ಸರ್ಕಾರಿ ನಿವಾಸ ಖಾಲಿ ಮಾಡಿದ ಉದ್ಧವ್‌, ಶಿಂಧೆ ಜೊತೆ 41 ಶಾಸಕರು ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟಿನಿಂದಾಗಿ ಉದ್ಧವ್‌ ಠಾಕ್ರೆ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವುದು ಬಹುತೇಕ ಪಕ್ಕಾ ಆಗಿದೆ. ಶಿವಸೇನೆಯ ಶಾಸಕರೊಂದಿಗೆ ನಡೆಯಬೇಕಿದ್ದ ಸಭೆಯನ್ನು ಉದ್ಧವ್‌ ಠಾಕ್ರೆ ರದ್ದುಗೊಳಿಸಿದ್ದಾರೆ.

ಪ್ರಸ್ತುತ ಗುವಾಹಟಿಯ ರ್ಯಾಡಿಸನ್‌ ಬ್ಲೂ ಹೊಟೇಲಿನಲ್ಲಿ ಬೀಡು ಬಿಟ್ಟಿರುವ ಏಕನಾಥ್‌ ಶಿಂಧೆಯವರೊಂದಿಗೆ 41 ಶಾಸಕರಿದ್ದಾರೆ ಎಂದು ಸ್ವತಃ ಶಿಂಧೆ ಹೇಳುತ್ತಿದ್ದಾರೆ. ಆದರೆ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಪತ್ರವೊಂದರಲ್ಲಿ ಕೇವಲ 36 ಶಾಸಕರ ಹೆಸರು ಉಲ್ಲೇಖಿತವಾಗಿದೆ. ಇಂದು ಮಧ್ಯಾಹ್ನ 2 ಗಂಟೆಗೆ ಎಲ್ಲಾ ಶಾಸಕರ ಹೆಸರನ್ನು ಬಿಡುಗಡೆ ಮಾಡುವುದಾಗಿ ಶಿಂಧೆ ಹೇಳಿದ್ದಾರೆ. ಈ ಬೆಳವಣಿಗೆಗಳ ನಡುವಲ್ಲೇ ಹೆಚ್ಚುವರಿಯಾಗಿ 3 ಶಿವಸೇನೆ ಶಾಸಕರು ಬಂಡಾಯದ ಕೋಟೆ ಸೇರಿಕೊಂಡಿದ್ದಾರೆ.

ಈ ಬೆಳವಣಿಗೆಗಳ ನಡುವೆಯೇ ಉದ್ಧವ್‌ ಠಾಕ್ರೆಯೊಂದಿಗಿರುವ ಶಿವಸೇನೆಯ ಮುಖಂಡ ಸಂಜಯ್‌ ರಾವತ್‌ ಗುವಾಹಟಿಯಲ್ಲಿರುವ 20 ಶಾಸಕರು ತಮ್ಮ ಸಂಪರ್ಕದಲ್ಲಿದ್ದಾರೆ ಎಂದಿದ್ದಾರೆ ಅಲ್ಲದೇ ತಮ್ಮ ಕೊನೆಯ ಉಸಿರಿರುವವರೆಗೂ ಠಾಕ್ರೆ ಕುಟುಂಬ ಶಿವಸೇನೆಯ ಜೊತೆಯಲ್ಲಿರುವುದಾಗಿ ತಿಳಿಸಿದ್ದಾರೆ. ಈ ನಡುವೆ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಉಪ ಮುಖ್ಯಮಂತ್ರಿ ಅಜಿತ್ ಪವಾರ್, ರಾಜ್ಯ ಗೃಹ ಸಚಿವ ದಿಲೀಪ್ ವಾಲ್ಸೆ ಪಾಟೀಲ್, ಸಚಿವರಾದ ಜಯಂತ್ ಪಾಟೀಲ್ ಮತ್ತು ಜಿತೇಂದ್ರ ಅವ್ಹಾದ್ ಮತ್ತು ಪಕ್ಷದ ನಾಯಕ ಸುನಿಲ್ ತಾಟ್ಕರೆ ಸೇರಿದಂತೆ ಎನ್‌ಸಿಪಿ ಶಾಸಕರ ಸಭೆ ನಡೆಯುತ್ತಿದೆ.

ಅಸ್ಸಾಂ ಬಿಜೆಪಿಯ ಸಚಿವರೊಬ್ಬರು ರ್ಯಾಡಿಸನ್‌ ಬ್ಲೂ ಹೊಟೆಲ್‌ ಗೆ ಆಗಮಿಸಿ ಬಂಡಾಯಗಾರರೊಂದಿಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಅಸ್ಸಾಂ ಪೋಲೀಸ್‌ ಮುಖ್ಯಸ್ಥರು ರ್ಯಾಡಿಸನ್‌ ಬ್ಲೂ ಹೊಟೇಲ್‌ ಗೆ ಭೇಟಿ ನೀಡಿ ಭದ್ರತಾ ವ್ಯವಸ್ಥೆಯ ಪರಿಶೀಲನೆ ನಡೆಸಿದ್ದಾರೆ. ಇವೆಲ್ಲದರ ನಡುವೆ ಟಿಎಂಸಿ ಕಾರ್ಯಕರ್ತರು ಬಂಡಾಯ ಶಾಸಕರು ಬೀಡುಬಿಟ್ಟಿರುವ ಹೋಟೆಲ್‌ ಎದುರಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಅಸ್ಸಾಂ ಪೋಲೀಸರು ಪ್ರತಿಭಟನಾಕಾರರನ್ನು ಬಂಧಿಸಿದ್ದಾರೆ.

ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯವಾಗದಂತೆ ಬಂಡಾಯದ ಬೆಂಬಲಿಗರ ಸಂಖ್ಯೆಯನ್ನು ವೃದ್ಧಿಸಲು ಏಕನಾಥ್‌ ಶಿಂಧೆ ಪ್ರಯತ್ನಿಸುತ್ತಿದ್ದರೆ ಇನ್ನೊಂದು ಕಡೆ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಮುಖ್ಯಮಂತ್ರಿ ನಿವಾಸ ʼವರ್ಷಾʼದಿಂದ ತಮ್ಮ ವೈಯುಕ್ತಿಕ ನಿವಾಸ ʼಮಾತೋಶ್ರಿʼಗೆ ಪ್ರಯಾಣ ಬೆಳೆಸಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.

ಶಾಸಕಾಂಗ ಪಕ್ಷದ ಮುಖ್ಯಸ್ಥರಾಗಿ ಶಿಂಧೆ ಅವರ ಹಕ್ಕನ್ನು ಕಾನೂನಿನ ಪ್ರಕಾರ ನಿರ್ಧರಿಸುತ್ತೇವೆ ಎಂದು ಉಪಸಭಾಪತಿ ಹೇಳಿದ್ದಾರೆ. 41 ಶಾಸಕರು ಏಕನಾಥ್ ಶಿಂಧೆ ಅವರನ್ನು ಬೆಂಬಲಿಸುತ್ತಿದ್ದಾರೆ ಎಂದು ಸೇನಾ ಬಂಡಾಯ ಶಾಸಕರೊಬ್ಬರು ಹೇಳಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!