ಟರ್ಕಿಯಲ್ಲಿ ಮುಂದುವರಿದ ಸಾವಿನ ಸರಣಿ 41ಸಾವಿರಕ್ಕೆ ಏರಿಕೆ: ಶಿಥಿಲಗಳಡಿ ಇನ್ನೂ ಉಸಿರಾಡುತ್ತಿದ್ದಾರೆ ಜನ 

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕಳೆದ ಸೋಮವಾರ ಟರ್ಕಿಯಲ್ಲಿ ಸಂಭವಿಸಿದ ಭೂಕಂಪ ಜನರ ಬದುಕನ್ನು ನರಕದ ಕೂಪಕ್ಕೆ ತಳ್ಳಿದೆ. ಹತ್ತು ದಿನ ಕಳೆದರೂ ಅವಶೇಷಗಳಡಿ ಜೀವಂತವಾಗಿ ಉಸಿರಾಡುತ್ತಿರವವರ ಸಹಾಯಕ್ಕಾಗಿ ಅಂಗಲಾಚುತ್ತಿರುವವರ ಆರ್ತನಾದ ಕೇಳಿಬರುತ್ತದೆ. ಇದುವರೆಗೂ ಭೂಕಂಪದಿಂದ ಸತ್ತವರ ಸಂಖ್ಯೆ 41,000ಗಡಿ ದಾಟಿದೆ. ಯುಎನ್ ಮತ್ತು ಸಿರಿಯನ್ ಸರ್ಕಾರದ ಪ್ರಕಾರ ಸಿರಿಯಾದಲ್ಲಿ 5,800 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರೆ, 35,418 ಜನರು ಸಾವನ್ನಪ್ಪಿದ್ದಾರೆ ಎಂದು ಟರ್ಕಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಮಾನವೀಯ ನೆರವು ಸಾಗಿಸುವ ಹತ್ತು ಅಂತರಾಷ್ಟ್ರೀಯ ವಲಸೆ ಟ್ರಕ್‌ಗಳು ಟರ್ಕಿಯಿಂದ ವಾಯುವ್ಯ ಸಿರಿಯಾಕ್ಕೆ ತೆರಳಿವೆ. ವಿಶ್ವ ಆರೋಗ್ಯ ಸಂಸ್ಥೆಯು ಟರ್ಕಿಯಲ್ಲಿನ ಭೂಕಂಪವನ್ನು ಈ ಶತಮಾನ ಕಂಡ ಅತ್ಯಂತ ಭೀಕರವಾದ ನೈಸರ್ಗಿಕ ವಿಪತ್ತು ಎಂದು ವಿವರಿಸಿದೆ. ಟರ್ಕಿಯಲ್ಲಿ ಅವಶೇಷಗಳಿಂದ 8,000 ಕ್ಕೂ ಹೆಚ್ಚು ಜನರನ್ನು ಜೀವಂತವಾಗಿ ಹೊರತೆಗೆಯಲಾಗಿದೆ ಎಂದು ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಹೇಳಿದ್ದಾರೆ. ಭೂಕಂಪದ ನಂತರ ಸಿರಿಯಾದಲ್ಲಿ 5.3 ಮಿಲಿಯನ್ ಜನರು ನಿರಾಶ್ರಿತರಾಗಬಹುದು ಎಂದು ಯುಎನ್ ಅಂದಾಜಿಸಿದೆ. ಟರ್ಕಿ ಮತ್ತು ಸಿರಿಯಾದಲ್ಲಿ ಸುಮಾರು 900,000 ಜನರಿಗೆ ಬಿಸಿ ಆಹಾರದ ತುರ್ತು ಅಗತ್ಯವಿದೆ.

ದೊಡ್ಡವರು ಬಿಡಿ, ಈ ನೈಸರ್ಗಿಕ ವಿಕೋಪಕ್ಕೆ ಏಳು ದಶಲಕ್ಷಕ್ಕೂ ಹೆಚ್ಚು ಮಕ್ಕಳು ಬಾಧಿತರಾಗಿದ್ದಾರೆ ಎಂದು ವಿಶ್ವಸಂಸ್ಥೆಯು ಹೇಳಿದೆ. ಎರಡು ಭೂಕಂಪಗಳಿಂದ ಹಾನಿಗೊಳಗಾದ 10 ಪ್ರಾಂತ್ಯಗಳಲ್ಲಿ ವಾಸಿಸುವ ಒಟ್ಟು ಮಕ್ಕಳ ಸಂಖ್ಯೆ 4.6 ಮಿಲಿಯನ್. ಸಿರಿಯಾದಲ್ಲಿ, 2.5 ಮಿಲಿಯನ್ ಮಕ್ಕಳು ಬಾಧಿತರಾಗಿದ್ದಾರೆ. ಊಹೆಗೆ ನಿಲುಕದ ರೀತಿಯಲ್ಲಿ ಜನರ ಸಾವು ಏರುತ್ತಲೇ ಇದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!