ದೇಶದಲ್ಲಿ ನಿರುದ್ಯೋಗ ದೊಡ್ಡ ಸಮಸ್ಯೆ: ಕೇಂದ್ರ ಸರಕಾರದ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಜ್ಯ ಚುನಾವಣಾ ಅಖಾಡದಲ್ಲಿ ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಮತಬೇಟೆ ಶುರುಮಾಡಿದ್ದಾರೆ. ಇಂದು ಗದಗದಲ್ಲಿ ಯುವ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದ ಅವರು, ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಕೇಂದ್ರ ಸರ್ಕಾರದ ಜಿಎಸ್‌ಟಿ ಹಾಗೂ ನೋಟು ಅಮಾನ್ಯೀಕರಣದಿಂದ ಸಣ್ಣ ವ್ಯಾಪಾರಸ್ಥರು ಅಂಗಡಿಗಳನ್ನು ಮುಚ್ಚುವಂತಾಯಿತು. ಗೌತಮ್‌ ಆದಾನಿಗೆ ಯಾವುದೇ ಬ್ಯಾಂಕ್‌ನಲ್ಲಿ ಲೋನ್ ಸಿಗುತ್ತದೆ. ಆದರೆ, ಸಾಮಾನ್ಯರಿಗೆ ಎಲ್ಲಿ ಹೋದರೂ ಲೋನ್ ಸಿಗಲ್ಲ. ಆದ್ರೆ ನಾವು ಸಣ್ಣ ವ್ಯಾಪಾರಸ್ಥರಿಗೆ ಸಹಾಯ ಮಾಡುತ್ತೇವೆ. ಇದು ಬಿಜೆಪಿ ಹಾಗೂ ಕಾಂಗ್ರೆಸ್‌ (Karnataka Election) ನಡುವೆ ಇರುವ ವ್ಯತ್ಯಾಸ ಎಂದು ಹೇಳಿದರು.

ದೇಶದಲ್ಲಿ ನಿರುದ್ಯೋಗ ದೊಡ್ಡ ಸಮಸ್ಯೆಯಾಗಿದೆ. ಇಂದು ಪದವಿ, ಎಂಜಿನಿಯರ್, ಎಂಬಿಬಿಎಸ್ ಹೀಗೆ ಪದವಿ ಪಡೆದ ಯುವಕರು ಕೂಡ ಡೆಲಿವರಿ ಬಾಯ್‌ಗಳಾಗಿ ಕೆಲಸ ಮಾಡುತ್ತಿದ್ದಾರೆ, ಕೂಲಿ ಕೆಲಸಕ್ಕೆ ಹೋಗುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇನೆ ಎಂದಿದ್ದರು. ಆದರೆ, ಯಾವುದೇ ಪ್ರಯೋಜನವಾಗಿಲ್ಲ ಎಂದು ಹೇಳಿದರು.

ಭಾರತ್ ಜೋಡೊ ಪಾದಯಾತ್ರೆಯಲ್ಲಿ ಸಾವಿರಾರು ಯುವಕರೊಂದಿಗೆ ನಾನು ಮಾತನಾಡಿದ್ದೇನೆ. ಅದರಲ್ಲಿ ಬಹುತೇಕರು ನಿರುದ್ಯೋಗದ ಬಗ್ಗೆ ಮಾತನಾಡಿದ್ದರು. ಅಗತ್ಯ ವಸ್ತುಗಳ ಬೆಲೆ ಕಾಂಗ್ರೆಸ್‌ ಇದ್ದಾಗ ಮತ್ತು ಬಿಜೆಪಿ ಸರ್ಕಾರದಲ್ಲಿ ಎಷ್ಟಿದೆ ಎಂಬುದನ್ನು ಗಮನಿಸಬೇಕು. ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಜಾಸ್ತಿಯಾಗಿದೆ. ಈ ಎಲ್ಲ ದುಡ್ಡು ಎಲ್ಲಿ ಹೋಗುತ್ತಿದೆ. ಕೊನೆಗೆ ನಿಮ್ಮ ಜೇಬಿಗಾದರೂ ಬರಬೇಕಲ್ಲವೇ ಎಂದು ಹೇಳಿದರು.

ವಿಶ್ವದ ಅತ್ಯಂತ ಶ್ರೀಮಂತರಲ್ಲಿ ಅದಾನಿಯವರು ಒಬ್ಬರಾಗಿದ್ದಾರೆ. ಸಂಸತ್‌ನಲ್ಲಿ ಪ್ರಧಾನಿ ಹಾಗೂ ಅದಾನಿಯವರ ಸಂಬಂಧ ಏನು ಅಂತ ಕೇಳಿದೆ. ಶ್ರೀಲಂಕಾಗೆ ಹೋದರೂ ಅದಾನಿಗೆ ಹೆಲ್ಪ್ ಮಾಡಬೇಕು ಎಂದು ಹೇಳುತ್ತಾರೆ. ಆಸ್ಟ್ರೇಲಿಯಾದಲ್ಲಿ ಲೋನ್ ಸಿಗುತ್ತದೆ. ಬಾಂಗ್ಲಾದೇಶಕ್ಕೆ ಹೋದರೂ ಅಲ್ಲಿ ವಿವಿಧ ಗುತ್ತಿಗೆ ಕೊಡುತ್ತಾರೆ. ಹೀಗೆ ಹಲವಾರು ದೇಶಗಳಲ್ಲಿ ಅದಾನಿಗೆ ನೆರವು ಸಿಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರಿದರು.

ನನ್ನ ಲೋಕಸಭಾ ಸದಸ್ಯತ್ವವನ್ನು ಅನರ್ಹ ಮಾಡಿದರು. ರಾಹುಲ್ ಗಾಂಧಿ ಮಾತನಾಡಲ್ಲ ಎಂದು ಇತ್ತೀಚೆಗೆ ಮನೆಯನ್ನು ಕಸಿದುಕೊಂಡರು ಎಂದು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.

ನೀವು ಧರಿಸುವ ಶರ್ಟ್, ಚಪ್ಪಲಿ ಹಲವಾರು ವಸ್ತುಗಳ ಮೇಲೆ ಮೇಡ್ ಇನ್ ಚೀನಾ ಎಂದು ಇರುತ್ತದೆ. ನನ್ನ ಪ್ರಶ್ನೆ ಏನೆಂದರೆ ಮೇಡ್ ಇನ್ ಚೀನಾ ಇದೆ, ಆದರೆ ಮೇಡ್ ಇನ್ ಇಂಡಿಯಾ ಯಾಕೆ ಇಲ್ಲ. ಚೀನಾದ ವಸ್ತುಗಳನ್ನು ತಂದು ನಮ್ಮ ದೇಶದಲ್ಲಿ ಮಾರಾಟ ಮಾಡುತ್ತಿದ್ದಾರೆ. ಆದರೆ, ನಮ್ಮ ದೇಶದಲ್ಲಿ ಬಳಕೆಯಾಗುವ ವಸ್ತುಗಳು ಮುಂದೊಂದು ದಿನ ಮೇಡ್ ಇನ್ ಚೀನಾ ಬದಲು ಮೇಡ್ ಇನ್ ಇಂಡಿಯಾ ಆಗಬೇಕು ಎಂದು ತಾವು ಚಿಂತನೆ ಮಾಡುತ್ತಿರುವುದಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯುವಕರಿಗೆ ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!