೋಮಹಾ ಸಮ್ಮೇಳನದ ಸಮಾರೋಪದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಸಮ್ಮುಖದಲ್ಲಿ ಈಗಾಗಲೇ ಟಿಟಿಡಿ ರೈತ ಸಧಿಕರ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಮೊದಲ ಹಂತದಲ್ಲಿ ಕಡಪ, ಕರ್ನೂಲ್, ಪ್ರಕಾಶಂ ಮತ್ತು ಅನಂತಪುರಂ ಜಿಲ್ಲೆ ರೈತರಿಂದ ಸಾವಯವ ಕೃಷಿ ಮೂಲಕ ಬೆಳೆದ ಕಡಲೆಯನ್ನು ಟಿಟಿಡಿ ಖರೀದಿಸಲಿದೆ.
ಟಿಟಿಡಿ ದೇಸಿ ಗೋವುಗಳ ನಿರ್ವಹಣೆಗಾಗಿ ಗೋಶಾಲೆಗಳಿಗೆ ಆರ್ಥಿಕ ನೆರವು ನೀಡುವ ಮೂಲಕ ತೆಲುಗು ರಾಜ್ಯಗಳಲ್ಲಿ ಟಿಟಿಡಿ ಗೋ ಸಂರಕ್ಷಣೆಯನ್ನು ಉತ್ತೇಜಿಸುತ್ತದೆ.
ಎರಡೂ ತೆಲುಗು ರಾಜ್ಯಗಳಲ್ಲಿ 600ಕ್ಕೂ ಹೆಚ್ಚು ಗೋಶಾಲೆಗಳನ್ನು ಅಭಿವೃದ್ಧಿಪಡಿಸಲು ಕ್ರಿಯಾ ಯೋಜನೆಯನ್ನೂ ಸಿದ್ಧಪಡಿಸಲಾಗುತ್ತಿದೆ ಎಂದರು.