ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವ EV (ಎಲೆಕ್ಟ್ರಿಕ್ ವಾಹನ) ದಿನ ಅಂಗವಾಗಿ ಭಾರತೀಯ ಅಟೋಮೊಬೈಲ್ ಸೊಸೈಟಿ ಹಮ್ಮಿಕೊಂಡಿದ್ದ ಎರಡನೇ ಆವೃತ್ತಿಯ ಎಲೆಕ್ಟ್ರಿಕ್ ವಾಹನಗಳ ರ್ಯಾಲಿ ಯನ್ನು ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ದೆಹಲಿಯ ಭಾರತ್ ಮಂಟಪದಲ್ಲಿ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನಂತೆ 2030ರ ವೇಳೆಗೆ 30% ರಷ್ಟು ಎಲೆಕ್ಟ್ರಿಕ್ ವಾಹನಗಳನ್ನು ಬಳಕೆ ಮಾಡಲು ಗುರಿ ನಿಗದಿಪಡಿಸಲಾಗಿದ್ದು, ಆ ಗುರಿ ಮುಟ್ಟಲು ಸರ್ವ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದರು.
ಪ್ರಧಾನಿಗಳು ನಿಗದಿಪಡಿಸಿರುವ ಗುರಿ ಮುಟ್ಟಲು ಈಗಾಗಲೇ ಅನೇಕ ನೀತಿಗಳನ್ನು ರೂಪಿಸಲಾಗಿದ್ದು, ಹಲವಾರು ಉಪಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಎಲೆಕ್ಟ್ರೀಕ್ ವಾಹನ (EV) ಉದ್ಯಮವೂ ಭಾರತದಲ್ಲಿ ವೇಗಗತಿಯಲ್ಲಿ ಬೆಳೆಯುತ್ತಿದೆ ಎಂದು ಅವರು ಹೇಳಿದರು.
ಮುಂದಿನ ಪೀಳಿಗೆಯ ಇಂಧನ ಕ್ಷಮತೆ ತಂತ್ರಜ್ಞಾನ ಅಭಿವೃದ್ಧಿಗೆ ಒತ್ತು ನೀಡುವ ಹಿನ್ನೆಲೆಯಲ್ಲಿ ಸುಧಾರಿತ ಬ್ಯಾಟರಿ ಸೇಲ್‌ಗಳಿಗೆ (ACC) ಪ್ರೋಡಕ್ಷನ್ ಲಿಂಕ್ಡ್ ಇನ್ಸೆಂಟಿವ್ ((PLI) ಯೋಜನೆಯನ್ನು ಜಾರಿ ಮಾಡಲಾಗಿದೆ ಎಂದ ಸಚಿವರು; ₹18,100 ಕೋಟಿ ಗುರಿಯ ಅನುದಾನ ಹೊಂದಿರುವ ಈ ಯೋಜನೆಯು 50 ಗಿಗಾ ವಾಟ್-ಗೋಚಾರ್ (GWh) ಉತ್ಪಾದನಾ ಸಾಮರ್ಥ್ಯವನ್ನು ಹೊಂದಲು ಉದ್ದೇಶಿಸಲಾಗಿದೆ. ಮೂರು ಕಂಪನಿಗಳು ಈಗಾಗಲೇ 30 GWh ನೀಡಲು ಸಾಮರ್ಥ್ಯ ಹೊಂದಿವೆ ಎಂದರು.
FAME-II ಯೋಜನೆಯು ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ವಾಹನಗಳ ತಯಾರಿಕೆಗೆ ಕೊಡಲಾಗುತ್ತಿರುವ ಪ್ರೋತ್ಸಾಹವನ್ನು ಮುಂದುವರಿಸಲಾಗುವುದು. ಇದಕ್ಕೆ ₹15,500 ಕೋಟಿ ಹಣವನ್ನು ಒದಗಿಸಲು ಬಜೆಟ್ ನಿರ್ಧರಿಸಲಾಗಿದ್ದು , ಮಾಲಿನ್ಯ ಕಡಿಮೆ ಮಾಡುವುದು ಮತ್ತು ದೇಶಾದ್ಯಂತ ಸಾರ್ವಜನಿಕ ಸಾರಿಗೆಯನ್ನು ವಿದ್ಯುದೀಕರಿಸಲು ಈ ಮೊತ್ತವನ್ನು ಮೀಸಲಿಡಲಾಗಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ರ‍್ಯಾಲಿಗೆ ಹಸಿರು ನಿಶಾನೆ ತೋರಿಸುವ ಮುನ್ನ ಅವರು ಎಲೆಕ್ಟ್ರಿಕ್ ಆಟೋವನ್ನು ಚಾಲನೆ ಮಾಡಿದರು. ನಂತರ ಎಲೆಕ್ಟ್ರಿಕ್ ದ್ವಿಚಕ್ರ ವಾಹನವನ್ನು ಚಾಲನೆ ಮಾಡಿದರು.