ಕೊಡಗಿನಲ್ಲಿ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಮತ್ತೆರಡು ಶಾಖೆ ಆರಂಭ

ಹೊಸದಿಗಂತ ವರದಿ ಮಡಿಕೇರಿ:

ಸುಳ್ಯದ ಶ್ರೀ ವೆಂಕಟರಮಣ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಯ ಎರಡು ನೂತನ ಶಾಖೆಗಳನ್ನು ನಾಪೋಕ್ಲು ಮತ್ತು ಸೋಮವಾರಪೇಟೆಯಲ್ಲಿ ಆರಂಭಿಸಲಾಗುತ್ತಿದೆಯೆಂದು ಸೊಸೈಟಿಯ ಅಧ್ಯಕ್ಷ ಪಿ.ಸಿ. ಜಯರಾಮ ಅವರು ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಪೋಕ್ಲುವಿನ ಪೊನ್ನಮ್ಮ ಕಾವೇರಪ್ಪ ಕಾಂಪ್ಲೆಕ್ಸ್’ನಲ್ಲಿ 18ನೇ ಶಾಖೆಯ ಉದ್ಘಾಟನೆ ಜ.23 ರಂದು ಬೆಳಗ್ಗೆ 11 ಗಂಟೆಗೆ ನಡೆಯಲಿದೆ. ಶಾಖೆಯ ಕಚೇರಿಯನ್ನು ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಉದ್ಘಾಟಿಸಲಿದ್ದು, ಭದ್ರತಾ ಕೊಠಡಿಯನ್ನು ಮಡಿಕೇರಿಯ ಪ್ರಾಥಮಿಕ ಕೃಷಿ ಪತ್ತಿನ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಎ.ಕೆ.ಮನು ಮುತ್ತಪ್ಪ, ಗಣಕೀಕರಣ ವ್ಯವಸ್ಥೆಯನ್ನು ಸಹಕಾರ ಸಂಘಗಳ ಉಪನಿಬಂಧಕ ಕೃಷ್ಣಪ್ರಸಾದ್ ಎಂಎಸ್. ಉದ್ಘಾಟಿಸಲಿದ್ದಾರೆ.

ಪ್ರಥಮ ಪಾಲು ಪತ್ರವನ್ನು ನಾಪೋಕ್ಲು ಗ್ರಾಪಂ ಅಧ್ಯಕ್ಷೆ ಪಾರ್ವತಿ, ಪ್ರಥಮ ಠೇವಣಿ ಪತ್ರವನ್ನು ಮಡಿಕೇರಿ ಸರ್ವೋದಯ ಸಮಿತಿ ಅಧ್ಯಕ್ಷ ಕುಶಾಲಪ್ಪ ಗೌಡ ಅಂಬೆಕಲ್ಲು, ಪ್ರಥಮ ಉಳಿತಾಯ ಖಾತೆ ಪತ್ರವನ್ನು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯೆ ತುಳಸಿ ಮೋಹನ್ ಕಡ್ಲೇರ ವಿತರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉದ್ಯಮಿಗಳಾದ ಎ.ಕೆ. ನವೀನ್ ಅಪ್ಪಯ್ಯ ಪಾಲ್ಗೊಳ್ಳಲಿದ್ದು, ಸಭಾಧ್ಯಕ್ಷತೆಯನ್ನು ತಾನೇ ವಹಿಸಲಿರುವುದಾಗಿ ಜಯರಾಮ ಅವರು ವಿವರಿಸಿದರು.

ಸೊಸೈಟಿಯ 19ನೇ ಶಾಖೆ ಸೋಮವಾರಪೇಟೆಯ ನಿಶಾಂತ್ ಟವರ್ಸ್’ನ ಒಂದನೇ ಮಹಡಿಯಲ್ಲಿ ಜ.27 ರಂದು ಉದ್ಘಾಟನೆಗೊಳ್ಳಲಿದೆ. ಶಾಖೆಯ ಕಚೇರಿಯನ್ನು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಉದ್ಘಾಟಿಸಲಿದ್ದಾರೆ. ಭದ್ರತಾ ಕೊಠಡಿಯನ್ನು ಉದ್ಯಮಿ ಡಾ. ಮಂಥರ್ ಗೌಡ, ಗಣಕೀಕರಣ ವ್ಯವಸ್ಥೆಯನ್ನು ಸಹಕಾರ ಸಂಘಗಳ ಸಹಾಯಕ ನಿಬಂಧಕ ಎಂ.ಎ.ಮೋಹನ್ ಉದ್ಘಾಟಿಸಲಿದ್ದಾರೆ. ಪ್ರಥಮ ಪಾಲು ಪತ್ರವನ್ನು ಸೋಮವಾರಪೇಟೆ ಪ.ಪಂ ಅಧ್ಯಕ್ಷ ಪಿ.ಕೆ. ಚಂದ್ರು, ಪ್ರಥಮ ಉಳಿತಾಯ ಖಾತೆ ಪುಸ್ತಕವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ರೋಹಿತ್ ಹೆಚ್., ಪ್ರಥಮ ಠೇವಣಿ ಪತ್ರವನ್ನು ಕಾಫಿ ಬೆಳೆಗಾರರಾದ ಸುವಿನಾ ಕೃಪಾಲ್ ವಿತರಿಸಲಿದ್ದು, ಮುಖ್ಯ ಅತಿಥಿಗಳಾಗಿ ಉದ್ಯಮಿ ಜಿ.ಎಸ್. ಮೋಹನ್ ಪಾಲ್ಗೊಳ್ಳಲಿದ್ದಾರೆಂದು ಹೇಳಿದರು.

ತಿಂಗಳ ಅವಧಿಗೆ ಶೇಕಡಾ ಅರ್ಧ ಹೆಚ್ಚಿನ ಬಡ್ಡಿ- ನೂತನ ಶಾಖೆಗಳ ಆರಂಭದಿಂದ ಒಂದು ತಿಂಗಳ ಅವಧಿಗೆ ಸೀಮಿತವಾಗಿ ಠೇವಣಿಯ ಮೇಲೆ ಶೇ.0.50 ಹೆಚ್ಚುವರಿ ಬಡ್ಡಿಯನ್ನು ನೀಡಲಾಗುತ್ತದೆಂದು ಅಧ್ಯಕ್ಷರು ತಿಳಿಸಿದರು.
ಪ್ರಗತಿಯ ಪಥದಲ್ಲಿ: ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆ-ಆಪರೇಟಿವ್ ಸೊಸೈಟಿಯು 1997ರಲ್ಲಿ ಸುಳ್ಯದ ಗೌಡರ ಯುವ ಸೇವಾ ಸಂಘದಿಂದ 436 ಸದಸ್ಯರನ್ನು ಒಳಗೊಂಡಂತೆ ಸ್ಥಾಪಿಸಲ್ಪಟ್ಟಿತು. ಪ್ರಸ್ತುತ ಸಂಸ್ಥೆಯು 16,196 ಸದಸ್ಯರನ್ನು ಒಳಗೊಂಡಿದ್ದು, 4.06 ಕೋಟಿ ಪಾಲು ಬಂಡವಾಳವನ್ನು ಹೊಂದಿದೆ. 150 ಕೋಟಿಗೂ ಹೆಚ್ಚಿನ ಠೇವಣಿಯನ್ನು ಹೊಂದಿ, 136 ಕೊಟಿಗೂ ಹೆಚ್ಚಿನ ಸಾಲವನ್ನು ಸದಸ್ಯರಿಗೆ ವಿತರಿಸಲಾಗಿದ್ದು, ಸಂಸ್ಥೆಯು ನಿರಂತರವಾಗಿ ಪ್ರಗತಿಯ ಪಥದಲ್ಲಿ ಮುನ್ನಡೆಯುತ್ತಿದೆಯೆಂದು ವಿವರಿಸಿದರು.

2021-22ನೇ ಸಾಲಿನಲ್ಲಿ ಸಂಸ್ಥೆಯು 1.20 ಕೋಟಿ ನಿವ್ವಳ ಲಾಭವನ್ನು ಗಳಿಸಿದೆ. ಪ್ರತಿ ವರ್ಷವೂ ಸದಸ್ಯರಿಗೆ ಶೇ.15 ರಷ್ಟು ಡಿವಿಡೆಂಡನ್ನು ನೀಡಲಾಗುತ್ತಿದ್ದು, ವಾರ್ಷಿಕ 700 ಕೋಟಿ ರೂ. ವಹಿವಾಟನ್ನು ನಡೆಸುತ್ತಿರುವುದಾಗಿ ಮಾಹಿತಿ ನೀಡಿದರು. ಗೋಷ್ಠಿಯಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ಮೋಹನ್‍ರಾಂ ಸುಳ್ಳಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ. ವಿಶ್ವನಾಥ, ಮಡಿಕೇರಿ ಶಾಖೆಯ ಅಧ್ಯಕ್ಷ ಅಂಬೆಕಲ್ಲು ನವೀನ್ ಮಡಿಕೇರಿ ಶಾಖೆಯ ವ್ಯವಸ್ಥಾಪಕ ಅಶೋಕ್ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!