ಡಿ.31ಕ್ಕೆ ಬಿಜೆಪಿ ಬೂತ್‌ ವಿಜಯ ಅಭಿಯಾನ: ಚಾಲನೆ ನೀಡಲಿದ್ದಾರೆ ಕೇಂದ್ರ ಗೃಹಸಚಿವ ಅಮಿತ್‌ ಶಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಮುಂಬರುವ ವಿಧಾನಸಭಾ ಚುನಾವಣೆಯ ಕೆಲಸಕ್ಕೆ ಚುರುಕು ನೀಡುವ ಉದ್ದೇಶದಿಂದ ಜನವರಿ 2ರಿಂದ 15ರವರೆಗೆ ಬಿಜೆಪಿ ‘ಬೂತ್ ವಿಜಯ ಅಭಿಯಾನವನ್ನು ಹಮ್ಮಿಕೊಂಡಿದೆ. ಈ ಅಭಿಯಾನಕ್ಕೆ ನಾಳೆ (ಡಿ.31) ಕೇಂದ್ರ ಗೃಹ ಮತ್ತು ಸಹಕಾರಿ ಸಚಿವರಾದ ಅಮಿತ್ ಶಾ ಚಾಲನೆ ನೀಡಲಿದ್ದಾರೆ ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಮತ್ತು ಬೆಂಗಳೂರು ಉತ್ತರ ಸಂಸದ ಡಿ.ವಿ. ಸದಾನಂದಗೌಡ ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪಕ್ಷವು ಚುನಾವಣೆ ಕೆಲಸಕ್ಕೆ ವೇಗ ನೀಡಲು ಈಗಾಗಲೇ ಜನಸಂಕಲ್ಪ ಸಭೆಗಳನ್ನು ನಡೆಸಿದೆ. ಜನವರಿ 2ರಿಂದ 15ರವರೆಗೆ ಬಿಜೆಪಿ ‘ಬೂತ್ ವಿಜಯ ಅಭಿಯಾನ’ವನ್ನು ಹಮ್ಮಿಕೊಂಡಿದೆ. ಶೇ 100ರಷ್ಟು ಮತದಾನ ಮಾಡುವಂತೆ ಪ್ರೇರೇಪಿಸುವ ಕಾರ್ಯ ನಡೆಯಲಿದೆ. 20 ಲಕ್ಷ ಕಾರ್ಯಕರ್ತರು ಈ ಅಭಿಯಾನದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಅಮಿತ್‌ ಶಾ ಅವರ ಪ್ರವಾಸದ ಕುರಿತು ವಿವರಿಸಿದ ಅವರು ರಾಜ್ಯದಲ್ಲಿ ಸುಶಾಸನ ಮತ್ತು ಅಭಿವೃದ್ಧಿ ಕಾರ್ಯಗಳನ್ನು ನೀಡುವ ಬಿಜೆಪಿ ಸರಕಾರ ಮುಂದುವರೆಯಬೇಕು ಎಂಬ ದೃಷ್ಟಿಯಿಂದ ಕೇಂದ್ರ ಗೃಹ ಮತ್ತು ಸಹಕಾರಿ ಸಚಿವರಾದ ಅಮಿತ್ ಶಾ ಅವರ ಪ್ರವಾಸ ಅತ್ಯಂತ ಮಹತ್ವದ್ದಾಗಿದೆ. ಬಿಜೆಪಿ ರಿಪೋರ್ಟ್ ಕಾರ್ಡ್ ಮುಂದಿಟ್ಟು ಮತ ಕೇಳಲಿದೆ.ಮಂಡ್ಯದಲ್ಲಿ ಅಮಿತ್ ಶಾ ಅವರು ಈ ಕೆಲಸವನ್ನು ಮಾಡಲಿದ್ದಾರೆ. 1 ಲಕ್ಷ ಜನರು ಸೇರುವ ಸಮಾವೇಶ ಇದಾಗಲಿದೆ. ಇದಲ್ಲದೇ ಪಕ್ಷದ ನೂತನ ಕ್ರಿಯಾಯೋಜನೆಗಳ ಕುರಿತು ಅಮಿತ್ ಶಾ ಅವರು ಮಾರ್ಗದರ್ಶನ ನೀಡಲಿದ್ದಾರೆ. ಕಾರ್ಯಕರ್ತರನ್ನು ಚುರುಕುಗೊಳಿಸಿ ಅವರಿಗೆ ಮಾರ್ಗದರ್ಶನ ನೀಡಲಿದ್ದಾರೆ ಎಂದು ತಿಳಿಸಿದರು.

ಚುನಾವಣೆಗೆ ನಾವು ಸದಾ ಸನ್ನದ್ಧ
ಚುನಾವಣೆಗೆ ನಾವು ಸದಾ ಸನ್ನದ್ಧರಾಗಿ ಇರುತ್ತೇವೆ. ನಮ್ಮಲ್ಲಿ ಎಲ್ಲ ಲೈಟಿಂಗ್ ವ್ಯವಸ್ಥೆ ರೆಡಿ ಇದೆ. ಮೈನ್ ಸ್ವಿಚ್ ಆನ್ ಮಾಡಿದರೆ ಆಯ್ತು. ಎಲ್ಲ ಕಡೆ ಲೈಟ್‍ಗಳು ಆನ್ ಆಗುತ್ತವೆ. ಅಮಿತ್ ಶಾ ಅವರು ಕೊಡುವ ಮಾರ್ಗದರ್ಶನ ನಮಗೆ ಸಿಗಲಿದೆ ನಾವು ಅತ್ಯಂತ ಸಂಘಟಿತರಾಗಿದ್ದೇವೆ. ಪಕ್ಷವು ತಂತ್ರಜ್ಞಾನವನ್ನೂ ಅಳವಡಿಸಿಕೊಂಡಿದೆ ಎಂದು ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ತಿಳಿಸಿದರು.

ಮೀಸಲಾತಿಗೆ ನಾವು ಆದ್ಯತೆ ಕೊಟ್ಟಿದ್ದೇವೆ. ಆರ್ಥಿಕವಾಗಿ ಹಿಂದುಳಿದವರಿಗೂ ನ್ಯಾಯ ನೀಡಲು ಮುಂದಾಗಿದ್ದೇವೆ ಎಂದ ಅವರು, ಹಿಂದೆ ಹಳೆ ಮೈಸೂರು ಭಾಗದಲ್ಲಿ ನಮಗೆ ಕಡಿಮೆ ಬೆಂಬಲ ಇತ್ತು. ಈಗ ‘ಮಿಷನ್ 150’ ಅಡಿಯಲ್ಲಿ ಹಳೆ ಮೈಸೂರು ಭಾಗದಲ್ಲಿ ಬಲವರ್ಧನೆ ಆಗಿದೆ. ನಮ್ಮ ವಿಚಾರ- ಗುರಿಗೆ ವೇಗ ಸಿಕ್ಕಿದೆ ಎಂದರು.
ಅಧಿಕಾರಕ್ಕೆ ಬಂದಾಗ ಎಲ್ಲರನ್ನು ಸಮಾನವಾಗಿ ನಾವು ನೋಡಿದ್ದೇವೆ. ಬೆಂಗಳೂರು- ಮೈಸೂರು ಹೈವೇ, ಹೈಸ್ಪೀಡ್ ರೈಲು, ಮೆಟ್ರೋ ವಿಸ್ತರಣೆ ವಿಚಾರದಲ್ಲಿ ನಾವು ಉತ್ತಮ ಸಾಧನೆ ಮಾಡಿದ್ದೇವೆ ಎಂದು ತಿಳಿಸಿದರು.
ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಬಿ. ನಾರಾಯಣಗೌಡ, ದಕ್ಷಿಣ ಜಿಲ್ಲಾಧ್ಯಕ್ಷ ಎನ್.ಆರ್. ರಮೇಶ್, ಕೇಂದ್ರ ಜಿಲ್ಲಾಧ್ಯಕ್ಷ ಜಿ. ಮಂಜುನಾಥ್ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!