ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಕ್ ತಯಾರಿಸಲು ತಂದಿದ್ದ ಎಸೆನ್ಸ್ ಕುಡಿದು ಮೂವರು ಖೈದಿಗಳು ಸಾವನ್ನಪ್ಪಿರುವ ಘಟನೆ ಮೈಸೂರಿನ ಜಿಲ್ಲಾ ಕಾರಾಗೃಹದಲ್ಲಿ ನಡೆದಿದೆ.
ವಿವಿಧ ಅಪರಾಧ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಮೈಸೂರು ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಮೂವರು ಕೈದಿಗಳು ಮೃತಪಟ್ಟಿದ್ದಾರೆ. ಡಿಸೆಂಬರ್ 26 ರಂದು ಮೈಸೂರು ಕಾರಾಗೃಹದಲ್ಲಿ ಬೇಕರಿ ಪದಾರ್ಥಗಳನ್ನು ತಯಾರಿಸುವಾಗ ಕೈದಿಗಳಾದ ಮಾದೇಶ್, ನಾಗರಾಜ್ ಮತ್ತು ರಮೇಶ್ ಪದಾರ್ಥಗಳಿಗೆ ಬಳಸುವ ಎಸ್ಸೆನ್ಸಿಯಲ್ ದ್ರವವನ್ನು ಕುಡಿದಿದ್ದರು. ಪರಿಣಾಮ ಮೂವರು ತೀವ್ರವಾಗಿ ಅಸ್ವಸ್ಥಗೊಂಡಿದ್ದರು.
ಇವರು ಜೈಲಿನ ಬೇಕರಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಹೊಸ ವರ್ಷದ ಹಿನ್ನಲೆ ಕೇಕ್ ತಯಾರಿಸಲು ಸಾಮಾಗ್ರಿಗಳನ್ನು ತಂದಿರಸಲಾಗಿತ್ತು. ಇದರಲ್ಲಿ ಕೇಕ್ ಗೆ ಬಳಸುವ ಎಸೆನ್ಸ್ ತರಲಾಗಿತ್ತು. ಆದರೆ ಈ ಮೂವರು ಕಿಕ್ ಗಾಗಿ ಯಾರಿಗೂ ಹೇಳದೆ ಈ ಎಸೆನ್ಸ್ ಕುಡಿದಿದ್ದರು. ಈ ಘಟನೆ ಸಂಬಂಧ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.