ಹೊಸದಿಗಂತ ವರದಿ, ಸಿದ್ದಾಪುರ:
ತಾಲೂಕಿನಲ್ಲಿ ಇದೇ ವರ್ಷ ಈ ವರೆಗೆ ಒಟ್ಟೂ ೩೭ ಜನರಲ್ಲಿ ಮಂಗನ ಕಾಯಿಲೆ ಕಾಣಿಸಿಕೊಂಡಿದೆ. ಶನಿವಾರವೂ ತಾಲೂಕಿನ ಜಿಡ್ಡಿ ಹಾಗೂ ನೆಲ್ಲಿಕೊಪ್ಪ ಸೇರಿ ಎರಡು ಜನರಲ್ಲಿ ಈ ಕಾಯಿಲೆ ಪತ್ತೆಯಾಗಿದ್ದು ಈ ಕಾಯಿಲೆ ವ್ಯಾಪಿಸುತ್ತಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಉತ್ತರ ಕನ್ನಡ, ಶಿವಮೊಗ್ಗಾ ಜಿಲ್ಲೆಗಳಲ್ಲಿ ಮಂಗನ ಕಾಯಿಲೆ ಪ್ರಕರಣಗಳು ವರದಿಯಾಗಿರುವುದರಿಂದ ಆರೋಗ್ಯ ಇಲಾಖೆ ಈ ಕುರಿತು ಸುತ್ತೋಲೆ ಹೊರಡಿಸಿದ್ದು ರೋಗದ ನಿವಾರಣೆಗೆ ಅಗತ್ಯ ಕ್ರಮ ಜರುಗಿಸುವಂತೆ ತಿಳಿಸಿದೆ.
ಸುದೈವದಿಂದ ತಾಲೂಕಿನಲ್ಲಿ ಈ ಹಿಂದಿನಂತೆ ಎಲ್ಲೂ ಪ್ರಾಣಾಪಾಯವಾಗಿಲ್ಲ. ಈಗ ಸರಕಾರಿ ಆಸ್ಪತ್ರೆಯಲ್ಲಿ ಹತ್ತು ಜನ ರೋಗಪೀಡಿತರು ಚಿಕಿತ್ಸೆ ಪಡೆಯುತ್ತಿದ್ದು ಪ್ರತಿಯೊಬ್ಬರೂ ಸುಧಾರಿಸಿಕೊಳ್ಳುತ್ತಿದ್ದಾರೆ. ಇಬ್ಬರು ಮಕ್ಕಳಲ್ಲಿ ಈ ರೋಗ ಕಂಡು ಬಂದಿದ್ದು ಅವರಿಬ್ಬರೂ ಸೂಕ್ತಕಾಲದಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಮತ್ತೋರ್ವ ಬಾಲಕನಿಗೆ ಚಿಕಿತ್ಸೆ ಮುಂದುವರಿದಿದೆ. ಸಿದ್ದಾಪುರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಇಬ್ಬರು, ಮಣಿಪಾಲದಲ್ಲಿ ಮೂವರು, ಅವರವರ ಮನೆಗಳಲ್ಲಿ ೧೫ ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊರ್ಲಕೈ ಭಾಗದಲ್ಲಿ ಈ ಕಾಯಿಲೆ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬಂದಿದ್ದು ಅಲ್ಲಿ ಕೆಲಸಕ್ಕೆಂದು ಹೋಗಿದ್ದ ಹತ್ತಿರದ ಊರಿನವರಲ್ಲೂ ಈ ಕಾಯಿಲೆ ಕಾಣಿಸಿಕೊಂಡಿದೆ. ಹೀಗಾಗಿ ಆರೋಗ್ಯ ಇಲಾಖೆಯಿಂದ ಕೊರ್ಲಕೈ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಆರೋಗ್ಯ ತಪಾಸಣಾ ಶಿಬಿರ ನಡೆಸಲಾಗಿದೆ.
ಇದೀಗ ಫೇ.೫ ರಂದು ಕೊರ್ಲಕೈ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಮಂಗನ ಕಾಯಿಲೆ ಕುರಿತು ಜಾಗೃತಿ ಮೂಡಿಸಲು ಸಾಮೂಹಿಕ ಜಾಗೃತಿ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ. ಶನಿವಾರ ಶಿವಮೊಗ್ಗಾದಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳ ಸಭೆ ನಡೆದಿದ್ದು ಸಿದ್ದಾಪುರ ತಾಲೂಕಾ ಆರೋಗ್ಯಾಧಿಕಾರಿಗಳು ಪಾಲ್ಗೊಂಡು ಮಾರ್ಗದರ್ಶನ ಪಡೆದಿದ್ದಾರೆ.