ದಿಗಂತ ವರದಿ ಉಡುಪಿ:
ಸರಕಾರದ ಸೂಚನೆಯಂತೆ ಆಯೋಜಿಸಿರುವ ಸೆ. 17ರಂದು ಲಸಿಕಾ ಮಹಾಮೇಳ ಆಯೋಜಿಸಿದ್ದು, ಈ ಹಿನ್ನೆಲೆಯಲ್ಲಿ ಲಸಿಕೆ ಕುರಿತು ಪ್ರಶ್ನೆ, ಸಂಶಯಗಳನ್ನು ನಿವಾರಿಸಲು ಜಿಲ್ಲಾಡಳಿತ ನೇರ ಫೋನ್ ಇನ್ ಕಾರ್ಯಕ್ರಮ ನಡೆಯಿತು.
ಕೋವಿಡ್ ಲಸಿಕೆ ನೀಡಿಕೆಗೆ ಸಂಬಂಧಿಸಿ ಜರಗಿದ ಫೋನ್ ಇನ್ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ., ಜಿ.ಪಂ. ಸಿಇಒ ಡಾ. ನವೀನ್ ಭಟ್ ವೈ., ವಿಶ್ವ ಆರೋಗ್ಯ ಸಂಸ್ಥೆಯ ಸಲಹೆಗಾರ ಡಾ. ಅಶ್ವಿನಿಕುಮಾರ್ ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಿದರು.
84 ದಿನಗಳಾಗದೇ 2 ನೇ ಡೋಸ್ ಇಲ್ಲ
ಹಲವರು ತಮಗೆ ಈಗಾಗಲೇ ಮೊದಲ ಡೋಸ್ ಕೋವಿಡ್ ಲಸಿಕೆ ಪಡೆಯಲಾಗಿದೆ. ಎರಡನೇ ಡೋಸ್ ಅನ್ನು ಲಸಿಕಾ ಮಹಾ ಮೇಳದಲ್ಲಿ ಪಡೆಯಬಹುದೇ ಎಂಬ ಪ್ರಶ್ನೆಯನ್ನು ಕೇಳಿದರು. ಅದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ ಕೂರ್ಮಾರಾವ್, ಕೋವಿಶೀಲ್ಡ್ ಲಸಿಕೆ ಮೊದಲ ಡೋಸ್ ತೆಗೆದುಕೊಂಡು 84 ದಿನಗಳಾದರೆ ಮಾತ್ರ ಎರಡನೇ ಡೋಸ್ ಪಡೆಯಲು ಸಾಧ್ಯವಾಗುತ್ತದೆ. ಕೋವಿನ್ ಸಾಫ್ಟ್ವೇರ್ ನಲ್ಲಿ 84 ದಿನಗಳಾಗದೇ ತೆರೆದುಕೊಳ್ಳುವುದಿಲ್ಲ. ಆದ್ದರಿಂದ 84 ದಿನಗಳು ಭರ್ತಿಯಾದ ನಂತರವೇ ಲಸಿಕೆ ಪಡೆಯಿರಿ ಎಂದು ಸಲಹೆ ನೀಡಿದರು.
ಜ್ವರ ಇದ್ದರೆ ಲಸಿಕೆ ಪಡೆಯಬೇಡಿ
ಇನ್ನು ಕೆಲವರು ಜ್ವರ ಇದ್ದವರು ಲಸಿಕೆ ಪಡೆಯಬಹುದಾ ಎಂದು ಪ್ರಶ್ನಿಸಿದರು. ಅದಕ್ಕೆ ಅಶ್ವಿನಿಕುಮಾರ್ ಉತ್ತರಿಸಿ, ಜ್ವರ ಇದ್ದವರು ಲಸಿಕೆ ಪಡೆಯುವುದು ಬೇಡ. ಸಾಮಾನ್ಯ ವೈರಲ್ ಜ್ವರ ಕಡಿಮೆಯಾದ ನಂತರ ಲಸಿಕೆ ಪಡೆಯಬೇಕು. ಒಂದು ವೇಳೆ ಲಸಿಕೆ ಪಡೆದ ನಂತರ ಜ್ವರ ಬರುವುದು ವ್ಯಕ್ತಿಯ ದೇಹದಲ್ಲಿ ರೋಗ ನಿರೋಧಕ ಶಕ್ತಿ ಇಲ್ಲದಿದ್ದರೆ ಮಾತ್ರ. ರೋಗ ನಿರೋಧಕ ಶಕ್ತಿ ಉತ್ತಮವಾಗಿದ್ದರೆ ಜ್ವರ ಬರುವುದಿಲ್ಲ. ಜ್ವರ ಬಂದರೆ ಆತಂಕ ಪಡಬೇಕಿಲ್ಲ, ಅದು ಲಸಿಕೆ ಸಕರಾತ್ಮಕವಾಗಿ ಪರಿಣಾಮಕಾರಿಯಾಗಿದೆ ಎಂಬುದರ ಲಕ್ಷಣ ಎಂದು ತಿಳಿಸಿದರು.
ಉಡುಪಿ ಜಿಲ್ಲೆಯಲ್ಲಿ 80ಸಾವಿರ ಡೋಸ್ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಜಿಲ್ಲೆಯಾದ್ಯಂತ 300ಕ್ಕಿಂದ ಹೆಚ್ಚು ಕೇಂದ್ರಗಳಲ್ಲಿ ಲಸಿಕೆ ನೀಡಲಾಗುತ್ತದೆ, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿ ತಿಳಿಸಿದರು.
ಈ ವೇಳೆ ಡಿಎಚ್ಒ ಡಾ. ನಾಗಭೂಷಣ ಉಡುಪ, ಜಿಲ್ಲಾ ಸರ್ಜನ್ ಡಾ. ಮಧುಸೂದನ್ ನಾಯಕ್, ಡಾ. ಪ್ರಶಾಂತ್ ಭಟ್, ಡಾ. ಪ್ರೇಮಾನಂದ, ಡಾ. ನಾಗರತ್ನ ಮೊದಲಾದವರಿದ್ದರು.