ಕಾರ್ಯಕರ್ತರ ಶ್ರಮವಿದ್ದರೆ ಮತ್ತೆ ಡಬಲ್ ಎಂಜಿನ್ ಸರಕಾರ ಅಧಿಕಾರಕ್ಕೆ: ಕೇಂದ್ರ ಸಚಿವ ಅಶ್ವಿನಿ ವೈಷ್ಣವ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬೆಂಗಳೂರು: ರಾಜ್ಯ, ದೇಶದ ಅಭಿವೃದ್ಧಿಗಾಗಿ ಡಬಲ್ ಎಂಜಿನ್ ಸರಕಾರ ಬೇಕು. ಅದಕ್ಕಾಗಿ ಕಾರ್ಯಕರ್ತರು ಶ್ರಮ ವಹಿಸಿ ದುಡಿಯಬೇಕು ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ತಿಳಿಸಿದರು.
ನಗರದ ಅರಮನೆ ಮೈದಾನದಗಾಯತ್ರಿ ವಿಹಾರದಲ್ಲಿ ಇಂದು ನಡೆದ ರಾಜ್ಯ ಬಿಜೆಪಿ ಪ್ರಕೋಷ್ಠಗಳ ಸಮಾವೇಶ ‘ಶಕ್ತಿ ಸಂಗಮ’ವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶಾದ್ಯಂತ ವಿಮಾನನಿಲ್ದಾಣಗಳ ಮಾದರಿಯಲ್ಲಿ ರೈಲ್ವೆ ವ್ಯವಸ್ಥೆಯನ್ನು ವಿಶ್ವ ಗುಣಮಟ್ಟದ ಆಧುನೀಕರಣಗೊಳಿಸಲಾಗುತ್ತಿದೆ. ಈ ಮೂಲಕ ನಿಲ್ದಾಣಗಳನ್ನು ಪ್ರಯಾಣಿಕ ಸ್ನೇಹಿಯಾಗಿ ಮಾಡಲಾಗಿದೆ ಎಂದು ಹೇಳಿದರು.
ರಾಜ್ಯದ 48 ರೈಲ್ವೆ ಸ್ಟೇಶನ್‍ಗಳ ಆಧುನೀಕರಣ ನಡೆಯುತ್ತಿದೆ. ಬೆಂಗಳೂರಿನ ಯಶವಂತಪುರ, ಬೆಂಗಳೂರು ಸಿಟಿ, ಮಂಗಳೂರು ಸೆಂಟ್ರಲ್, ಮೈಸೂರು, ಹುಬ್ಬಳ್ಳಿ, ಅರಸೀಕರೆ, ರಾಣೆಬೆನ್ನೂರು, ಹರಿಹರ, ಸಕಲೇಶಪುರ, ತರೀಕೆರೆ, ತಾಳಗುಪ್ಪ, ಚಾಮರಾಜನಗರ, ಕಿತ್ತೂರು, ಸುಬ್ರಹ್ಮಣ್ಯ ರೋಡ್, ವೈಟ್‍ಫೀಲ್ಡ್, ಕೆಂಗೇರಿ, ಮಲ್ಲೇಶ್ವರ, ಚನ್ನಸಂದ್ರ, ತುಮಕೂರು, ಮಲ್ಲೂರು, ರಾಮನಗರ, ದೊಡ್ಡಬಳ್ಳಾಪುರ, ಚನ್ನಪಟ್ಟಣ, ಗದಗ, ಕೊಪ್ಪಳ, ಗಿಣಿಗೇರ, ಮುನಿರಾಬಾದ್, ಬಳ್ಳಾರಿಯ 2, ಹಗರಿಬೊಮ್ಮನಹಳ್ಳಿ, ಕೊತ್ತೂರು, ಕುಡಚಿ, ಘಟಪ್ರಭಾ, ಲೋಂಡಾ, ಹೊಳೆಹೊಲ್ಲೂರು, ಆಲಮಟ್ಟಿ, ಯಾಳಗಿ ಮೊದಲಾದ ಸ್ಟೇಶನ್‍ಗ ಳು ವಿಶ್ವ ಗುಣಮಟ್ಟದೊಂದಿಗೆ ಆಧುನೀಕರಣಗೊಳ್ಳಲಿವೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ 50 ಸ್ಟೇಷನ್‍ಗಳ ಆಧುನೀಕರಣ ಮಾಡುತ್ತೇವೆ. ಅದಕ್ಕಾಗಿ ಡಬಲ್ ಎಂಜಿನ್ ಸರಕಾರ ಬೇಕು. ಎಂದು ಹೇಳಿದರು.
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಮಾತನಾಡಿ, ಅತಿ ಹೆಚ್ಚು ಸಂಸದರು, ಶಾಸಕರು, 18 ರಾಜ್ಯಗಳಲ್ಲಿ ಅಧಿಕಾರ ಪಡೆದ ದೊಡ್ಡ ಪಕ್ಷ ಎಂದರೆ ಅದು ಬಿಜೆಪಿ ಎಂದು ಹೇಳಿದರು.
100 ಜನ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಬಂದರೂ ಬಿಜೆಪಿಯನ್ನು ಸೋಲಿಸಲಾಗದು. ನಮ್ಮ ಪಕ್ಷದ ತಾಕತ್ತು ಕಾರ್ಯಕರ್ತರಲ್ಲಿದೆ. ಅದನ್ನು ಯಾರೂ ಎದುರಿಸಲು ಸಾಧ್ಯವಾಗದು ಎಂದು ಕಾಂಗ್ರೆಸ್ ವಿರುದ್ಧ ಗುಡುಗಿದರು.
ಇದೇ ವೇಳೆ ಮತಾಂಧತೆಯ ರಾಜಕಾರಣ ಮಾಡಿದ ಸಿದ್ದರಾಮಯ್ಯರಿಗೆ ಮತ್ತೆ ಅವಕಾಶ ಕೊಡದಿರಿ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಧ್ಯೇಯಕ್ಕಾಗಿ ಮತ್ತೆ ಬಿಜೆಪಿಯನ್ನು ಗೆಲ್ಲಿಸಿ ಎಂದು ಸಿ.ಟಿ.ರವಿ ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ , ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ಮಾಜಿ ಸಿಎಂ ಡಿ.ವಿ.ಸದಾನಂದಗೌಡ, ಸಂಸದ ಪಿ.ಸಿ.ಮೋಹನ್, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಎನ್.ರವಿಕುಮಾರ್, ಸಿದ್ದರಾಜು, ಪ್ರಕೋಷ್ಠಗಳ ರಾಜ್ಯ ಸಂಯೋಜಕ ಎಂ.ಬಿ. ಭಾನುಪ್ರಕಾಶ್, ಸಹ ಸಂಯೋಜಕ ಜಯತೀರ್ಥ ಕಟ್ಟಿ, ಡಾ. ಎ.ಹೆಚ್. ಶಿವಯೋಗಿಸ್ವಾಮಿ, ವಿಧಾನಪರಿಷತ್ ಸದಸ್ಯ ಮತ್ತು ಬೆಂಗಳೂರು ವಿಭಾಗ ಪ್ರಭಾರಿ ಹೆಚ್.ಎಸ್. ಗೋಪಿನಾಥ್ ರೆಡ್ಡಿ ಅವರು ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!