ಹೊಸದಿಗಂತ ವರದಿ, ಮಡಿಕೇರಿ:
ಯುದ್ಧ ಪೀಡಿತ ಉಕ್ರೇನ್’ನಲ್ಲಿ ಕೊಡಗಿನ ಇನ್ನೂ ಇಬ್ಬರು ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದು, ಸೋಮವಾರ ಅಥವಾ ಮಂಗಳವಾರ ನಡೆಯಲಿರುವ ಅಂತಿಮ ಹಂತದ ಕಾರ್ಯಾಚರಣೆಯಲ್ಲಿ ಅವರು ಭಾರತಕ್ಕೆ ಬರುವ ನಿರೀಕ್ಷೆಯಿದೆ ಎಂದು ಜಿಲ್ಲಾಧಿಕಾರಿ ಡಾ. ಬಿ.ಸಿ.ಸತೀಶ ಅವರು ತಿಳಿಸಿದ್ದಾರೆ.
ಜಿಲ್ಲಾಡಳಿತಕ್ಕೆ ದೊರೆತ ಮಾಹಿತಿಯನ್ವಯ ಉಕ್ರೇನ್’ನಲ್ಲಿ ಜಿಲ್ಲೆಯ ಒಟ್ಟು 16 ಮಂದಿ ಇರುವುದಾಗಿ ಹೇಳಲಾಗಿತ್ತು. ಈ ಪೈಕಿ ಈಗಾಗಲೇ 14ಮಂದಿ ತಾಯ್ನಾಡಿಗೆ ಮರಳಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಪ್ರಸಕ್ತ ಉಕ್ರೇನ್’ನ ಸುಮಿ ಯೂನಿವರ್ಸಿಟಿಯಲ್ಲಿ ವೀರಾಜಪೇಟೆಯ ಶ್ರೇಯಾ ಪ್ರದೀಪ್ ಹಾಗೂ ಶನಿವಾರಸಂತೆಯ ಅರ್ಜುನ್ ವಸಂತ್ ಎಂಬಿಬ್ಬರು ಉಳಿದಿದ್ದು, ಅವರನ್ನು ಸೋಮವಾರ ಅಥವಾ ಮಂಗಳವಾರ ನಡೆಯಲಿರುವ ಅಂತಿಮ ಹಂತದ ‘ಆಪರೇಷನ್ ಗಂಗಾ’ ಕಾರ್ಯಾಚರಣೆಯಲ್ಲಿ ಭಾರತಕ್ಕೆ ಕರೆತರುವ ಸಾಧ್ಯತೆ ಇದೆ ಎಂದು ಡಾ.ಸತೀಶ ನುಡಿದರು.
ಜಿಲ್ಲಾ ಡಿಸಾಸ್ಟರ್ ಮ್ಯಾನೇಜ್ ಮೆಂಟ್ ಕೇಂದ್ರ ಈ ವಿದ್ಯಾರ್ಥಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ತಾನು ಕೂಡಾ ವಿದ್ಯಾರ್ಥಿಗಳೊಂದಿಗೆ ಮಾತನಾಡಿದ್ದೇನೆ. ಅಲ್ಲದೆ ಉಪ ವಿಭಾಗಾಧಿಕಾರಿಗಳು ಈ ವಿದ್ಯಾರ್ಥಿಗಳ ಮನೆಗೆ ತೆರಳಿ ಪೋಷಕರಿಗೂ ಧೈರ್ಯ ತುಂಬಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ