ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಐಎಸ್‌ಡಿ (ರಾಜ್ಯ ಆಂತರಿಕ ಭದ್ರತಾ ವಿಭಾಗ) ಐಜಿಪಿಯಾಗಿದ್ದ ಡಿ. ರೂಪಾ ಅವರು ಕೆಳಹಂತದ ಸಿಬ್ಬಂದಿಗಳನ್ನು ಬಳಸಿಕೊಂಡು ತಮ್ಮ ಕೊಠಡಿಯನ್ನು ಅನಧಿಕೃತವಾಗಿ ಪ್ರವೇಶಿಸಿ, ಕೆಲ ದಾಖಲೆಗಳನ್ನು ಇರಿಸಿದ್ದಾರೆ ಎಂದು ಆರೋಪಿಸಿ ಐಎಸ್‌ಡಿಯ ನಿರ್ಗಮಿತ ಡಿಐಜಿ ವರ್ತಿಕಾ ಕಟಿಯಾರ್ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ನೀಡಿದ್ದ ದೂರಿಗೆ ಇದೀಗ ಸ್ವತಃ ಡಿ ರೂಪಾ ಮೌದ್ಗಿಲ್ ಅವರೇ ಸ್ಪಷ್ಟೀಕರಣ ನಿಡಿದ್ದಾರೆ.
ಈ ಸಂಬಂಧ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಪತ್ರ ಬರೆದಿದ್ದು, ಆಂತರಿಕ ಭದ್ರತಾ ವಿಭಾಗದ ಡಿಐಜಿ ವರ್ತಿಕಾ ಕಟಿಯಾರ್ ಅವರು ಕೆಲವು ಸುಳ್ಳು ಮತ್ತು ಆಧಾರರಹಿತ ಆರೋಪಗಳನ್ನು ಮಾಡಿ ಸುಳ್ಳು ದೂರು ನೀಡಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.
ವರ್ತಿಕಾ ಅವರು ಶಿಸ್ತಿನ ಇಲಾಖೆಯಲ್ಲಿ ಇದ್ದುಕೊಂಡು ಅಶಿಸ್ತಿನ ರೀತಿ ನಡೆದುಕೊಂಡಿದ್ದಾರೆ. ಹೀಗಾಗಿ ಅವರ ವಿರುದ್ಧ ಶಿಸ್ತು ಕ್ರಮಕೈಗೊಳ್ಳಬೇಕೆಂದು ರೂಪಾ ಅವರು ಪತ್ರದ ಮೂಲಕ ಮನವಿ ಮಾಡಿದ್ದಾರೆ .
ರೂಪಾ ವಿರುದ್ಧ ಸರ್ಕಾರದ ಮುಖ್ಯಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ ಆಂತರಿಕ ಭದ್ರತಾ ವಿಭಾಗದ ಡಿಐಜಿಯಾಗಿದ್ದ ವರ್ತಿಕಾ ಅವರನ್ನು ಸಿವಿ ಡಿಫೆನ್ಸ್ ಮತ್ತು ಹೋಮ್ ಗಾರ್ಡ್ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿತ್ತು. ಬಳಿಕ ಇಂದು(ಮಾರ್ಚ್ 05) ಆಂತರಿಕ ಭದ್ರತಾ ವಿಭಾಗದ ಐಜಿಪಿಯಾಗಿದ್ದ ರೂಪಾ ಅವರನ್ನು ಕರ್ನಾಟಕ ಸಿಲ್ಕ್ ಮಾರ್ಕೆಟಿಂಗ್ ಬೋರ್ಡ್ ಎಂಡಿ ಆಗಿ ವರ್ಗಾವಣೆ ಮಾಡಲಾಗಿದೆ.