Thursday, August 11, 2022

Latest Posts

ಲಸಿಕೆ ಕುರಿತು ಪ್ರಧಾನಿಗೆ ಪತ್ರ ಬರೆದ ಪ್ರತಿಪಕ್ಷ ನಾಯಕರ ಯೂಟರ್ನ್ ಚರಿತ್ರೆ!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್ಲೈನ್ ಡೆಸ್ಕ್:

ಪ್ರತಿಪಕ್ಷ ನಾಯಕರೆಲ್ಲ ಒಟ್ಟಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದಿರುವ ಪತ್ರದಲ್ಲಿ ಪ್ರಮುಖವಾಗಿ ಪ್ರಸ್ತಾಪಿತವಾಗಿರುವ ಅಂಶ ಎಂದರೆ, ಕೇಂದ್ರ ಸರ್ಕಾರವೇ ದೇಶೀಯವಾಗಿ ಹಾಗೂ ಅಂತಾರಾಷ್ಟ್ರೀಯವಾಗಿ ಲಭ್ಯವಿರುವ ಲಸಿಕೆಗಳನ್ನು ದಾಸ್ತಾನು ಮಾಡಿಕೊಂಡು ರಾಜ್ಯಗಳ ಮೂಲಕ ಎಲ್ಲರಿಗೂ ಪುಕ್ಕಟೆಯಾಗಿ ವಿತರಿಸಬೇಕು ಎನ್ನುವುದು. 

ಆದರೆ ಈ ಪತ್ರಕ್ಕೆ ಸಹಿ ಮಾಡಿರುವ ಕೆಲವು ಪಕ್ಷಗಳು ಮತ್ತು ನೇತಾರರು ಕೇವಲ ಎರಡು ತಿಂಗಳ ಹಿಂದೆ ಇದಕ್ಕೆ ತದ್ವಿರುದ್ಧವಾದ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಲಸಿಕೆ ನೀಡಿಕೆಯಲ್ಲಿ ರಾಜ್ಯಗಳಿಗೆ ಯಾವ ಸ್ವಾತಂತ್ರ್ಯವೂ ಇಲ್ಲ; ಎಲ್ಲವನ್ನೂ ತಾನು ನಿಯಂತ್ರಿಸುವೆ ಎಂದು ಕೇಂದ್ರ ಸರ್ಕಾರ ಕೂತಿದೆ; ಕಂಪನಿಗಳೊಂದಿಗೆ ಮಾತುಕತೆಗೆ ಇಳಿದು ಲಸಿಕೆ ಪಡೆದುಕೊಳ್ಳುವ ಮತ್ತು ನಾಗರಿಕರಿಗೆ ನೀಡುವ ವಿಚಾರದಲ್ಲಿ ರಾಜ್ಯ ಸರ್ಕಾರಗಳಿಗೆ ಅವಕಾಶ ನೀಡಬೇಕು ಎಂದೆಲ್ಲ ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಕಾಂಗ್ರೆಸ್ ಹಾಗೂ ಇತರ ಪಕ್ಷಗಳು ಒತ್ತಡ ತಂದಿದ್ದವು. ಯಾವಾಗ 18 ಮತ್ತು 45ರ ವಯೋಮಾನದ ಒಳಗಿನವರಿಗೆ ಲಸಿಕೆ ಪೂರೈಸುವ ಜವಾಬ್ದಾರಿ ತಮ್ಮ ಮೇಲೆ ಬಿತ್ತೋ ಆಗಿಂದ ಪ್ರತಿಪಕ್ಷ ಆಡಳಿತದ ಬಹುತೇಕ ರಾಜ್ಯಗಳು ಭಿನ್ನರಾಗ ತೆಗೆದಿವೆ.

ಎರಡು ತಿಂಗಳ ಹಿಂದಿನ ಮಾಧ್ಯಮ ವರದಿಗಳಲ್ಲಿ ಕೆಲವು ಪ್ರತಿಪಕ್ಷ ನಾಯಕರು ಈಗ ಪ್ರತಿಪಾದಿಸುತ್ತಿರುವುದಕ್ಕೆ ತದ್ವಿರುದ್ಧವಾದುದನ್ನು ಏನೆಲ್ಲ ಹೇಳಿದ್ದರು ಎಂಬುದನ್ನು ಗಮನಿಸೋಣ.

ಕಾಂಗ್ರೆಸ್ : ಮಾರ್ಚ್ 15, 2021ರಂದು ಐ ಎ ಎನ್ ಎಸ್ ಸುದ್ದಿಸಂಸ್ಥೆ ಮಾಡಿರುವ ವರದಿ ಹೀಗೆ ಹೇಳುತ್ತದೆ- “ಕರೋನಾ ಪ್ರಕರಣಗಳು ಹೆಚ್ಚಳವಾಗುತ್ತಿದ್ದಂತೆ, ಲಸಿಕೆ ಪ್ರಕ್ರಿಯೆಯನ್ನು ವಿಕೇಂದ್ರೀಕರಣಗೊಳಿಸುವುದಕ್ಕೆ ಕಾಂಗ್ರೆಸ್ ಬೇಡಿಕೆ ಇಟ್ಟಿದೆ. ರಾಜ್ಯಗಳಿಗೆ ಹೆಚ್ಚಿನ ಸ್ವಾಯತ್ತೆ ಸಿಕ್ಕರೆ ಮಾತ್ರ ಎಲ್ಲ ನಾಗರಿಕರಿಗೆ ಲಸಿಕೆ ನೀಡುವುದಕ್ಕೆ ಸಾಧ್ಯ ಎಂದು ಅದು ಹೇಳಿದೆ.”

ಮಮತಾ ಬ್ಯಾನರ್ಜಿ: ಫೆಬ್ರವರಿ 24, 2021ರಂದು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ರಾಜ್ಯಗಳು ತಮ್ಮ ಸಂಪನ್ಮೂಲವನ್ನು ಬಳಸಿಕೊಂಡು ಕಂಪನಿಗಳಿಂದ ನೇರವಾಗಿ ಲಸಿಕೆ ದಾಸ್ತಾನು ಮಾಡಿಕೊಳ್ಳುವುದಕ್ಕೆ ಹಾಗೂ ಆ ಮೂಲಕ ಕ್ಷಿಪ್ರಗತಿಯಲ್ಲಿ ಜನರಿಗೆ ಲಸಿಕೆ ನೀಡುವುದಕ್ಕೆ ಅನುವು ಮಾಡಿಕೊಡುವಂತೆ ಸೂಚಿಸಿದ್ದರು. ಏಪ್ರಿಲ್ 18, 2021ರಂದು ಬರೆದ ಮತ್ತೊಂದು ಪತ್ರದಲ್ಲೂ ಇದನ್ನೇ ನೆನಪಿಸಿದ್ದರು. 

ಅಖಿಲೇಶ್ ಯಾದವ್, ಸಮಾಜವಾದಿ ಪಕ್ಷ: ಜನವರಿ 3, 2021ರಂದು ಸಮಾಜವಾದಿ ನೇತಾರ ಹೇಳಿದ್ದು – “ಇದು ಬಿಜೆಪಿಯ ರಾಜಕೀಯದ ಲಸಿಕೆ. ಇದರಲ್ಲಿ ನಂಬಿಕೆ ಇಲ್ಲ. ನಮ್ಮ ಪಕ್ಷ ಅಧಿಕಾರಕ್ಕೆ ಬಂದ ನಂತರ ನಾವು ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡುತ್ತೇವೆ.”

ಇನ್ನು, ಕಾಂಗ್ರೆಸ್ಸಿನ ಶಶಿ ಥರೂರ್, ಅಭಿಷೇಕ್ ಮನು ಸಿಂಘ್ವಿ ಮುಂತಾದವರು ಲಸಿಕೆಯನ್ನು ಮುಕ್ತ ಮಾರುಕಟ್ಟೆಯಲ್ಲಿ ಲಭ್ಯವಾಗುವಂತೆ ನಿಯಂತ್ರಣಮುಕ್ತಗೊಳಿಸಬೇಕು, ಹಣವಿದ್ದವರು ಆ ವಿಧಾನದಲ್ಲಿ ಲಸಿಕೆ ಪಡೆಯಬಹುದು ಎಂದೂ ಸಲಹೆ ನೀಡಿದ್ದರು.


ಇದೀಗ ತಾವೇ ನೀಡಿದ್ದ ಸಲಹೆಗಳು ಮತ್ತು ಸೃಷ್ಟಿಸಿದ್ದ ಒತ್ತಡಗಳಿಂದ ಉಲ್ಟಾ ಹೊಡೆದಿರುವ ಪ್ರತಿಪಕ್ಷಗಳು, “ಲಸಿಕೆಯ ಎಲ್ಲ ಹೊಣೆಯನ್ನು ಕೇಂದ್ರವೇ ಹೊರಲಿ, ಈಗಿಂದೀಗಲೇ ಎಲ್ಲರಿಗೂ ಪುಕ್ಕಟೆ ಲಸಿಕೆ ನೀಡಲಿ” ಎಂಬ ಅಪ್ರಾಯೋಗಿಕ ನಿಲುವಿನಲ್ಲಿ ನಿಂತಿವೆ. 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss