ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಎಂ ಅವರು ನಿಶ್ಚಿತವಾಗಿ ರಾಜೀನಾಮೆ ಕೊಡಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಭವಿಷ್ಯ ನುಡಿದಿದ್ದಾರೆ.
ದೇವನಹಳ್ಳಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುವುದರಲ್ಲಿ ಎಳ್ಳಷ್ಟೂ ಅನುಮಾನ ಇಲ್ಲ. ದಿನ ಬೆಳಗಾದರೆ, ನಾನೂ ಮುಖ್ಯಮಂತ್ರಿ ಆಗ್ಬೇಕು. ನನಗೂ ಆಸೆ ಇದೆ. ನಾನೇನೂ ಸನ್ಯಾಸಿ ಅಲ್ಲ ಎಂದು ಅನೇಕ ಕಾಂಗ್ರೆಸ್ ಮುಖಂಡರು ಹೇಳಿಕೆ ನೀಡುತ್ತಿದ್ದಾರೆ.
ಎಂ.ಬಿ ಪಾಟೀಲ್, ಬಸವರಾಜ ರಾಯರೆಡ್ಡಿ, ಆರ್.ವಿ.ದೇಶಪಾಂಡೆ ಮೊದಲಾದವರು ಹೇಳಿಕೆ ಕೊಟ್ಟಿದ್ದಾರೆ. ಮತ್ತೊಂದು ಕಡೆ ಇಂಥ ಹೇಳಿಕೆ ನಿಲ್ಲಿಸಲು ಸೂಚಿಸುವಂತೆ ಕಾಂಗ್ರೆಸ್ ಮುಖಂಡರೇ ಅವರ ಹೈಕಮಾಂಡ್‌ಗೆ ಪತ್ರ ಬರೆದಿದ್ದಾರೆ ಎಂದು ತಿಳಿಸಿದ್ದಾರೆ.
ಮುಖ್ಯಮಂತ್ರಿ ಸ್ಥಾನಕ್ಕೆ ಈಗಾಗಲೇ ಹಗ್ಗಜಗ್ಗಾಟ ಶುರುವಾಗಿದೆ. ಯಾವುದೇ ಸಂದರ್ಭದಲ್ಲಿ ಬೇಕಾದರೂ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ನುಡಿದಿದ್ದಾರೆ.