ಭಾರತೀಯ ಸದ್ವಿಚಾರಗಳ ಮೇಲೆ ಉಡುಪಿ ಮಠಗಳ ಪ್ರಭಾವ ಮಹತ್ತರ : ಗೋವಾ ರಾಜ್ಯಪಾಲ ಶ್ರೀಧರನ್ ಪಿಳ್ಳೈ

ಹೊಸದಿಗಂತ ಡಿಜಿಟಲ್ ಡೆಸ್ಕ್

ಉಡುಪಿ: ನೆರೆಯ ಕೇರಳದವನಾಗಿದ್ದರೂ ಉಡುಪಿ ಭೇಟಿಯ ಕನಸು ಬಹಳ ತಡವಾಗಿ ನನಸಾಗುತ್ತಿದೆ. ಕಳೆದ ಹಲವು ಶತಮಾನಗಳಿಂದ ಭಾರತೀಯ ಸನಾತನ ಸದ್ವಿಚಾರಗಳ ಮೇಲೆ ಉಡುಪಿ ಮಠಗಳ ಪ್ರಭಾವ ಮಹತ್ತರವಾದುದು. ಇವತ್ತು ಶ್ರೀಕೃಷ್ಣನ ದರ್ಶನ ಸ್ವಾಮೀಜಿಯವರ ದರ್ಶನದಿಂದ ಅತ್ಯಂತ ಸಂತೋಷಗೊಂಡಿದ್ದೇನೆ ಎಂದು ಗೋವಾ ರಾಜ್ಯಪಾಲ ಶ್ರೀಧರನ್ ಪಿಳ್ಳೈ ಹೇಳಿದ್ದಾರೆ.

ಶುಕ್ರವಾರ ಉಡುಪಿಯ ಕೃಷ್ಣಮಠ ಹಾಗೂ ಪೇಜಾವರ ಮಠಕ್ಕೆ ಭೇಟಿ ನೀಡಿದ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.

ಭಾರತೀಯ ಸದ್ವಿಚಾರಗಳ ಮೇಲೆ ಉಡುಪಿ ಮಠಗಳ ಪ್ರಭಾವ ಮಹತ್ತರವಾದುದು. ಈ ಹಿಂದೆ 1978ರಲ್ಲಿ ಕೇರಳದಲ್ಲಿ ಸನಾತನ ಧರ್ಮರಕ್ಷಣೆಯ ಸಲುವಾಗಿ ಬೃಹತ್ ಸಂತ ಸಮಾವೇಶ ಮತ್ತು ಹಿಂದು ಸಂಗಮ ನಡೆದಾಗ ಶ್ರೀವಿಶ್ವೇಶತೀರ್ಥ ಶ್ರೀಪಾದರೇ ನೇತೃತ್ವ ವಹಿಸಿ ನೀಡಿದ ಮಾರ್ಗದರ್ಶನ ಅವಿಸ್ಮರಣೀಯ. ಆ ಧರ್ಮೋತ್ಸವದಲ್ಲಿ ಸಂಯೋಜಕ ಸಮಿತಿಯಲ್ಲಿ ನಾನೂ ಓರ್ವ ಸಂಚಾಲಕನಾಗಿದ್ದೆ ಅನ್ನೋದೇ ಒಂದು ಭಾಗ್ಯ. ವಿಶ್ವೇಶತೀರ್ಥರು ಒಂದು ಅದ್ಭುತ ಶಕ್ತಿಯಾಗಿದ್ದರು ಎಂದು ಪಿಳ್ಳೈ ಸ್ಮರಿಸಿಕೊಂಡರು.

ಶ್ರೀಕೃಷ್ಣಮಠದಲ್ಲಿ ಗೋವಾ ರಾಜ್ಯಪಾಲರನ್ನು ದಿವಾನ ವರದರಾಜ ಭಟ್ಟರು ಮತ್ತು ಪುರೋಹಿತರು ಗೌರವದಿಂದ ಬರಮಾಡಿಕೊಂಡರು. ಶ್ರೀಕೃಷ್ಣ ಮುಖ್ಯಪ್ರಾಣರು, ಸರ್ವಜ್ಞ ಪೀಠ, ಸುಬ್ರಹ್ಮಣ್ಯ ದೇವರು, ನವಗ್ರಹ ದೇವರ ದರ್ಶನ ಪಡೆದು ತೀರ್ಥ ಪ್ರಸಾದವನ್ನೂ ಸ್ವೀಕರಿಸಿದರು. ಗೋಶಾಲೆಗೆ ಭೇಟಿ ನೀಡಿ ಗೋವುಗಳನ್ನು ಕಂಡು ಅತೀವ ಸಂತಸ ಪಟ್ಟರು. ಬಳಿಕ ಪರ್ಯಾಯ ಶ್ರೀಕೃಷ್ಣಾಪುರ ಮಠಾಧೀಶ ಶ್ರೀವಿದ್ಯಾಸಾಗರತೀರ್ಥರನ್ನು ಭೇಟಿಯಾದರು. ಸ್ವಾಮೀಜಿಯವರು ಪಿಳ್ಳೈ ಅವರನ್ನು ಅಭಿನಂದಿಸಿ ಶಾಲು ಸ್ಮರಣಿಕೆ ಸಹಿತ ಶ್ರೀದೇವರ ಪ್ರಸಾದ, ಫಲ ಮಂತ್ರಾಕ್ಷತೆ ನೀಡಿ ಅನುಗ್ರಹಿಸಿದರು. ಧರ್ಮಪತ್ನಿ ರೀಟಾ, ಉಡುಪಿ ತಹಶೀಲ್ದಾರ್ ಉಪಸ್ಥಿತರಿದ್ದರು.

ಪೇಜಾವರ ಮಠಕ್ಕೆ ಭೇಟಿ:
ಬಳಿಕ ಪೇಜಾವರ ಮಠಕ್ಕೆ ಆಗಮಿಸಿದ ಪಿಳ್ಳೈಯವರನ್ನು ಶ್ರೀಗಳ ಆಪ್ತಕಾರ್ಯದರ್ಶಿಗಳಾದ ವಿಷ್ಣುಮೂರ್ತಿ ಆಚಾರ್ಯ , ಕೃಷ್ಣ ಭಟ್ ಹಾಗೂ ಶ್ರೀಗಳ ಶಾಸ್ತ್ರ ವಿದ್ಯಾರ್ಥಿಗಳು ಮಂತ್ರಘೋಷ ಸಹಿತ ಬರಮಾಡಿಕೊಂಡರು. ಶ್ರೀವಿಶ್ವೇಶತೀರ್ಥ ಶ್ರೀಪಾದರ ಭಾವಚಿತ್ರ ಹಾಗೂ ಪವಿತ್ರ ಪಾದುಕೆಗಳಿಗೆ ಪುಷ್ಪ ಅರ್ಪಿಸಿದ ಬಳಿಕ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರನ್ನು ಭೇಟಿಯಾಗಿ ಕೆಲಹೊತ್ತು ಸಮಾಲೋಚನೆ ನಡೆಸಿದರು. ಶ್ರೀಗಳು ರಾಜ್ಯಪಾಲರನ್ನು ಶಾಲು ಸ್ಮರಣಿಕೆ ದೇವರ ಗಂಧಪ್ರಸಾದ ಹಾಗೂ ಫಲ ಮಂತ್ರಾಕ್ಷತೆ ನೀಡಿ ದಂಪತಿಯನ್ನು ಆಶೀರ್ವದಿಸಿದರು. ವಾಸುದೇವ ಭಟ್ ಪೆರಂಪಳ್ಳಿ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!