ಹೊಸದಿಗಂತ ವರದಿ, ಬಳ್ಳಾರಿ:
ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಅವರ 55ನೇ ಜನ್ಮ ದಿನದ ಹಿನ್ನೆಲೆಯಲ್ಲಿ ರೆಡ್ಡಿ ಅಭಿಮಾನಿಗಳು ಜನಾರ್ಧನ ರೆಡ್ಡಿ ಅವರಿಗೆ ಮಂಗಳವಾರ ಚಿನ್ನ, ಬೆಳ್ಳಿ, ನಾಣ್ಯಗಳು ಹಾಗೂ ಧಾನ್ಯಗಳಿಂದ ತುಲಾಭಾರ ನೆರವೇರಿಸಿದರು.
ನಗರದ ಅಧಿದೇವತೆ ಶ್ರೀ ಕನಕ ದುರ್ಗಮ್ಮ ದೇವಿ ದೇಗುಲ ಆವರಣದಲ್ಲಿ ರೆಡ್ಡಿ ಅವರ ಅಭಿಮಾನಿಗಳು ಜನ್ಮ ದಿನದ ನಿಮಿತ್ತ ಶ್ರೀ ಕನಕ ದುರ್ಗಮ್ಮ ದೇವಿಗೆ ವಿಶೇಷ ಪೂಜೆ, ಅರ್ಚನೆ ಸೇರಿದಂತೆ ವಿವಿಧ ಪೂಜೆಗಳನ್ನು ನೆರವೇರಿಸಿ, ರೆಡ್ಡಿ ಅವರು ರಾಜಕೀಯ ಜೀವನದಲ್ಲಿ ಇನ್ನಷ್ಟು ದೊಡ್ಡ ಮಟ್ಟದಲ್ಲಿ ಬೆಳೆದು ಇತರರಿಗೆ ಮಾದರಿಯಾಗಲಿ ಎಂದು ಪ್ರಾರ್ಥಿಸಿದರು. 55 ಚಿನ್ನದ ನಾಣ್ಯ, 55 ಬೆಳ್ಳಿ ನಾಣ್ಯ ಹಾಗೂ 5 ರೂ. ಹಾಗೂ 10 ರೂ. ಗಳ ನಾಣ್ಯಗಳು, ಅಕ್ಕಿ, ಬೆಲ್ಲದಿಂದ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಅವರಿಗೆ ಅವರ ಅಭಿಮಾನಿಗಳು ತುಲಾಭಾರ ನೆರವೇರಿಸಿ ಪ್ರೀತಿ, ಅಭಿಮಾನ ಅರ್ಪಿಸಿದರು. ಅಭಿಮಾನಿಗಳ ಗೌರವ ಸ್ವೀಕರಿಸಿದ ಬಳಿಕ ಗಾಲಿ ಜನಾರ್ಧನ ರೆಡ್ಡಿ ಅವರು ಮಾತನಾಡಿ, ನಿಮ್ಮೆಲ್ಲರ ಪ್ರೀತಿ, ವಿಶ್ವಾಸಕ್ಕೆ ಯಾವತ್ತು ಚಿರ ಋಣಿಯಾಗಿರುವೆ, ಬಳ್ಳಾರಿಯ ಜನರನ್ನು, ಬಳ್ಳಾರಿಯ ನೆಲವನ್ನು ಕೊನೆ ಉಸಿರು ಇರುವವರೆಗೆ ಮರೆಯುವ ಮಾತೇ ಇಲ್ಲ, ರಾಜಕೀಯ ಜನ್ಮ ನೀಡಿದ ಬಳ್ಳಾರಿಯ ಜನರನ್ನು ಕೊನೆ ಉಸಿರು ಇರೋವರೆಗೂ ಮರೆಯೋಲ್ಲ ಎಂದರು.
ದೇಗುಲಕ್ಕೆ ಭೇಟಿ: ಹುಟ್ಟು ಹಬ್ಬ ಹಿನ್ನೆಲೆ ಮಾಜಿ ಸಚಿವ ಗಾಲಿಜನಾರ್ಧನ ರೆಡ್ಡಿ ಅವರು, ಪತ್ನಿ ಅರುಣಾ ಲಕ್ಷ್ಮೀ, ಹಾಗೂ ಸಹೋದರ, ನಗರ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ, ಸಾರಿಗೆ ಸಚಿವ ಬಿ.ಶ್ರೀರಾಮುಲು, ಮಾಜಿ ಸಂಸದರಾದ ಜೆ.ಶಾಂತಾ, ಸಣ್ಣ ಫಕೀರಪ್ಪ ಅವರೊಂದಿಗೆ ನಗರದ ಅಧದೇವತೆ, ಶ್ರೀ ಕನಕ ದುರ್ಗಮ್ಮ ದೇವಿ ದೇಗುಲಕ್ಕೆ ತೆರಳಿ ವಿಶೇಷ ಪೂಜೆ, ಅರ್ಚನೆ ಸಲ್ಲಿಸಿ, ಭಕ್ತಿ ಸಮರ್ಪಿಸಿದರು. ಜನಾರ್ಧನ ರೆಡ್ಡಿ ಅವರು ದೇಗುಲಕ್ಕೆ ಆಗಮಿಸುತ್ತಿದ್ದಂತೆ ಅವರ ಅಭಿಮಾನಿಗಳು, ಪಟಾಕಿ ಸಿಡಿಸಿ ಸಂಭ್ರಮಿಸಿದರು. ನಂತರ ಕೋವಿಡ್-19 ನಿಯಮದಂತೆ ಅಭಿಮಾನಿಗಳು ಹೂವು ಗುಚ್ಛ ನೀಡಿ ಶುಭಾಷಯಗಳನ್ನು ತಿಳಿಸಿದರು.