ಹೊಸದಿಗಂತ ಡಿಜಿಟಲ್ ಡೆಸ್ಕ್:
ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಇಬ್ಬರು ಮಹಿಳಾ ನಕ್ಸಲರನ್ನು ಹತ್ಯೆ ಮಾಡಿರುವ ಘಟನೆ ಛತ್ತೀಸ್‌ಗಢದಲ್ಲಿ ನಡೆದಿದೆ.
ದಾಂತೇವಾಡ ಜಿಲ್ಲೆಯ ಅರನ್ಪುರಾ ಪೊಲೀಸ್ ಠಾಣೆ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಇಂದು ಬೆಳಗ್ಗೆ ಎನ್‌ಕೌಂಟರ್ ನಡೆದಿದೆ.
ಜಿಲ್ಲಾ ಮೀಸಲು ಪಡೆ ಪೊಲೀಸರು ಮತ್ತು ನಕ್ಸಲ್ ನಿಗ್ರಹ ದಳದ ಪೊಲೀಸರು ಖಚಿತ ಮಾಹಿತಿ ಮೇರೆಗೆ ಜಂಟಿ ಕಾರ್ಯಾಚರಣೆ ನಡೆಸಿದರು. ಈ ವೇಳೆ ಎರಡು ಕಡೆ ಗುಂಡಿನ ದಾಳಿ ನಡೆದಿದೆ. ಘಟನೆಯಲ್ಲಿ ಇಬ್ಬರು ಮಹಿಳಾ ನಕ್ಸಲರನ್ನು ಹತ್ಯೆ ಮಾಡಲಾಗಿದೆ. ನಾಲ್ವರು ಭದ್ರತಾ ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹತ್ಯೆಯಾದ ಮಹಿಳಾ ನಕ್ಸಲರ ಮೃತದೇಹಗಳು ದೊರೆತಿದ್ದು, ಘಟನಾ ಸ್ಥಳದಲ್ಲಿ ಎರಡು ಬಂದೂಕುಗಳು ಸಿಕ್ಕಿವೆ. ಶೋಧ ಕಾರ್ಯಾಚರಣೆ ಮುಂದುವರೆದಿದೆ ಎಂದು ಅಧಿಕಾರಗಳು ಹೇಳಿದ್ದಾರೆ.