ಆತ್ಮನಿರ್ಭರ ಯೋಜನೆಯಡಿ ನಿಟ್ಟೂರ ಯುವ ರೈತನ ಸಾಧನೆ ಮಾದರಿ: ಕೃಷಿ ಸಚಿವ ಬಿ.ಸಿ.ಪಾಟೀಲ

ಹೊಸ ದಿಗಂತ ವರದಿ, ಹಾವೇರಿ:

ಆತ್ಮ ನಿರ್ಭರ ಯೋಜನೆ ಪ್ರಧಾನ ಮಂತ್ರಿಗಳ ಕನಸಾಗಿದೆ. ಎಂ.ಎಸ್.ಎಂ.ಇ. ಯೋಜನೆಯಡಿ ಪ್ರತಿ ರೈತರು ತಾವು ಬೆಳೆದ ಬೆಳೆ ಸಂಸ್ಕರಿಸಿ, ಪ್ಯಾಕೇಜ್ ಹಾಗೂ ಬ್ರ್ಯಾಂಡಿಂಗ್ ಮಾಡಿ ಮಾರಾಟ ಮಾಡಿದರೆ ರೈತ ತನ್ನ ಆದಾಯವನ್ನು ದುಪ್ಪಟ್ಟು ಮಾಡಲು ಸಾಧ್ಯ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು.
ಜಿಲ್ಲೆಯ ಹಿರೇಕೆರೂರು ತಾಲೂಕಿನ ನಿಟ್ಟೂರು ಗ್ರಾಮದಲ್ಲಿ ಕೇಂದ್ರ ಸರ್ಕಾರದ ಆತ್ಮನಿರ್ಭರ ಯೋಜನೆಯಡಿ ಸಿದ್ಧಗೊಂಡಿರುವ ಆಹಾರ ಸಂಸ್ಕರಣಾ ಘಟಕ(ಶುದ್ಧ ಶೇಂಗಾ ಎಣ್ಣೆ ತಯಾರಿಕಾ ಘಟಕ)ವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.
ಎಂ.ಎಸ್.ಎಂ.ಇ.ಗೆ ಕೇಂದ್ರ ಕಳೆದ ಬಜೆಟ್‌ನಲ್ಲಿ 50 ಸಾವಿರ ಕೋಟಿ ಅನುದಾನ ಮೀಸಲಿಟ್ಟಿತ್ತು. ಆದರೆ ಈ ವರ್ಷ 5 ಲಕ್ಷ ಕೋಟಿ ಅನುದಾನ ಮೀಸಲಿಟ್ಟಿದೆ. ಕೇಂದ್ರದಿಂದ ಶೇ.60 ಹಾಗೂ ರಾಜ್ಯದಿಂದ ಶೇ.50 ಸೇರಿ ಶೇ.110 ರಷ್ಟು ಈ ಉದ್ಯಮಕ್ಕೆ ನೀಡಲಾಗುತ್ತಿದೆ ಹಾಗೂ ರೂ.15 ಲಕ್ಷದವರೆಗೆ ಕೃಷಿ ಇಲಾಖೆಯಿಂದ ಸಬ್ಸಿಡಿ ನೀಡಲಾಗುತ್ತಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ನಿಟ್ಟೂರ ಗ್ರಾಮದಲ್ಲಿ ಸಂಜೀವ ಹಕ್ಕಳ್ಳಿ ಹಾಗೂ ರಮೇಶ ಹಕ್ಕಳಿ ಸಹೋದರರು ಈ ಕಿರು ಉದ್ಯಮ ಸ್ಥಾಪಿಸಿದ್ದು ಸಂತಸದ ಸಂಗತಿ. ಉದ್ಯಮದಲ್ಲಿ ಯಶಸ್ಸು ಸಾಧಿಸಲಿ ಎಂದು ಶುಭ ಹಾರೈಸಿದರು.
 ರೂ.39.45 ಲಕ್ಷ ಕೋಟಿ ಬಜೆಟ್
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸಿತಾರಮನ್ ಅವರು ೩೯.೪೫ ಲಕ್ಷ ಕೋಟಿ ರೂ ಮೊತ್ತದ ಅಭಿವೃದ್ಧಿಗೆ ಪೂರಕ ಬಜೆಟ್ ಮಂಡಿಸಿದ್ದು, ಮುಂದಿನ ೨೫ ವರ್ಷಗಳ ಚಿಂತನೆ ಇಟ್ಟುಕೊಂಡು ಬಜೆಟ್ ಮಂಡಿಸಿದ್ದು ಸ್ವಾಗತಾರ್ಹ ಎಂದರು.
ದೇಶದ ಅಭಿವೃದ್ಧಿಗೆ ತಂತ್ರಜ್ಞಾನ ಬಳಕೆ, 2023ರನ್ನು ಅಂತರಾಷ್ಟ್ರೀಯ ಸಿರಿಧಾನ್ಯ ವರ್ಷ ಘೋಷಣೆ, ಕೃಷಿ ಕೇಂದ್ರದಲ್ಲಿ ಡಿಜಿಟಲ್ ವಿಶ್ವವಿದ್ಯಾಲಯ ಆರಂಭ, ಕಿಸಾನ್ ಡ್ರೋನ್ ಟೆಕ್ನಾಲಜಿಗೆ ಅಳವಡಿಕೆ ಹೆಚ್ಚು ಒತ್ತು ನೀಡಲಾಗಿದೆ. ಉತ್ತರ ಮತ್ತು ದಕ್ಷಿಣ ನದಿಗಳ ಜೋಡಣೆ ಮೂಲಕ ಭಾರತ ದೇಶದ ಪ್ರದೇಶವನ್ನು ನೀರಾವರಿಗೆ ಒಳಪಡಿಸುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!