ಹೊಸದಿಗಂತ ಡಿಜಿಟಲ್ ಡೆಸ್ಕ್:
ಉದ್ಧವ್‌ಜೀ, ನಿಮಗೆ ಧೈರ್ಯವಿದ್ದರೆ, ವೀರ್ ಸಾವರ್ಕರ್, ಬಾಳಾ ಸಾಹೇಬ್ ಠಾಕ್ರೆ ಕುರಿತು ರಾಹುಲ್ ಗಾಂಧಿಯಿಂದ ಎರಡು ಒಳ್ಳೆಯ ಮಾತಗಳನ್ನು ಆಡಿಸಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸವಾಲೆಸಿದಿದ್ದಾರೆ.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಪ್ರಚಾರ ಕೈಗೊಂಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಅಘಾಡಿ ಮೈತ್ರಿಕೂಟವನ್ನು ಸುಳ್ಳು ಹೇಳುವವರ ಸೇನೆ ಎಂದು ಲೇವಡಿ ಮಾಡಿದರು. ರಾಹುಲ್ ಬಾಬಾ ನಿಮ್ಮ ಸ್ನೇಹಿತ ಉದ್ಧವ್ ಠಾಕ್ರೆ ಅವರ ತಂದೆ ಬಾಳಸಾಹೇಬ್ ಠಾಕ್ರೆ ಅವರನ್ನು 2 ನಿಮಿಷಗಳ ಕಾಲ ಹೊಗಳಿ . ಉದ್ಧವ್ ಠಾಕ್ರೆ ಅವರಿಗೆ ಧೈರ್ಯವಿದ್ದರೆ, ರಾಹುಲ್ ಗಾಂಧಿ ಅವರಿಂದ ವೀರ್ ಸಾವರ್ಕರ್ ಹಾಗೂ ಬಾಳಾಸಾಹೇಬ್ ಠಾಕ್ರೆ ಅವರ ಬಗ್ಗೆ 2 ಒಳ್ಳೆಯ ಮಾತುಗಳನ್ನಾಡಿಸಲಿ ಎಂದು ಸವಾಲು ಹಾಕಿದ್ದಾರೆ.
ಮಹಾರಾಷ್ಟ್ರದ ಮುಂದಿನ ಐದು ವರ್ಷಗಳ ಕಾಲ ಶಿವಾಜಿ ಮಹಾರಾಜರ ಪರಂಪರೆಯನ್ನು ಅನುಸರಿಸುತ್ತದೆಯೇ ಅಥವಾ ಔರಂಗಜೇಬ್ ಅವರ ಮಾರ್ಗವನ್ನು ಅನುಸರಿಸುತ್ತದೆಯೇ ಎಂಬುದನ್ನು ವಿಧಾನಸಭಾ ಚುನಾವಣೆ ನಿರ್ಧರಿಸುತ್ತದೆ ಎಂದು ಹೇಳಿದರು.
ನಮ್ಮ ಮಹಾಯುತಿ ಮೈತ್ರಿಕೂಟ ಯಾವುದೇ ಹಿಂಜರಿಕೆ ಇಲ್ಲದೇ, ಛತ್ರಪತಿ ಶಿವಾಜಿ ಮಹಾರಾಜ್ ಹಾಗೂ ವೀರ್ ಸಾವರ್ಕರ್ ಅವರ ಪರಂಪರೆಯನ್ನು ಯಾವುದೇ ಹಿಂಜರಿಕೆಯಿಲ್ಲದೆ ಆಯ್ಕೆ ಮಾಡಿದೆ, ಆದರೆ ಅಘಾಡಿ ಒಕ್ಕೂಟವು ಔರಂಗಜೇಬ್ ಅಭಿಮಾನಿಗಳ ಸಂಘವಾಗಿದೆ. ಮೋದಿ ಜಿ ರಾಮ ಮಂದಿರವನ್ನು ನಿರ್ಮಿಸಿದರು ಮತ್ತು ಔರಂಗಜೇಬನಿಂದ ಕೆಡವಲ್ಪಟ್ಟ ಕಾಶಿ ವಿಶ್ವನಾಥ ಕಾರಿಡಾರ್ ಅನ್ನು ಪುನರ್ನಿರ್ಮಾಣ ಮಾಡಿದರು ಎಂದು ಶಾ ಹೇಳಿದ್ದಾರೆ.
ರಾಹುಲ್ ಗಾಂಧಿ ಅವರನ್ನು ಪದೇ ಪದೇ ಅಪಘಾತಕ್ಕೀಡಾದ ವಿಮಾನಕ್ಕೆ ಹೋಲಿಸಿದ ಅಮಿತ್ ಶಾ, ಸೋನಿಯಾ ಗಾಂಧಿ ರಾಹುಲ್ ಬಾಬಾ ಹೆಸರಿನ ವಿಮಾನ 20 ಬಾರಿ ಇಳಿಸಲು ಪ್ರಯತ್ನಿಸಿದ್ದಾರೆ, ಮತ್ತು 20 ಬಾರಿ ಕ್ರ್ಯಾಶ್ ಆಗಿದ್ದಾರೆ. ಈಗ ಅದನ್ನು ಇಳಿಸಲು 21 ನೇ ಬಾರಿಗೆ ಮತ್ತೊಂದು ಪ್ರಯತ್ನ ನಡೆಯುತ್ತಿದೆ. ರಾಹುಲ್ ವಿಮಾನವು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಅಪಘಾತಕ್ಕೀಡಾಗುತ್ತದೆ ಎಂದು ಅವರು ವ್ಯಂಗ್ಯವಾಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರಕ್ಕೆ 370ನೇ ವಿಧಿಯಡಿ ವಿಶೇಷ ಸ್ಥಾನಮಾನವನ್ನು ಮರುಸ್ಥಾಪಿಸಲು ಕಾಂಗ್ರೆಸ್ ಬಯಸಿದೆ. ಆದ್ರೆ ಇಲ್ಲಿ ಸರಿಯಾಗಿ ಕೇಳಿಸಿಕೊಳ್ಳಿ, ನೀವು ಮಾತ್ರವಲ್ಲ, ನಿಮ್ಮ ನಾಲ್ಕನೇ ತಲೆಮಾರಿಗೂ ಕೂಡ ಅದನ್ನು ಮರುಸ್ಥಾಪಿಸಲು ಸಾಧ್ಯವಿಲ್ಲ’ ಎಂದು ತಿಳಿಸಿದರು.