ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನಲ್ಲಿ “ಉಬರ್ ಷಟಲ್ ಬಸ್” ಸೇವೆ ಆರಂಭಿಸಲು ಊಬರ್ ಕಂಪನಿ ನಿರ್ಧರಿಸಿದೆ. ಬೆಂಗಳೂರಿನಲ್ಲಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಲು ಜನ ಗಾಡಿ ಬುಕ್ ಮಾಡಲು ಊಬರ್ ಸೇವೆ ಬಳಸುತ್ತಿದ್ದು, ಇನ್ನೊಂದು ಹೆಜ್ಜೆ ಮುಂದೆ ಹೋಗಲು ಕಂಪನಿ ನಿರ್ಧರಿಸಿದೆ.
ಈ ಕುರಿತಾಗಿ ಉಬರ್ ಇಂಡಿಯಾ ಮತ್ತು ದಕ್ಷಿಣ ಏಷ್ಯಾದ ಅಧ್ಯಕ್ಷರಾದ ಪ್ರಭಜೀತ್ ಸಿಂಗ್ ಮಾತನಾಡಿ, ಉಬರ್ ಷಟಲ್ ಸೇವೆಯನ್ನು ಈಗಾಗಲೆ ದೆಹಲಿ, ಕೊಲ್ಕತ್ತಾ, ಹೈದರಾಬಾದ್ ಮತ್ತು ಮುಂಬೈನಂತಹ ಮಹಾನಗರಗಳಲ್ಲಿ ಆರಂಭಿಸಲಾಗಿದೆ. ಇನ್ಮುಂದೆ ಬೆಂಗಳೂರಿನಲ್ಲೂ ಉಬರ್ ಷಟಲ್ ಸೇವೆ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಟ್ರಾಫಿಕ್ ಕಿರಿಕಿರಿಯಿಂದ ಬಸವಳಿದಿರುವ ಟೆಕ್ಕಿಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಪ್ರಾರಂಭಿಕ ಹಂತದಲ್ಲಿ ಐಟಿ ಕಾರಿಡಾರ್ನ ಕೆಆರ್ಪುರಂ ಮತ್ತು ಸಿಲ್ಕ್ ಬೋರ್ಡ್ (18 ಕಿಮೀ) ಮಧ್ಯೆ ಉಬರ್ ಷಟಲ್ ಆರಂಭಿಸಲು ನಿರ್ಧರಿಸಲಾಗಿದೆ. ಈ ಐಟಿ ಕಾರಿಡಾರ್ ಸುಮಾರು 30 ಟೆಕ್ ಪಾರ್ಕ್ಗಳನ್ನು ಒಳಗೊಂಡಿದ್ದು, 15 ಲಕ್ಷದಷ್ಟು ಐಟಿ ಉದ್ಯೋಗಿಗಳು ಇದ್ದಾರೆ. ಹೀಗಾಗಿ ಈ ಉಬರ್ ಷಟಲ್ ಬೆಂಗಳೂರಿನಲ್ಲೂ ಪ್ರಾರಂಭಿಸುವ ಉದ್ದೇಶ ಇದೆ ಎಂದು ತಿಳಿಸಿದರು.