ಹೊಸ ದಿಗಂತ ವರದಿ, ಕುಶಾಲನಗರ:
ಅಪರಿಚಿತ ವಾಹನ ಡಿಕ್ಕಿಯಾಗಿ ಪಾದಚಾರಿಯೊಬ್ಬರು ಸಾವಿಗೀಡಾಗಿರುವ ಘಟನೆ ಇಲ್ಲಿಗೆ ಸಮೀಪದ ಕೂಡ್ಲೂರು ಕೈಗರಿಕಾ
ಕೇಂದ್ರದ ಬಳಿ ಶುಕ್ರವಾರ ರಾತ್ರಿ ನಡೆದಿದೆ.
ಮೃತರನ್ನು ಮೈಸೂರು ಜಿಲ್ಲೆಯ ದಿಂಡಿಗಾಡು ಗ್ರಾಮದ ಸೋಮಪ್ಪ ಎಂಬವರ ಪುತ್ರ ಪ್ರಸನ್ನ ಕುಮಾರ್ (30) ಎಂದು ಗುರುತಿಸಲಾಗಿದೆ.
ಕುಶಾಲನಗರ-ಹಾಸನ ರಾಜ್ಯ ಹೆದ್ದಾರಿಯ, ಕೂಡ್ಲೂರು ಕೈಗಾರಿಕಾ ಕೇಂದ್ರದಲ್ಲಿರುವ ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯ ಎದುರಿನಲ್ಲೇ ಈ ದುರ್ಘಟನೆ ನಡೆದಿದ್ದು, ವಾಹನ ಡಿಕ್ಕಿಯಾದ ರಭಸಕ್ಕೆ ಪ್ರಸನ್ನ ಕುಮಾರ್ ರಸ್ತೆಯಿಂದ ಚರಂಡಿಗೆ ಬಿದ್ದು ಸಾವನ್ನಪ್ಪಿರುವುದಾಗಿ ಹೇಳಲಾಗಿದೆ.
ಮೃತ ದೇಹವನ್ನು ಕುಶಾಲನಗರದ ಶವಗಾರದಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ಆತನ ದೇಹದ ಮೇಲೆ ವಾಹನದ ಚಕ್ರ ಹತ್ತಿರುವ ಗುರುತು ಕಂಡು ಬಂದಿರುವ ಹಿನ್ನೆಲೆಯಲ್ಲಿ ವಾಹನ ಡಿಕ್ಕಿಯಾಗಿ ಆತ ಸಾವಿಗೀಡಾಗಿರುವುದಾಗಿ ಅಂದಾಜಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಕುಶಾಲನಗರ ಸಂಚಾರಿ ಪೊಲೀಸ್ ಠಾಣೆ ಪೊಲೀಸರು ಸಿಸಿಟಿವಿ ಮೂಲಕ ವಾಹನ ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದಾರೆ.