Thursday, July 7, 2022

Latest Posts

ಪೆಗಾಸಸ್ ಸ್ಪೈವೇರ್ ಆರೋಪ: ಇದು ಭಾರತೀಯ ಪ್ರಜಾಪ್ರಭುತ್ವವನ್ನು ಅಪಖ್ಯಾತಿಗೊಳಿಸುವ ಯತ್ನ ಎಂದ ಕೇಂದ್ರ ಸಚಿವ ವೈಷ್ಣವ್‌

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಸಂಸತ್ ನ ಉಭಯ ಕಲಾಪಗಳಲ್ಲಿ ಭಾರಿ ಕೋಲಾಹಲಕ್ಕೆ ಕಾರಣವಾಗಿರುವ ಪೆಗಾಸಸ್ ಸ್ಪೈ ವೇರ್ ಆರೋಪದ ಕುರಿತು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಸ್ಪಷ್ಟನೆ ನೀಡಿದೆ.

ಇಸ್ರೇಲ್‌ ಮೂಲದ ಸ್ಪೈ ವೇರ್ ಬಳಸಿ 40ಕ್ಕೂ ಹೆಚ್ಚು ಪತ್ರಕರ್ತರ, ರಾಜಕಾರಣಿಗಳ ಮೊಬೈಲ್‌ ಫೋನ್‌ ಗಳನ್ನು ಹ್ಯಾಕ್‌ ಮಾಡಲಾಗಿದೆ ಎಂಬ ವಿಸ್ತೃತ ಸರಣಿ ವರದಿಗಳನ್ನು ಉಲ್ಲೇಖಿಸಿ ವಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ಇದಕ್ಕೆ ಕೇಂದ್ರ ಸರ್ಕಾರ ತಿರುಗೇಟು ನೀಡಿದೆ.

ಸಂಸತ್ ಅಧಿವೇಶನದಲ್ಲಿ ಈ ಕುರಿತು ಮಾತನಾಡಿದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು, ಈ ಹಿಂದೆ, ವಾಟ್ಸಾಪ್ ನಲ್ಲಿ ಪೆಗಾಸಸ್ ಬಳಕೆಗೆ ಸಂಬಂಧಿಸಿದಂತೆ ಇದೇ ರೀತಿಯ ಆರೋಪಗಳನ್ನು ಮಾಡಲಾಗಿತ್ತು. ಆ ವರದಿಗಳಿಗೆ ಯಾವುದೇ ವಾಸ್ತವಿಕ ಆಧಾರವಿರಲಿಲ್ಲ. ಜುಲೈ 18 2021 ರ ಪತ್ರಿಕಾ ವರದಿಗಳು ಭಾರತೀಯ ಪ್ರಜಾಪ್ರಭುತ್ವ ಮತ್ತು ಅದರ ಸುಸ್ಥಾಪಿತ ಸಂಸ್ಥೆಗಳನ್ನು ಕೆಣಕುವ ಪ್ರಯತ್ನವೆಂದು ತೋರುತ್ತದೆ. ಹೆಚ್ಚು ಸಂವೇದನಾಶೀಲ ಕಥೆಯನ್ನು ಕಳೆದ ರಾತ್ರಿ ವೆಬ್ ಪೋರ್ಟಲ್ ಪ್ರಕಟಿಸಿದೆ. ಈ ಕಥೆಯ ಸುತ್ತಲೂ ಅನೇಕ ಆರೋಪಗಳು ಕೇಳಿ ಬರುತ್ತಿವೆ. ಸಂಸತ್ತಿನ ಮಾನ್ಸೂನ್ ಅಧಿವೇಶನಕ್ಕೆ ಒಂದು ದಿನ ಮೊದಲು ಪತ್ರಿಕಾ ವರದಿಗಳು ಪ್ರಕಟವಾಗಿವೆ ಎಂದು ಹೇಳುವ ಮೂಲಕ ವರದಿಯ ಹಿಂದೆ ಕಾಣದ ಕೈಗಳ ಕೈವಾಡವಿರಬಹುದು ಎಂದು ಸಚಿವರು ಶಂಕಿಸಿದ್ದಾರೆ.

ಭಾರತೀಯ ಪ್ರಜಾಪ್ರಭುತ್ವವನ್ನು ಅಪಖ್ಯಾತಿಗೊಳಿಸಲು ನಡೆಸುತ್ತಿರುವ ಪ್ರಯತ್ನಗಳಿವು. ಪ್ರಸ್ತುತ ದೇಶದ ಪ್ರತಿಯೊಂದು ಅಂಶಗಳಿಗೆ ಸಂಬಂಧಿಸಿದಂತೆ ಕಠಿಣ ನಿಯಮ, ನಿಬಂಧನೆಗಳಿವೆ. ಅಕ್ರಮವಾಗಿ ಫೋನ್ ಹ್ಯಾಕಿಂಗ್‌ ಮಾಡುವುದು ಅಸಾಧ್ಯ ಎಂದು ಅವರು ಕಲಾಪಕ್ಕೆ ಸ್ಪಷ್ಟಪಡಿಸಿದರು. ಇದೇ ಸಮಯದಲ್ಲಿ ವಿರೋಧ ಪಕ್ಷಗಳು ಘೋಷಣೆಗಳನ್ನು ಕೂಗಿ ಗದ್ದಲ ಎಬ್ಬಿಸಿದರು. ಕಲಾಪ ತಹಬದಿಗೆ ಬಾರದ ಹಿನ್ನೆಲೆಯಲ್ಲಿ ಸ್ಪೀಕರ್‌ ಓಂ ಬಿರ್ಲಾ ಅವರು ಕಲಾಪವನ್ನು ನಾಳೆಗೆ ಮುಂದೂಡಿದರು.

ಕೇಂದ್ರ ಸರ್ಕಾರದ ಇಬ್ಬರು ಸಚಿವರು, ಮೂವರು ವಿಪಕ್ಷ ನಾಯಕರು, ಓರ್ವ ನ್ಯಾಯಾಧೀಶರು, ಉದ್ಯಮಿಗಳು, ಚಳವಳಿಗಾರರು ಹಾಗೂ 40ಕ್ಕೂ ಅಧಿಕ ಪತ್ರಕರ್ತರು ಸೇರಿ 300ಕ್ಕೂ ಹೆಚ್ಚು ಮಂದಿಯ ಮೊಬೈಲ್‌ ಸಂಖ್ಯೆಗಳು ಹ್ಯಾಕ್‌ ಆಗಿದ್ದ ಮಾಹಿತಿ ನಿನ್ನೆಯಷ್ಟೇ ಬಹಿರಂಗವಾಗಿತ್ತು.ಸರ್ಕಾರಕ್ಕೆ ಮಾತ್ರ ಮಾರಾಟ ಮಾಡುವ ಇಸ್ರೇಲ್‌ ಮೂಲದ ಕಣ್ಗಾವಲು ಕಂಪನಿ ಎನ್ಎಸ್‌ಒ ಗ್ರೂಪ್‌ನ ಪೆಗಾಸಸ್‌ ಸಾಫ್ಟ್‌ವೇರ್‌ನಿಂದ ಈ ಮೊಬೈಲ್‌ ಸಂಖ್ಯೆಗಳು ಹ್ಯಾಕ್‌ ಆಗಿವೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳ ಒಕ್ಕೂಟ ವರದಿ ಮಾಡಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss