ಎರಡು ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ಟ್ವಿಟ್ಟರ್ ಅನ್‌ಫಾಲೋ ಮಾಡ್ತಿರೋದಕ್ಕೆ ಇಲ್ಲಿದೆ ಕಾರಣ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಎಲಾನ್ ಮಸ್ಕ್ ನೇತೃತ್ವ ವಹಿಸಿಕೊಂಡಾಗಿನಿಂದ ಹಲವು ವಿಚಾರಗಳಿಗಾಗಿ ಸುದ್ದಿಯಲ್ಲಿರುವ ಟ್ವಿಟ್ಟರ್ ಈಗ ಮತ್ತೊಂದು ಚರ್ಚೆ ಎಬ್ಬಿಸಿದೆ. ಟ್ವಿಟ್ಟರ್ ಸಾಮಾಜಿಕ ತಾಣದಲ್ಲಿ ಇತರ ಖಾತೆಗಳಿಗೆ ದೃಢೀಕರಣ ಕೊಡಲೆಂದೇ ತನ್ನದೂ ಒಂದು ಖಾತೆಯನ್ನು ಹೊಂದಿರುವ ಕಂಪನಿ (ಟ್ವಿಟ್ಟರ್ ವೆರಿಫೈಡ್), ಆ ಖಾತೆಯಿಂದ ಜಗತ್ತಿನ ಹಲವು ಪ್ರಮುಖರನ್ನು ಫಾಲೊ ಮಾಡುತ್ತಿತ್ತು. ಇದೀಗ ಅವರೆಲ್ಲರನ್ನೂ ಅನ್ ಫಾಲೊ ಮಾಡಿರುವ ಅದರ ನಡೆ ಚರ್ಚೆಗೆ ಗ್ರಾಸವಾಗಿದೆ.

ಇವತ್ತಿಗೆ ನೀವು ಟ್ವಿಟ್ಟರಿನಲ್ಲಿ ಅದರದ್ದೇ ಅಧಿಕೃತ ಖಾತೆಯ ವಿವರ ನೋಡಿದರೆ, ಆ ಖಾತೆಯನ್ನು 40 ಲಕ್ಷಕ್ಕೂ ಹೆಚ್ಚು ಮಂದಿ ಫಾಲೊ ಮಾಡುತ್ತಿದ್ದಾರೆ, ಆದರೆ ಆ ಖಾತೆ 0 ಮಂದಿಯನ್ನು ಫಾಲೊ ಮಾಡುತ್ತಿದೆ ಎಂದು ತಿಳಿದುಬರುತ್ತಿದೆ. ಟ್ವಿಟ್ಟರ್ ವೆರಿಫೈಡ್ ಎಂಬ ಖಾತೆ ಕೆಲವೇ ಗಂಟೆಗಳಲ್ಲಿ 225,000 ಖಾತೆಗಳನ್ನು ಅನ್​ಫಾಲೋ ಮಾಡಿದೆ.

ಟ್ವಿಟ್ಟರಿನಲ್ಲಿ ಖಾತೆ ಹೊಂದಿರುವವರು ಅದರ ಅಧಿಕೃತ ಮುದ್ರೆ ಸಾರುವುದಕ್ಕೋಸ್ಕರ ಫೋನ್ ನಂಬರಿಗೆ ಲಿಂಕ್ ಮಾಡಿ ಹಸಿರು ಟಿಕ್ ಒಂದನ್ನು ಪಡೆದುಕೊಳ್ಳುವ ಕ್ರಮ ಜಾರಿಯಲ್ಲಿತ್ತು. ಮಸ್ಕ್ ತೆಕ್ಕೆಗೆ ಟ್ವಿಟ್ಟರ್ ಬಂದ ನಂತರ ಈ ಬ್ಲೂ ಟಿಕ್ ಗೆ ಹಣ ಪಾವತಿಸಬೇಕು ಎಂಬ ನಿಯಮ ತರಲಾಯಿತು ಮತ್ತದಕ್ಕೆ ಏಪ್ರಿಲ್ 1ರ ಗಡುವು ನೀಡಲಾಗಿತ್ತು. ಆಗ ದೊಡ್ಡಸಂಖ್ಯೆಯಲ್ಲಿ ಬಳಕೆದಾರರು ತಮಗೆ ಅಧಿಕೃತತೆಯ ಬ್ಲೂ ಟಿಕ್ ಏನೂ ಬೇಕಿಲ್ಲ ಎಂದು ಹಣ ಪಾವತಿಸದೇ ಉಳಿದರು.

ಇದೀಗ ಟ್ವಿಟ್ಟರ್ ಅನ್ ಫಾಲೊ ಮಾಡಿರುವುದು ಹೀಗೆ ಅಧಿಕೃತ ಮುದ್ರೆ ಕಳೆದುಕೊಂಡ ಖಾತೆಗಳನ್ನು ಎನ್ನಲಾಗುತ್ತಿದೆ. ಆದರೆ ಇದಕ್ಕೆ ಅಧಿಕೃತ ಉತ್ತರವೇನೂ ಟ್ವಿಟ್ಟರ್ ಕಡೆಯಿಂದ ಬಂದಿಲ್ಲ.

ಬ್ಲೂಟಿಕ್ ಪಾವತಿಯಿಂದ ದೂರ ಉಳಿಯುವವರ ಖಾತೆಗಳು ಮೊದಲಿನ ವರ್ಚಸ್ಸನ್ನು ಕಳೆದುಕೊಳ್ಳುತ್ತವೆ ಎಂದು ಸೂಚಿಸುವುದಕ್ಕಾಗಿಯೇ ಹೀಗೆ ಎಲ್ಲರನ್ನೂ ಅನ್ ಫಾಲೊ ಮಾಡಲಾಗಿದೆ ಎಂದು ಮಾಧ್ಯಮ ವಿಶ್ಲೇಷಣೆಗಳಲ್ಲಿ ಹೇಳಲಾಗುತ್ತಿದೆ.

ಸಾರ್ವಜನಿಕರು, ಸೆಲೆಬ್ರಿಟಿಗಳಿಂದ ಹಿಡಿದು ರಾಜಕಾರಣಿಗಳು, ಉದ್ಯಮಿಗಳು ಹಾಗೂ ಇತರೆ ವಲಯಗಳಲ್ಲಿ ಹೆಸರು ಮಾಡಿದವರು ಟ್ವಿಟ್ಟರ್ ಬ್ಲೂಟಿಕ್ ದೃಢೀಕರಣ ಪಡೆದುಕೊಳ್ಳುವುದು ಚಾಲ್ತಿಯಲ್ಲಿತ್ತು. ಹೀಗೆ ದೃಢೀಕರಣಕ್ಕಾಗಿ ಟ್ವಿಟ್ಟರಿಗೆ ಮನವಿ ಸಲ್ಲಿಸಿ ಅದನ್ನು ಪಡೆದುಕೊಳ್ಳುವುದು ಪ್ರತಿಷ್ಟೆಯ ವಿಷಯವೇ ಆಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!