Sunday, April 18, 2021

Latest Posts

ಉಡುಪಿ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ದನ ಕಳ್ಳತನ | 2021ರ ಮೂರೇ ತಿಂಗಳಲ್ಲಿ 8 ಪ್ರಕರಣಗಳು

-ರಕ್ಷಿತ್ ಬೆಳಪು
ಹೊಸದಿಗಂತ ವರದಿ, ಕುಂದಾಪುರ:

ಕರಾವಳಿ ಜಿಲ್ಲೆಯಲ್ಲಿ ದಿನ ಕಳೆದಂತೆ ದನ ಕಳ್ಳತನ ಮತ್ತು ಗೋ ಅಕ್ರಮ ಸಾಗಾಟ ಪ್ರಕರಣಗಳು ಹೆಚ್ಚಾಗುತ್ತಿದ್ದು, ಉಡುಪಿ ಜಿಲ್ಲೆಯ ಕುಂದಾಪುರ ಮತ್ತು ಬೈಂದೂರು ತಾಲೂಕಿನಲ್ಲಿ ಗೋ ಕಳ್ಳತನ ಪ್ರಕರಣಗಳು ಹೆಚ್ಚುತ್ತಿದೆ. 2021ರ ಮೂರೇ ತಿಂಗಳಲ್ಲಿ 8 ಪ್ರಕರಣ ದಾಖಲಾಗಿದೆ.

ಹೊಸಂಗಡಿ ಚೆಕ್ ಪೋಸ್ಟ್‌ನಲ್ಲಿ ಅತಿ ಹೆಚ್ಚು:
ಹೊಸಂಗಡಿ ಚೆಕ್ ಪೋಸ್ಟ್ ನಲ್ಲಿ ಅತಿ ಹೆಚ್ಚು ಗೋವುಗಳ ಅಕ್ರಮ ಸಾಗಾಟ ಪ್ರಕರಣಗಳು ವರದಿಯಾಗಿವೆ. ಈ ಚೆಕ್ ಪೋಸ್ಟ್ ಮೂಲಕ ಗೋವುಗಳನ್ನು ಕಂಟೈನರ್ ನಲ್ಲಿ ತುಂಬಿಸಿ ಉಡುಪಿ, ಮಂಗಳೂರು ಮಾರ್ಗವಾಗಿ ಕೇರಳಕ್ಕೆ ಸಾಗಿಸುತ್ತಾರೆ. ದೂರದ ಬೆಳಗಾಂ, ಶಿವಮೊಗ್ಗದಿಂದ ದನಗಳನ್ನು ಅಕ್ರಮವಾಗಿ ಹುಲಿಕಲ್ ಘಾಟಿಯ ಮೂಲಕ ಕೇರಳಕ್ಕೆ ಸಾಗಿಸುವ ವ್ಯವಸ್ಥಿತ ತಂಡ ಕಾರ್ಯಾಚರಿಸುತ್ತಿದೆ ಎನ್ನುತ್ತಾರೆ ಸ್ಥಳೀಯರು.

ಪ್ರಕರಣ ಕಡಿಮೆಯಾಗಿಲ್ಲ!
ಗೋ ಅಕ್ರಮ ಸಾಗಾಟಕ್ಕೆ ಕಾನೂನು ಜಾರಿಗೊಳಿಸಿದ್ದರೂ ಗೋ ಕಳ್ಳತನ ಪ್ರಕರಣಕ್ಕೆ ಬ್ರೇಕ್ ಬಿದ್ದಿಲ್ಲ. ಬಡವರ ಮನೆಯ ದನದ ಕೊಟ್ಟಿಗೆಗೆ ರಾಜಾರೋಷವಾಗಿ ನುಗ್ಗಿ ಮುದ್ದಾಗಿ ಸಾಕಿದ ಗೋವುಗಳನ್ನು ಕದ್ದೊಯ್ಯುತ್ತಿರುವ ಹೇಯಕೃತ್ಯಗಳು ವರದಿಯಾಗುತ್ತಲೇ ಇದೆ. ಇಂತಹ ಕೃತ್ಯಗಳನ್ನು ಕಠಿಣಕ್ರಮದೊಂದಿಗೆ ನಿಗ್ರಹಿಸಲು ನಾಗರಿಕರು ಆಗ್ರಹಿಸಿದ್ದಾರೆ.

ಗ್ರಾಮೀಣ ಭಾಗದಲ್ಲಿ ದಲ್ಲಾಳಿಗಳ ಕಾರ‍್ಯವೈಖರಿ ಸದ್ದಿಲ್ಲದೆಯೇ ಸಕ್ರಿಯ
ಕುಂದಾಪುರ, ಬೈಂದೂರು, ಕಾರ್ಕಳ ಗ್ರಾಮಾಂತರ ವ್ಯಾಪ್ತಿಯಲ್ಲಿ ದಲ್ಲಾಳಿಗಳು ಸಕ್ರಿಯರಾಗಿದ್ದಾರೆ. ಬಡವರ ಮನೆಯಲ್ಲಿರುವ ದನಗಳಿಗೆ ಒಂದು ನಿಗದಿತ ಮೊತ್ತ ಕುದುರಿಸಿ ಅವರ ಮುಗ್ಧತೆಯನ್ನು ದುರುಪಯೋಗ ಪಡಿಸಿಕೊಂಡು ದನವನ್ನು ಮಾರುವಂತೆ ಪ್ರೇರೇಪಿಸುತ್ತಾರೆ. ನಂತರ ಅವರಿಗೆ ಮೊದಲೇ ಹಣವನ್ನು ಕೊಟ್ಟು ದನವನ್ನು ತೆಗೆದುಕೊಂಡು ಹೋಗುತ್ತಾರೆ. ಆದರೆ ಯಾವ ದಿನ ತೆಗೆದುಕೊಂಡು ಹೋಗುತ್ತೇವೆ ಎಂದು ತಿಳಿಸಿರುವುದಿಲ್ಲ. ಹಣ ನೀಡಿದ ವಾರದೊಳಗೆ ಅವರಿಗೆ ಅನುಕೂಲವಾದ ಒಂದು ರಾತ್ರಿ ಕೊಟ್ಟಿಗೆಗೆ ನುಗ್ಗಿ ದನವನ್ನು ತೆಗೆದುಕೊಂಡು ಹೋಗುತ್ತಾರೆ.

ಬೆಳಕಿಗೆ ಬಂತು ಗೋ ಸಾಗಾಟ ಪ್ರಕರಣ
ಅಕ್ರಮ ಕಳ್ಳತನ ಪ್ರಕರಣಗಳಿಗಿಂತ ಅಕ್ರಮ ಗೋ ಸಾಗಾಟ ಪ್ರಕರಣಗಳು ಜಾಸ್ತಿಯಾಗುತ್ತಿದೆ. ಕಳೆದ ವರ್ಷ ಕೊರೋನಾ ಲಾಕ್‌ಡೌನ್ ನಡುವೆಯೂ 59 ಗೋ ಅಕ್ರಮ ಸಾಗಾಟ ಪ್ರಕರಣಗಳು ಬೆಳಕಿಗೆ ಬಂದಿದೆ. ಈ ವರ್ಷ ಪ್ರಾರಂಭದಲ್ಲೇ 4 ಅಕ್ರಮ ಸಾಗಾಟ ಮತ್ತು 4 ಕಳ್ಳತನ ಪ್ರಕರಣಗಳು ದಾಖಲಾಗಿರುವುದೇ ಕಾನೂನು ಬಾಹಿರ ಕೃತ್ಯಗಳ ವಿರುದ್ಧ ಖಡಕ್ ಕ್ರಮದ ಅಗತ್ಯ ಸಾರುತ್ತಿದೆ.

ಇಲ್ಲವಾದರೆ ಕಾನೂನು ಕೈಗೆತ್ತಿಕೊಳ್ಳುವುದು
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಗೋಕಳ್ಳರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಅವಳಿ ಜಿಲ್ಲೆಯ ಪೋಲಿಸಿಂಗ್ ವ್ಯವಸ್ಥೆಗೆ ಈ ಗೋಕಳ್ಳರು ಸವಾಲಾಗಿದ್ದಾರೆ. ಐಷಾರಾಮಿ ಕಾರುಗಳಲ್ಲಿ, ಪ್ಯಾಸೆಂಜರ್ ಆಟೋಗಳಲ್ಲಿ ದನಸಾಗಾಟ ಮಾಡಿ ಸಿಕ್ಕಿಬಿದ್ದ ಅನೇಕ ಪ್ರಕರಣಗಳಿವೆ. ಅವೆಲ್ಲಕ್ಕಿಂತಲೂ ಕೊಟ್ಟಿಗೆಗೆ ನುಗ್ಗಿ ದನಕಳ್ಳತನ ಮಾಡುವ ಗೋಕಳ್ಳರ ವಿರುದ್ಧ ಕಾನೂನಿನ ಚೌಕಟ್ಟಿನಲ್ಲಿ ಕಠಿಣ ಕ್ರಮಗಳು ಜಾರಿಯಾಗಬೇಕು. ಈಗಾಗಲೇ ಜಾರಿಯಾದ ಗೋಹತ್ಯೆ ನಿಷೇಧ ಕಾನೂನು ಅನುಷ್ಠಾನಗೊಳ್ಳಬೇಕು. ಇಲ್ಲವಾದಲ್ಲಿ ಹಿಂದು ಕಾರ್ಯಕರ್ತರು ನಮ್ಮ ಶ್ರದ್ಧಾಬಿಂದುವಾದ ಗೋವಿನ ರಕ್ಷಣೆಗಾಗಿ ಕಾನೂನನ್ನು ಕೈಗೆತ್ತಿಕೊಳ್ಳಬೇಕಾದೀತು ಎಂದು ಉಡುಪಿ ಹಿಂಜಾವೇ ಜಿಲ್ಲಾ ಕಾರ್ಯದರ್ಶಿ ಅವಿನಾಶ್ ಶೆಟ್ಟಿ ಬೆಳ್ವೆ ಎಚ್ಚರಿಸಿದ್ದಾರೆ.

ಕಾರ್ಯರೂಪಕ್ಕೆ ಬರಲಿ ಕಾನೂನು!
ಗೋ ಹತ್ಯೆ ನಿಷೇಧ ಕಾನೂನು ಅಂಗೀಕಾರವಾದರೆ ಸಾಲದು. ಅದನ್ನು ಸರಿಯಾದ ರೀತಿಯಲ್ಲಿ ಕಾರ್ಯರೂಪಕ್ಕೆ ಬರಬೇಕು. ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡಬೇಕು. ಸರಕಾರದ ಕೆಲವೊಂದು ಆದೇಶದಲ್ಲಿ ಸ್ಪಷ್ಟತೆ ಇಲ್ಲದಿರುವುದು ಕೆಲವೊಮ್ಮೆ ಅಧಿಕಾರಿಗಳನ್ನು ಗೊಂದಲಕ್ಕೀಡು ಮಾಡುತ್ತದೆ ಎನ್ನುತಾರೆ ಹೈಕೋರ್ಟ್ ವಕೀಲರಾದ ಶಶಾಂಕ್ ಶಿವತ್ತಾಯ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss