Sunday, August 14, 2022

Latest Posts

ನಿಸರ್ಗ ತಾಣ ಮುಳ್ಳಯ್ಯನಗಿರಿಗೆ ಪ್ರವಾಸಿಗರ ದಂಡು: ವಾಹನ ದಟ್ಟಣೆ ನಿಯಂತ್ರಣಕ್ಕೆ ಹರಸಾಹಸ ಪಟ್ಟ ಪೊಲೀಸರು!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………

ಹೊಸ ದಿಗಂತ ವರದಿ, ಚಿಕ್ಕಮಗಳೂರು:

ಸರಣಿ ರಜೆ ಹಿನ್ನೆಲೆಯಲ್ಲಿ ಪ್ರಸಿದ್ಧ ನಿಸರ್ಗ ತಾಣ ಮುಳ್ಳಯ್ಯನಗಿರಿಗೆ ಭಾನುವಾರ ಭಾರೀ ಸಂಖ್ಯೆಯ ಪ್ರವಾಸಿಗರು ದಾಂಗುಡಿ ಇಟ್ಟಿದ್ದು, ವಾಹನ ದಟ್ಟಣೆ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಗಿ ಬಂತು.
ಕೊರೋನಾ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕಳೆದ ನಾಲ್ಕೈದು ವಾರಗಳಿಂದ ವೀಕೆಂಡ್‍ನಲ್ಲಿ ದಿನಕ್ಕೆ ಎರಡು ಪಾಳಿಯಲ್ಲಿ 300 ವಾಹನಗಳನ್ನು ಮಾತ್ರ ಗಿರಿ ಪ್ರದೇಶಕ್ಕೆ ಬಿಡುವ ತೀರ್ಮಾನಕ್ಕೆ ಬಂದಿದೆ. ಅದರಂತೆ ಇಂದೂ ಸಹ ನಿಗಧಿತ ವಾಹನಗಳಿಗೆ ಟೋಕನ್ ವಿತರಿಸಿ ಉಳಿದವರನ್ನು ಕೈಮರ ಗೇಟ್‍ನಲ್ಲೇ ತಡೆದ ಕಾರಣ ಪ್ರವಾಸಿಗರು ಹಾಗೂ ಪೊಲಿಸರ ನಡುವೆ ಮಾತಿನ ಚಕಮಕಿಯೂ ಉಂಟಾಯಿತು.
ಚೆಕ್‍ಪೋಸ್ಟ್ ಸಿಬ್ಬಂದಿಗಳ ಸೂಚನೆ ಮೀರಿ ಗೇಟ್ ದಾಟಲು ಮುಂದಾದ ವಾಹನ ಚಾಲಕರಿಗೆ ಪೊಲೀಸರು ಖಡಕ್ ಎಚ್ಚರಿಕೆ ನೀಡಿದ ನಂತರ ವಿಧಿಯಿಲ್ಲದೆ ಸಾವಿರಾರು ಜನರು ನಿರಾಸೆಯಿಂದ ವಾಪಾಸಾಗಬೇಕಾಯಿತು. ಬೆಳಗ್ಗೆ 6 ಗಂಟೆಯಿಂದಲೇ ರಾಜ್ಯದ ವಿವಿಧ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಸಾವಿರಾರು ವಾಹನಗಳು ಗಿರಿಕಡೆಗೆ ಹೊರಟಿದ್ದವು.
ಇಂದು ಪ್ರವಾಸಿಗರ ಸಂಖ್ಯೆ ಹೆಚ್ಚಿದ್ದ ಕಾರಣ ಚೆಕ್‍ಪೋಸ್ಟ್ ಸಿಬ್ಬಂದಿ ಹಾಗೂ ಪೊಲೀಸರು ಎರಡು ಪಾಳಿಯ ಬದಲಿಗೆ ಮೂರು ಪಾಳಿಯಲ್ಲಿ ಹೆಚ್ಚಿನವರಿಗೆ ಅವಕಾಶ ಮಾಡಿಕೊಡಲು ತೀರ್ಮಾನಿಸಿ ಬೆಳಗ್ಗೆ 6.30, ಮಧ್ಯಾಹ್ನ 11 ಗಂಟೆ ಹಾಗೂ 2 ಗಂಟೆಗೆ ಮೂರನೇ ಪಾಳಿಯಲ್ಲಿ ತಲಾ 200 ವಾಹನಗಳನ್ನು ಗಿರಿಕಡೆಗೆ ಬಿಟ್ಟರು. ಆದರೂ ಇನ್ನೂ ಸಾವಿರಾರು ಪ್ರವಾಸಿಗರು ಗೇಟ್‍ನಿಂದ ಹೊರಗುಳಿಯಬೇಕಾಯಿತು. ಇದರಿಂದ ಆಕ್ರೋಷಗೊಂಡವರು ಪೊಲೀಸರ ವಿರುದ್ಧ ತಿರುಗಿ ಬಿದ್ದರು. ಆದರೂ ಒತ್ತಡಕ್ಕೆ ಮಣಿಯದ ಪೊಲೀಸರು ಪರಿಸ್ಥಿತಿ ಬಗ್ಗೆ ಮನವರಿಕೆ ಮಾಡಿ, ಕೆಲವರಿಗೆ ಎಚ್ಚರಿಕೆಯನ್ನೂ ನೀಡಿ ವಾಪಾಸ್ ಕಳಿಸಿದರು.
ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ದತ್ತಪೀಠ, ಮಾಣಿಕ್ಯಧಾರ ಭಾಗಕ್ಕೆ ಇಂದು ಸಾವಿರಾರು ಪ್ರವಾಸಿಗರು ಭೇಟಿ ನೀಡಿದ್ದರು. ಏಕಕಾಲಕ್ಕೆ ಭಾರೀ ವಾಹನಗಳು ಬಂದ ಹಿನ್ನೆಲೆ ಮುಳ್ಳಯ್ಯನಗಿರಿ, ಅಲ್ಲಂಪುರ ಹಾಗೂ ತರೀಕೆರೆ ಮಾರ್ಗದಲ್ಲಿ ನೂರಾರು ವಾಹಗಳು ರಸ್ತೆ ಬದಿ ಸಾಲುಗಟ್ಟಿ ನಿಂತಿದ್ದವು. ಇದರಿಂದ ಸ್ಥಳೀಯರು ಸಹ ಕಿರಿಕಿರಿ ಅನುಭವಿಸಬೇಕಾಯಿತು.
ನಿರ್ಬಂಧಗಳ ನಡುವೆ ಗಿರಿಶ್ರೇಣಿ ಪ್ರವಾಸಿ ತಾಣಗಳಿಗೆ ತೆರಳಲು ಅವಕಾಶ ಸಿಕ್ಕವರ ಖುಷಿಗೆ ಪಾರವೇ ಇರಲಿಲ್ಲ. ಇಡೀ ದಿನ ಸುರಿದ ಜಿಟಿ ಜಿಟಿ ಮಳೆ, ಮಂಜಿನ ವಾತಾವರಣದಲ್ಲಿ ಮಿಂದು ಸೆಲ್ಫಿ ಕ್ಲಿಕ್ಕಿಸಿಕೊಂಡರು. ಮಳೆಯಲ್ಲೇ ತೋಯುತ್ತಾ ಬೈಕ್‍ಗಳಲ್ಲಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಿಂದ ಬಂದಿದ್ದ ಯುವ ಜೋಡಿಗಳು ಕುಣಿದು ಕುಪ್ಪಳಿಸಿದರು.
ಗಿರಿತಪ್ಪಲಿನ ಹೋಂಸ್ಟೇ, ರೆಸಾರ್ಟ್‍ಗಳೆಲ್ಲವೂ ಭರ್ತಿಯಾಗಿದ್ದವು. ಅಲ್ಲಿ ತಂಗಿದ್ದವರಿಗೆ ಟೋಕನ್ ಪಡೆಯುವುದರಿಂದ ರಿಯಾಯ್ತಿ ನೀಡಲಾಗಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss